ಧಾರವಾಡ: ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಹೃದಯ ವೈಫಲ್ಯ ನಿರ್ವಹಣೆಯ ಕ್ಲಿನಿಕ್ ಆರಂಭಗೊಳಿಸಲಾಗಿದೆ ಎಂದು ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅತ್ಯಾಧುನಿಕ ಕ್ಲಿನಿಕ್ ಹೃದಯ ವೈಫಲ್ಯದಲ್ಲಿ ಪರಿಣಿತಿ ಹೊಂದಿರುವ ತರಬೇತಿ ಪಡೆದ ಹಿರಿಯ ಹೃದ್ರೋಗ ತಜ್ಞರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಪುನ ರ್ವಸತಿ ಸಿಬ್ಬಂದಿ ಸೇರಿದಂತೆ ತಜ್ಞರ ತಂಡ ಹೊಂದಿದೆ. ಈ ಕ್ಲಿನಿಕ್‌ನಲ್ಲಿ ವಿಶೇಷವಾಗಿ ಹೃದಯ ರೋಗ, ಕಸಿ, ಹೃದಯ ವೈಫಲ್ಯ ನಿರ್ವಹಣೆಯಲ್ಲಿ ಪರಿಣಿತ ತಜ್ಞರಾದ ಡಾ|ಅದಿತಿ ಸಿಂಘಿ ಅವರಿಂದ ರೋಗಿಗಳಿಗೆ ಸಮಾಲೋಚನೆ ಸೇವೆ ಸಿಗಲಿದೆ ಎಂದರು.
ಹಿರಿಯ ಹೃದ್ರೋಗ ತಜ್ಞ ಡಾ|ವಿವೇಕಾನಂದ ಗಜಪತಿ ಮಾತನಾಡಿ, ಹೃದಯ ವೈಫಲ್ಯ ನಿರ್ವಹಣೆಗಾಗಿ ಹೊಸ ಕ್ಲಿನಿಕ್ ಆರಂಭಿಸುವ ಮೂಲಕ ನಮ್ಮ ಬದ್ಧತೆಯನ್ನು ಮುಂದಿನ ಹಂತಕ್ಕೆ ಒಯ್ಯುತ್ತಿದ್ದೇವೆ. ನಮ್ಮ ತಜ್ಞರ ತಂಡದಿಂದ ಸರಿಯಾದ ಸಮಾಲೋಚನೆ, ಚಿಕಿತ್ಸೆ, ಮಾರ್ಗದರ್ಶನ, ಉನ್ನತಮಟ್ಟದ ಆರೈಕೆ ಯೊಂದಿಗೆ ಹೃದಯಾಘಾತದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ|ರವಿವರ್ಮ ಪಾಟೀಲ ಮಾತನಾಡಿ, ಹೃದಯಾಘಾತವು ಪ್ರಚಲಿತದಲ್ಲಿರುವ ಹೃದಯ ರಕ್ತನಾಳದ ಕಾಯಿಲೆಯಾಗಿದ್ದು, ಇದು ಅನಾರೋಗ್ಯ ಮತ್ತು ಮರಣದ ಹೆಚ್ಚಿನ ಅಪಾಯ ಹೊಂದಿದೆ. ಹೃದಯ ವೈಫಲ್ಯವು ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದು ದೈನಂದಿನ ಚಟುವಟಿಕೆಗಳಿಗೆ ದೇಹದ ಅಗತ್ಯಗಳನ್ನು ಪೂರೈಸಲು ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದ ಸ್ಥಿತಿ ಸಂಭವಿಸುತ್ತದೆ.
ಇಂತಹ ತುರ್ತು ಪರಿಸ್ಥಿತಿಯಂತಹ ಹೃದಯ ವೈಫಲ್ಯದ ರೋಗಿಗಳ ನೆರವಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ರೋಗಿಗಳ ಸ್ಥಿತಿಯ ಆಧಾರವಾಗಿರುವ ಕಾರಣಗಳ ಸಮಗ್ರ ಮೌಲ್ಯಮಾಪನ ಮತ್ತು ಎಲ್‌ವಿಎಡಿ ಅಥವಾ ಹೃದಯ ಕಸಿ ಸೇರಿದಂತೆ ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ನೀಡುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದುಂಡೇಶ ತಡಕೋಡ, ವಿನಾಯಕ ಸೇರಿದಂತೆ ಹಲವರು ಇದ್ದರು.
ಹೃದಯ ವೈಫಲ್ಯವನ್ನು ನಿರ್ವಹಿಸಲು ಹಠಾತ್ ಹೃದಯ ಸ್ತಂಭನ ಮತ್ತು ಪ್ರಗತಿಶೀಲ ಪಂಪ್ ವೈಫಲ್ಯದ ಅಪಾಯದಿಂದ ಹೆಚ್ಚಿನ ಮಟ್ಟದ ಕಾಳಜಿ ಮತ್ತು ಗಮನದ ಅಗತ್ಯವಿದೆ. ಈ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಹೆಚ್ಚಿನ ತೊಡಕುಗಳನ್ನು ತಡೆಗಟ್ಟಲು ಸರಿಯಾದ ಆರೈಕೆ ಮತ್ತು ನಿರ್ವಹಣೆ ಪಡೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಆರಂಭಿಸಿರುವ ಹೃದಯ ವೈಫಲ್ಯ ನಿರ್ವಹಣೆಯ ಕ್ಲಿನಿಕ್ ಸಹಕಾರಿಯಾಗಲಿದೆ.
ಡಾ|ಅದಿತಿ ಸಿಂಘ್ವಿ, ಹೃದಯ ವೈಫಲ್ಯ ನಿರ್ವಹಣೆಯ ಪರಿಣತ ತಜ್ಞರು.