ಧಾರವಾಡ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಧಾರವಾಡದವರೂ ಮುಂಚೂಣಿಯಲ್ಲಿದ್ದರು. ಬ್ರಿಟಿಷರ ಆಡಳಿತ ವಿರೋಧಿಸಿ ಸ್ವಾತಂತ್ರ್ಯ ಚಳವಳಿಯ ಬೀಜ ಬಿತ್ತಿದ ನೆಲ ನಮ್ಮದು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಆರ್.ಎನ್. ಶೆಟ್ಟಿ ಕ್ರಿಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಕ್ರಿಶ 1824ರಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಯುದ್ಧ ಪರಿಕರಗಳನ್ನು ಬಳಸಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು ಎಂದರು.
ಮಂಡರಗಿ ಭೀಮರಾಯ, ಹಲಗಲಿಯ ಬೇಡರು, ಕೊಡಗಿನ ಚಿಕ್ಕವೀರರಾಜ, ಸುರಪುರದ ರಾಜಾ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬರು ಹೀಗೆ ಅನೇಕರ ನೇತೃತ್ವದಲ್ಲಿ ಕೆಚ್ಚೆದೆಯ ಸಶಸ್ತ್ರ ಸಂಗ್ರಾಮ ನಮ್ಮ ನಾಡಿನಲ್ಲಿ ನಡೆಯಿತು. 1921ರ ಜೂ. 30ರಂದು ಧಾರವಾಡದ ಸೇಂದಿ ಅಂಗಡಿಯೊಂದರ ಮುಂದೆ ಶಾಂತವಾಗಿ ಹೋರಾಟ ನಡೆಸಿದ್ದ ಮೂವರು ಬ್ರಿಟಿಷರ ಗುಂಡಿಗೆ ಬಲಿಯಾದರು. ಇನ್ನೂ 1930ರಲ್ಲಿ ದಂಡಿಯ ಉಪ್ಪಿನ ಸತ್ಯಾಗ್ರಹದಲ್ಲಿ ನಮ್ಮ ಆಗಿನ ಅವಿಭಜಿತ ಧಾರವಾಡ ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಸ್ಮರಣೀಯ ಎಂದರು.
ರಾಷ್ಟ್ರಧ್ವಜ ನಮ್ಮ ಹೆಮ್ಮೆ: ರಾಷ್ಟ್ರಧ್ವಜ ತಯಾರಿಕೆಗೆ ಬೇಕಾಗುವ ಶ್ರೇಷ್ಠ ಗುಣಮಟ್ಟದ ಖಾದಿ ಬಟ್ಟೆ ಧಾರವಾಡ ತಾಲೂಕಿನ ಗರಗ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ತಯಾರಾಗುತ್ತಿದೆ. ಇನ್ನೂ ಬಿಐಎಸ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಕಳೆದ 14 ವರ್ಷಗಳಿಂದ ತ್ರಿವರ್ಣ ಧ್ವಜಗಳನ್ನು ಸಿದ್ಧಪಡಿಸಿ ದೇಶದೆಲ್ಲೆಡೆ ಪೂರೈಕೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಅತಿವೃಷ್ಟಿ ಸವಾಲು: ಸತತವಾಗಿ ಕಳೆದ 4-5 ವರ್ಷಗಳಿಂದ ಬರ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆ ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಆ. 1ರಿಂದ 13ರ ವರೆಗೆ 53 ಮಿಮೀ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ವಾಸ್ತವಿಕವಾಗಿ 321 ಮಿಮೀ ಮಳೆಯಾಗಿ ಜಿಲ್ಲಾದ್ಯಂತ ಹಲವು ಸಂಕಷ್ಟಗಳು ಎದುರಾದವು. ನಾಲ್ವರು ಸಾವಿಗೀಡಾಗಿರುವುದು ದುರದೃಷ್ಟದ ಸಂಗತಿ. ಮೃತರ ಕುಟುಂಬಗಳ ವಾರಸುದಾರರಿಗೆ ಈಗಾಗಲೇ ತಲಾ 5 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 214 ಜಾನುವಾರುಗಳ ಜೀವಹಾನಿಯಾಗಿದ್ದು, ಪರಿಹಾರ ವಿತರಣೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ರೇಣುಕಾ ಇಬ್ರಾಹಿಂಪುರ, ಕರೆಪ್ಪ ಮಾದರ, ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಜಿಪಂ ಸಿಇಒ ಡಾ| ಬಿ.ಸಿ.ಸತೀಶ, ಎಸ್ಪಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಕೊರವರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಇದ್ದರು.