Advertisement
ಈ ಘಟಿಕೋತ್ಸವದಲ್ಲಿ ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ, ರಾಜ್ಯಸಭಾ ಸದಸ್ಯರಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು, ಎಸ್‌ಡಿಎಂ ಮೆಡಿಕಲ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ 160, ಎಸ್‌ಡಿಎಂ ದಂತ ಮಹಾವಿದ್ಯಾಲಯದ 109, ಎಸ್‌ಡಿಎಂ ಪಿಸಿಯೋಥೆರೆಪಿ ವಿಭಾಗದ 47 ಹಾಗೂ ನರ್ಸಿಂಗ್ ವಿಭಾಗದ 95 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 411 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
Related Articles
Advertisement
ಇನ್ನು ಘಟಿಕೋತ್ಸವ ಭಾಷಣ ಮಾಡಿದ ಮಂಗಳೂರಿನ ಎನಪೋಯಾ ಡೀಮ್ಡ ವಿಶ್ವವಿದ್ಯಾಲಯದ ಕುಲಪತಿ ಡಾ|ಎಂ.ವಿಜಯಕುಮಾರ್ ಮಾತನಾಡಿ, ದೇಶದಲ್ಲಿ ಪ್ರತಿವರ್ಷ 1.30 ಲಕ್ಷ ನರ್ಸಿಂಗ್, 90 ಸಾವಿರ ಎಂಬಿಬಿಎಸ್, 30 ಸಾವಿರ ಬಿಡಿಎಸ್ ಪದವೀಧರು ಹೊರ ಬರುತ್ತಾರೆ. ಹೀಗಾಗಿ ಪದವಿ ಪಡೆದವರಿಗೆ ಕೆಲಸವೂ ಇಲ್ಲಿ ಖಾತ್ರಿಯಿಲ್ಲ. ಆದರೆ ಬದುಕಿನ ಯಶಸ್ಸಿನ ಹಾದಿಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂಬುದಾಗಿ ಪಾಲ್ಗೊಂಡು, ಹೊಸ ಮಜಲಿಗೆ ಪದವೀಧರರು ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದರು.
ಹೊಸತನ್ನು ಕಲಿಯುವುದು ಇಂದಿನ ಜಗತ್ತಿನಲ್ಲಿ ಅಗತ್ಯವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಗಳಿಸಲು ಬಯಸುತ್ತಾರೆ. ಆದರೆ ಆ ಗುರಿ ತಲುಪಲು ಎಂತಹ ಸೂಕ್ತ ಯೋಜನೆ ಸಿದ್ಧಪಡಿಸಿದ್ದಾರೆ ಎನ್ನುವುದು ಮುಖ್ಯವಾಗಿರುತ್ತದೆ ಎಂದ ಅವರು, ಪಡೆದ ಪದವಿಯೊಂದೇ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದರು.
ವೃತ್ತಿ ಬದುಕಿನ ಪ್ರತಿ ಹಂತದಲ್ಲೂ ಎದುರಾಗುವ ಸವಾಲು, ಪಡೆದ ಕೌಶಲ್ಯದ ಮೂಲಕ ಯಶಸ್ಸಿನ ದಾರಿಯಲ್ಲಿ ಸಾಗಲು ಸಾಧ್ಯ. ಬೇಕೋ ಅಥವಾ ಬೇಡವೋ ಒಬ್ಬರು ಮಾಡಿದ್ದನ್ನೇ ಹಲವರು ಅನುಸರಿಸಲು ಬಯಸುತ್ತಾರೆ. ಪಾಲಕರೂ ಅದನ್ನೇ ಉತ್ತೇಜಿಸುತ್ತಾರೆ. ಆದರೆ ಸಮಾಜಕ್ಕೆ ಏನು ಬೇಕು ಅಥವಾ ಯಾವುದು ಸರಿ ಎನ್ನುವುದು ಅರಿತು ಮಾಡುವುದೇ ಶ್ರೇಷ್ಠ. ಪದವಿ ಪಡೆಯುವದಷ್ಟೇ ಕೊನೆಯಲ್ಲ ಎಂದರು.
ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ನಿರಂಜನಕುಮಾರ ಮಾತನಾಡಿ, ವೃತ್ತಿಯಲ್ಲಿ ಸಾಧನೆ ಮಾಡುವ ವ್ಯಾಕುಲತೆ ಹೊಂದಿರಬೇಕು. ಇದು ಹೊಸ ಸಂಗತಿಗಳ ಕಲುಕೆಗೆ ಪ್ರೇರೇಪಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದರು. ಎಂಬಿಬಿಎಸ್ ಪದವೀಧರೆ ಪ್ರಿಯಾಂಕಾ ತಮ್ಮ ಅನುಭವ ಹಂಚಿಕೊಂಡರು. ಕುಲಸಚಿವ ಡಾ|ಚಿದೇಂದ್ರ ಶೆಟ್ಟರ, ಡಾ|ಶ್ರೀನಿವಾಸ ಪೈ, ಡಾ|ಸತ್ಯಬೋಧ ಗುತ್ತಲ, ಡಾ|ರಘುನಾಥ ಶಾನಭಾಗ, ಡಾ|ಎಸ್.ಕೆ. ಜೋಶಿ ಇದ್ದರು.
ವೃತ್ತಿ ಕೌಶಲ್ಯದೊಂದಿಗೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಕಲಿಕೆ ನಿರಂತರ ಪ್ರಕ್ರಿಯೆ. ಪದವಿ ಪಡೆದರೆ ಕಲಿಕೆ ಮುಗಿಯುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಸಂಶೋಧನೆ, ನೂತನ ತಂತ್ರಜ್ಞಾನ ಅಳವಡಿಸಿಕೊಂಡು ವೃತ್ತಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು.-ಡಾ|ಎಂ.ವಿಜಯಕುಮಾರ, ಕುಲಪತಿ ಎನಪೋಯಾ ಡೀಮ್ಡ ವಿಶ್ವವಿದ್ಯಾಲಯ, ಮಂಗಳೂರು.