ಧಾರವಾಡ: ಸಾಹಿತಿಗಳ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಸಬೇಕೋ ಅಥವಾ ಕೃಷಿ ವಿವಿಯಲ್ಲಿ ನಡೆಸಬೇಕೋ ಎನ್ನುವ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಸಮಿತಿಗಳ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮುಂಚೆ ಕೆಸಿಡಿಯಲ್ಲೇ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲಿ ಜಾಗದ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಸ್ಥಳ ಬದಲಿಸುವ ಚಿಂತನೆ ಇದೆ. ಆದರೆ ಇದು ಸಾಹಿತಿಗಳ ಹಬ್ಬ. ಅವರು ಈ ಮುಂಚೆಯೇ ಕೆಸಿಡಿಯಲ್ಲಿ ಮಾಡಿದರೆ ಸೂಕ್ತ ಎಂದು ಸಲಹೆ ನೀಡಿದ್ದರು. ಇದೀಗ ಅವರ ಅಭಿಪ್ರಾಯವನ್ನು ಮತ್ತೊಮ್ಮೆ ಕೇಳುತ್ತೇವೆ. ಆ ನಂತರ ಜಾಗ ಬದಲಾಯಿಸುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.
ಕೆಸಿಡಿಯಾದರೆ ಸೂಕ್ತ ಎನ್ನುವ ಅಭಿಪ್ರಾಯ ಈಗಲೂ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕಾಗಿಯೇ ಮಂಗಳವಾರ ಮತ್ತೆ ಕೆಸಿಡಿ ಸುತ್ತಲಿನ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಆವರಣ, ರೈಲ್ವೆ ಮೈದಾನ ಮತ್ತು ಸಭಾಭವನಗಳನ್ನು ವೀಕ್ಷಣೆ ಮಾಡಿಕೊಂಡು ಬರಲಾಗಿದೆ. ಒಟ್ಟಾರೆ ಈ ಕುರಿತು ನ.17ರೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜಕಾರಣಿಗಳೇ ಅಧ್ಯಕ್ಷರು: ಉಪಸಮಿತಿಗಳಿಗೆ ಚುನಾಯಿತ ಪ್ರತಿನಿ ಧಿಗಳನ್ನು ಅಧ್ಯಕ್ಷರನ್ನಾಗಿ, ವಿವಿಧ ಇಲಾಖೆಯ ಅಧಿಕಾರಿಗಳನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾರ್ಯಾಧ್ಯಕ್ಷರು ಚುನಾಯಿತ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಉಪಸಮಿತಿ ಸಭೆ ನಡೆಸಬೇಕು. ಸಮಿತಿಯ ನಡಾವಳಿ ಹಾಗೂ ಸಲಹೆಗಳನ್ನು ಕ್ರಿಯಾ ಯೋಜನೆ ಅಥವಾ ಪ್ರಸ್ತಾವನೆ ರೂಪದಲ್ಲಿ ಮುಖ್ಯ ಸಮಿತಿಗೆ ಸಲ್ಲಿಸಬೇಕು. ಈಗಾಗಲೇ ಸಮ್ಮೇಳನ ಸಿದ್ಧತೆಗಾಗಿ ಹಲವು ಸುತ್ತಿನ ಸಭೆ ನಡೆಸಲಾಗಿದೆ. ಉಪಸಮಿತಿಗಳು ತಮ್ಮ ಸದಸ್ಯರನ್ನೊಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ಗಳನ್ನು ರಚಿಸಿಕೊಂಡು ನಿರಂತರವಾಗಿ ಸಂಪರ್ಕದಲ್ಲಿರಬೇಕು. ಯಾವುದೇ ಸಂದೇಹ ಅಥವಾ ಮಾರ್ಗದರ್ಶನ ಬೇಕಿದ್ದರೆ ತ್ವರಿತವಾಗಿ ಮುಖ್ಯ ಸಮಿತಿ ಅಥವಾ ಸ್ವಾಗತ ಸಮಿತಿಗೆ ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು ಎಂದರು.
ಶಿಷ್ಟಾಚಾರ ಪ್ರಕಾರವೇ ನಡೆಯಲಿ: ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಸತೀಶ್.ಬಿ.ಸಿ. ಮಾತನಾಡಿ, ವೇದಿಕೆಯ ಕಾರ್ಯಕ್ರಮ ಆಮಂತ್ರಣ ಪತ್ರಿಕೆಯನ್ನು ರೂಪಿಸುವುದರಿಂದ ಹಿಡಿದು ಎಲ್ಲ ಕಾರ್ಯಗಳು ಶಿಷ್ಟಾಚಾರದ ಪ್ರಕಾರ ನಡೆಯಬೇಕು. ಈಗಾಗಲೇ ಹಿಂದಿನ ಸಮ್ಮೇಳನ ಮತ್ತು ಸರ್ಕಾರದ ಇತರ ಬೃಹತ್ ಕಾರ್ಯಕ್ರಮಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಅಧಿಕಾರಿಗಳು ತಮ್ಮ ಅನುಭವಗಳನ್ನು ಆಧರಿಸಿ ಸಲಹೆಗಳನ್ನು ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಮಹಾನಗರ ಉಪಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಕೊರವರ, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿ ಕಾರಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಭೆಯಲ್ಲಿದ್ದರು.
15 ವಿವಿಧ ಉಪಸಮಿತಿ ರಚನೆ
ಸಮ್ಮೇಳನ ಆಯೋಜನೆಗೆ 15 ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಚುನಾಯಿತ ಪ್ರತಿನಿಧಿ ಗಳು, ಕಸಾಪ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ. ನ.17ರೊಳಗೆ ಉಪಸಮಿತಿಗಳು ತಮ್ಮ ಸಭೆಗಳನ್ನು ನಡೆಸಿ ಸಭೆಯ ನಡಾವಳಿಗಳನ್ನು ಸಲ್ಲಿಸಬೇಕು. ಸ್ವಾಗತ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಮತ್ತೊಂದು ಸಭೆ ನಡೆಸಲಾಗುವುದು. ಸಮ್ಮೇಳನ ಯಶಸ್ಸಿಗೆ ಎಲ್ಲ ಸಮಿತಿಗಳು ತಮ್ಮ ಕರ್ತವ್ಯಗಳನ್ನು ಮರ್ಥವಾಗಿ ನಿರ್ವಹಿಸುವುದು ಮುಖ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.