Advertisement

ಪಾರಂಪರಿಕ ನಡಿಗೆ ಸಂಸ್ಕೃತಿಗೆ ಸಹಕಾರಿ: ದೀಪಾ ಚೋಳನ್‌

11:30 AM Jan 03, 2019 | |

ಧಾರವಾಡ: ಶ್ರೀಮಂತವಾಗಿರುವ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ, ಸಂಘ-ಸಂಸ್ಥೆ, ಕಲೆ, ಸಂಗೀತ, ಸ್ಮಾರಕಗಳ ಇತಿಹಾಸ, ಪರಂಪರೆ ತಿಳಿಯಲು ಪಾರಂಪರಿಕ ನಡಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಕರ್ನಾಟಕ ಕಲಾ ಮಹಾವಿದ್ಯಾಲಯ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಧಾರವಾಡ ನಗರ ಇತಿಹಾಸದ ಪುಟಗಳಲ್ಲಿ ಅನೇಕ ಮಹತ್ವದ ಘಟನೆಗಳಿಂದ ದಾಖಲಾಗಿದೆ. ಇಲ್ಲಿನ ಪ್ರತಿಯೊಂದು ಕಟ್ಟಡ, ಸಂಘ-ಸಂಸ್ಥೆಗಳ ಹುಟ್ಟು ರೋಚಕ ಇತಿಹಾಸವನ್ನು ಹೇಳುತ್ತದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಕೆಸಿಡಿ ಕಾಲೇಜು, ಡಯಟ್‌, ಚರ್ಚ್‌, ಬುದ್ಧ ರಕ್ಕಿತ ಶಾಲೆ ಹೀಗೆ ಪ್ರತಿಯೊಂದು ಸ್ಥಳಗಳು ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿ ಕಾಣುತ್ತವೆ. ಪಾರಂಪರಿಕ ನಡಿಗೆಯಿಂದ ನಮ್ಮ ಇತಿಹಾಸ, ನಾಡಿನ ಸಾಧನೆಗಳನ್ನು ನೆನಪಿಸುವ ಜೊತೆಗೆ ರಕ್ಷಣೆ ಜವಾಬ್ದಾರಿ, ಹೆಮ್ಮೆ ಹೆಚ್ಚುತ್ತದೆ ಎಂದು ಹೇಳಿದರು.

ಇಳಕಲ್‌ ಸೀರೆಯಲ್ಲಿ ಕಂಗೊಳಿಸಿದ ಡಿಸಿ ದೀಪಾ ಚೋಳನ್‌ ಅವರು ಜಗ್ಗಲಿ ಬಾರಿಸಿ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆಕಾಶವಾಣಿಗೆ ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ನಡಿಗೆಯಲ್ಲಿ ಆಗಮಿಸಿದ ಅವರು, ನಿಲಯ ನಿರ್ದೇಶಕ ಸತೀಶ್‌ ಪರ್ವತಿಕರ ಅವರಿಂದ ಆಕಾಶವಾಣಿ ಬೆಳೆದು ಬಂದ ಬಗ್ಗೆ ಮಾಹಿತಿ ಪಡೆದರು. ನಂತರ ಡಾ| ಮಲ್ಲಿಕಾರ್ಜುನ ಮನ್ಸೂರ ಟ್ರಸ್ಟ್ ಗೆ ತೆರಳಿ ಮನ್ಸೂರ ಅವರ ಸಮಾ ಧಿಗೆ ನಮನ ಸಲ್ಲಿಸಿ ಅವರ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು. ನಂತರ 1888ರಲ್ಲಿ ಸ್ಥಾಪಿತವಾದ ಆಲ್‌ ಸೇಂಟ್ಸ್‌ ಚರ್ಚ್‌ಗೆ ಭೇಟಿ ನೀಡಿದರು. ಅಲ್ಲಿಂದ ಕೆ.ಸಿ. ಪಾರ್ಕ್‌ ಮಾರ್ಗವಾಗಿ ಡಾ| ಬಿ.ಆರ್‌. ಅಂಬೇಡ್ಕರ ಸ್ಥಾಪಿಸಿದ್ದ ಬುದ್ಧ ರಕ್ಕಿತ ವಸತಿ ಶಾಲೆಗೆ ತೆರಳಿ ಮಾಹಿತಿ ಪಡೆದರು. ನಂತರ ಧಾರವಾಡ ಗ್ರಾಮದೇವತೆ ದುರ್ಗಾದೇವಿ ಗುಡಿಗೆ ಭೇಟಿ ನೀಡಿದರು. ಮಹಾನಗರ ಪಾಲಿಕೆ, ವಸ್ತು ಸಂಗ್ರಹಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘ, ಟೌನ್‌ಹಾಲ್‌ಗೆ ತೆರಳಿ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಉಪವಿಭಾಗಾಧಿ ಕಾರಿ ಮಹ್ಮದ್‌ ಜುಬೇರ್‌, ಡಿಸಿಪಿ ಬಿ.ಎಸ್‌. ನೇಮಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಕೆ.ಎಸ್‌. ಕೌಜಲಗಿ, ಡಾ| ಜಿನದತ್ತ ಹಡಗಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಪ್ರತಿನಿ ಧಿಗಳು, ಪ್ರಚಾರ ಸಮಿತಿ ಸದಸ್ಯರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next