Advertisement

ಕನಕರ ತತ್ವಗಳು ಬದುಕಿಗೆ ದಾರಿದೀಪ 

04:56 PM Dec 06, 2018 | |

ಧಾರವಾಡ: ಕನಕದಾಸರ ಜನನ, ಬದುಕು, ಬರಹ ಮತ್ತು ನೀಡಿದ ನೀತಿ, ತತ್ವಗಳು ಸಮಾಜದ ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ ಎಂದು ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು. ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ದಾಸ ಶ್ರೇಷ್ಠರಾದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹೀಗಾಗಿ ಕನಕದಾಸರಂತಹ ಶ್ರೇಷ್ಠ ಸಂತರ ಬದುಕು, ಬರಹ, ಗೀತೆಗಳು ಇಂದಿನ ಪೀಳಿಗೆಗೆ ಮಟ್ಟುವಂತೆ ಪಠ್ಯ-ಪುಸ್ತಕಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪವಾಡ ಪುರುಷ, ನಿಸ್ವಾರ್ಥ ಬದುಕಿನ ಸಮಾಜ ಸುಧಾರಕ ಕನಕದಾಸರ ಜಯಂತಿ ಆಚರಣೆ ಸಮಾಜದಲ್ಲಿ ಸಂತ ಪರಂಪರೆ ಬೆಳೆಸುವುದಾಗಿದೆ. ಸಂತ ಕನಕದಾಸರಂತಹ ಶ್ರೇಷ್ಠರು ನೀಡಿರುವ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸಿ ಮುಂದುವರಿಸೋಣ ಎಂದು ತಿಳಿಸಿದರು.

ಕನಕದಾಸರ ಜೀವನ ಹಾಗೂ ಚಿಂತನೆಗಳ ಕುರಿತು ಬಸವರಾಜ ಪಾಟೀಲ ಮಾತನಾಡಿ, ಈ ನಾಡಿನಲ್ಲಿ ಸಾಮರಸ್ಯ, ಸಮಾನತೆ, ವ್ಯಕ್ತಿ ಮೌಲ್ಯ ಸಾರಿ ಜೀವನದುದ್ದಕ್ಕೂ ಹೋರಾಡಿದ ಇಬ್ಬರು ಶ್ರೇಷ್ಠರಾದ ಬಸವಣ್ಣ ಮತ್ತು ಕನಕದಾಸರು ಗುರಿ ಒಂದೇ ಆಗಿದ್ದರೂ ಕ್ರಮಿಸಿದ ದಾರಿ ಭಿನ್ನವಾಗಿತ್ತು ಎಂದರು.

ತಳ ಸಮುದಾಯದಿಂದ ಹುಟ್ಟಿ ಬಂದ ಕನಕದಾಸರು ಸಮಾಜದಲ್ಲಿ ಸಮಾನತೆ, ಸಾಮರಸ್ಯ ತರಲು ಏಕಾಂಗಿಯಾಗಿ ಹೋರಾಡಿದರು. ಅದ್ಭುತವಾದ ಜೀವನ ಮೌಲ್ಯಗಳನ್ನು ಸಾರಿದ ಶ್ರೇಷ್ಠ ಧ್ವನಿಯಾಗಿ ಕನಕದಾಸರು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಬಸವಣ್ಣನವರು ಮೇಲ್ವರ್ಗದಲ್ಲಿ ಹುಟ್ಟಿ, ಶರಣರೊಂದಿಗೆ ಸಮಾಜದ ಸಾಮರಸ್ಯ, ವ್ಯಕ್ತಿ ಸ್ವಾತಂತ್ರ್ಯ ಕಾಯಕ ಮಹತ್ವ ಸಾರಲು ಶ್ರಮಿಸಿದರೂ ಕನಕದಾಸರ ಮನೋಭಾವ ಮತ್ತು ಏಕಾಂಗಿ ಹೋರಾಟ ನಮಗೆ ವಿಭಿನ್ನವಾಗಿ ಕಾಣುತ್ತದೆ ಎಂದರು.

ತಹಶೀಲ್ದಾರ್‌ ಪ್ರಕಾಶ ಕುದರಿ, ಹಿರಿಯ ಅಧಿಕಾರಿಗಳಾದ ಮುನಿರಾಜು, ಬಸವರಾಜ ವರವಟ್ಟಿ, ಆರ್‌.ಎಸ್‌. ಮುಳ್ಳೂರ ಮತ್ತು ಹಿರಿಯ ಮುಖಂಡರಾದ ಯಲ್ಲಮ್ಮ ನಾಯ್ಕರ್‌, ಡಾ| ಲೋಹಿತ್‌ ನಾಯ್ಕರ್‌, ನಾಗರಾಜ ಗುರಿಕಾರ, ದೇವರಾಜ ಕಂಬಳಿ, ಪ್ರಕಾಶ ಉಡಕೇರಿ, ರಾಜಶ್ರೀ ಸಾಲಗಟ್ಟಿ ಸೇರಿದಂತೆ ಹಲವರು ಇದ್ದರು. ಎಸ್‌.ಕೆ. ರಂಗಣ್ಣವರ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಡಾ| ಲೋಹಿತ್‌ ನಾಯ್ಕರ್‌ ವಂದಿಸಿದರು.

Advertisement

ಬಹುಮಾನ ವಿತರಣೆ
ನ.13ರಂದು ನಡೆದ ಜಿಲ್ಲಾಮಟ್ಟದ ಕನಕದಾಸರ ಜಯಂತಿ ಸಮಾರಂಭದಲ್ಲಿ ಜಿಲ್ಲಾಮಟ್ಟದ ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಯರಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವನಿತಾ ಶಿ. ಹಿರೇಮಠ, ಹುಬ್ಬಳ್ಳಿ ನೇಕಾರ ನಗರದ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ ಬಸವರಾಜ ಶಿರೋಳ, ಉಪ್ಪಿನಬೆಟಗೇರಿಯ ಎಸ್‌ಜೆವಿ ಪ್ರೌಢಶಾಲೆಯ ಗಂಗೋತ್ರಿ ವಿರೂಪಾಕ್ಷಪ್ಪ ಯಾವಗಲ್‌, ಕುಂದಗೋಳದ ಸದ್ಗುರು ಶಿವಾನಂದ ಬಾಲಿಕಾ ಪ್ರೌಢಶಾಲೆಯ ಶ್ರೀದೇವಿತಿ. ಹಳೇಮನಿ, ಕಲಘಟಗಿ ಚಳಮಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಲ್ಪಾ. ನಿ. ಮೋರೆ ಅವರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next