Advertisement
ಹೌದು, ಇಂದು ಭಾರತೀಯರು ಗೆಡ್ಡೆ ಗೆಣಸು ಎಷ್ಟು ತಿನ್ನುತ್ತಾರೋ ಗೊತ್ತಿಲ್ಲ. ಆದರೆ, ಇಂಗ್ಲೆಂಡ್, ಅಮೆರಿಕ ಸೇರಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಗೆಡ್ಡೆ ಮತ್ತು ಗೆಣಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದಕ್ಕಾಗಿ ಧಾರವಾಡದಲ್ಲಿ 52ಕ್ಕಿಂತಲೂ ಹೆಚ್ಚಿನ ತಳಿಯ ಆಹಾರ ಪದಾರ್ಥ ರೂಪದ ಗೆಡ್ಡೆ ಗೆಣಸುಗಳ ಸಂರಕ್ಷಣೆ ಮತ್ತು ಅವುಗಳಿಗೆ ಮೌಲ್ಯವರ್ಧನ ಮಾಡಿ ಬೆಳೆಯುವ ರೈತರಿಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಸದ್ದಿಲ್ಲದೇ ಸಾಗಿದೆ.
Related Articles
Advertisement
52 ಶ್ರೇಷ್ಠ ತಳಿಗಳ ಸಂಗ್ರಹ: ದೇಶದಲ್ಲಿರುವ ವಿಭಿನ್ನ ಬಗೆಯ 139 ತಳಿಯ ಗೆಡ್ಡೆ-ಗೆಣಸುಗಳನ್ನು ಇಲ್ಲಿ ಪ್ರಯೋಗಾತ್ಮಕವಾಗಿ ಬೆಳೆದು, ಅದರ ಬೀಜ ಸಂಗ್ರಹಿಸಲಾಗುತ್ತಿದೆ. ಜತೆಗೆ, ಈ ಕುರಿತು ಸಂಶೋಧನೆ ಕೂಡ ನಡೆಯುತ್ತಿದೆ. ಈ ಪೈಕಿ 4 ವರ್ಷಗಳಲ್ಲಿ (ಹೆಕ್ಟೇರ್‌ಗೆ 20 ಟನ್‌ಗೂ ಅಧಿಕ ಇಳುವರಿ ನೀಡುವ ತಳಿಗಳನ್ನು)ಉತ್ತಮ ಇಳುವರಿ ಮತ್ತು ಉತ್ತಮ ಪೋಷಕಾಂಶಗಳಿರುವ 52 ಅತ್ಯುತ್ತಮ ತಳಿಗಳನ್ನು ಆಯ್ಕೆ ಮಾಡಿ, ರೈತರಿಗೆ ಬೆಳೆಯಲು ನೀಡಲಾಗುತ್ತಿದೆ.
ಪಟಾಕಿಗೆ ಗೆಣಸಿನ ಪುಡಿ: ಪರಿಸರ ಸಂರಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟಾಕಿ, ನೈಸರ್ಗಿಕ ಬಣ್ಣಗಳ ತಯಾರಿಕೆಗೆ ಗೆಣಸಿನ ಪುಡಿ ಬಳಸುವ ಯತ್ನ ನಡೆಯುತ್ತಿದೆ. ಸಾಬೂನು ಪುಡಿ ಮತ್ತು ಇಸ್ತ್ರಿ ಬಟ್ಟೆಗಳಿಗೆ ಬಳಸುವ ಸ್ಟಾರ್ಚ್ ಅಂದರೆ, ಗಂಜಿಯ ಪುಡಿ, ಸೂಪ್ ಮತ್ತು ಸಾಬುದಾನಿ ತಯಾರಿಕೆ, ಪಿಸ್ತಾ ಸಿದ್ಧಗೊಳಿಸಿ ಅದನ್ನು ಔಷಧಿಗಳ ತಯಾರಿಕೆಗೆ ಬಳಸಿಕೊಳ್ಳುವುದು, ರಟ್ಟು ಮತ್ತು ದಪ್ಪ ಕಾಗದ ತಯಾರಿಕೆಗೆ ಬಳಸಿಕೊಳ್ಳುವುದು, ಬಟ್ಟೆ ತಯಾರಿಕಾ ಕಂಪನಿಗಳಲ್ಲಿ ರಾಸಾಯನಿಕಗಳಿಗೆ ಬದಲಾಗಿ ಗೆಣಸಿನ ಪುಡಿ ಬಳಕೆ, ಪರಿಸರಸ್ನೇಹಿ ಪಟಾಕಿಗಳ ಬಳಕೆಗೆ ಸಹಕಾರಿಯಾಗುವಂತೆ ಗೆಣಸನ್ನು ಅಭಿವೃದ್ಧಿಗೊಳಿಸಲು ಧಾರವಾಡದ ಗೆಡ್ಡೆ ಗೆಣಸು ಸಂಶೋಧನಾ ಕೇಂದ್ರ ತನ್ನ ಸಂಶೋಧನೆಗಳನ್ನು ಮುಂದುವರಿಸಿದೆ.
ಅಮೆರಿಕಕ್ಕೆ ನೆಗೆದ ನೇರಳೆ ಗೆಣಸು: ಭಾರತೀಯ ಆಹಾರ ಪದ್ಧತಿಯಲ್ಲಿ ನಂಬಿಕೆ ಇಟ್ಟಿರುವ ಅಮೆರಿಕನ್ನರು ಕೂಡ ಇಲ್ಲಿನ ಗೆಡ್ಡೆ-ಗೆಣಸಿಗೆ ಮನಸೋತಿದ್ದಾರೆ. 2018ರಲ್ಲಿ ಇದೇ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ನೇರಳೆ ತಿರುಳು ಬರುವ ಬಣ್ಣದ ಗೆಣಸೊಂದನ್ನು ಅಮೆರಿಕ ಮೂಲದ ಸಂಶೋಧನಾ ಕಂಪನಿ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಲಕ್ಷ, ಲಕ್ಷ ಹಣ ಕೊಟ್ಟು ಕೊಂಡುಕೊಂಡಿದೆ. ಅಲ್ಲಿನ ಆಹಾರ ಪೂರೈಕೆ ಕಂಪನಿಯೊಂದು ಇದನ್ನು ಬೆಳೆಸುತ್ತಿದ್ದು, ಇದೇ ಕೇಂದ್ರದಿಂದ ಆರೇಂಜ್ ಮತ್ತು ಅತಿ ಬಿಳಿ ಬಣ್ಣದ ಗೆಣಸಿಗೂ ಬೇಡಿಕೆ ಇಟ್ಟಿದೆ.
ಗೆಣಸು ಬೆಳೆಯುವ ರೈತರಿಗೆ ಉತ್ತಮ ಬೆಳೆ, ಬೆಲೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕದ ಗೆಣಸನ್ನು ಇಂಗ್ಲೆಂಡ್, ಅಮೆರಿಕ, ಕೆನಡಾದವರು ಹೆಚ್ಚು ಇಷ್ಟಪಡುತ್ತಿದ್ದಾರೆ. ನಮ್ಮವರೂ ನಮ್ಮ ಮೂಲ ಆಹಾರ ತಿನ್ನಬೇಕು ಎನ್ನುವುದು ನಮ್ಮ ಕಾಳಜಿ.-ಡಾ| ರಾಮಚಂದ್ರ ನಾಯಕ, ಮುಖ್ಯಸ್ಥರು, ಗೆಡ್ಡೆ-ಗೆಣಸು ಸಂಶೋಧನಾ ಕೇಂದ್ರ, ಧಾರವಾಡ * ಬಸವರಾಜ ಹೊಂಗಲ್