ಕುಂದಗೋಳ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಡವರಿಗೆ, ಹಸಿವು ನೀಗಿಸುವ ಹಿತದೃಷ್ಟಿಯಿಂದ ನೀಡಿದ ಪಡಿತರ ಅಕ್ಕಿ ಅರ್ಹ ಫಲಾನುಭವಿಗಳಿಗೆ ನೀಡಬೇಕಾದ ನ್ಯಾಯಬೆಲೆ ಅಂಗಡಿಕಾರ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿದ್ದಾನೆ ಎಂದು ತಾಲೂಕಿನ ಬಿಳೆಬಾಳದ ಗ್ರಾಮಸ್ಥರು ಆರೋಪಿಸಿ ಪ್ರತಿಭಟಿಸಿದರು.
ತಾಲೂಕಿನ ಬಿಳೆಬಾಳ ಗ್ರಾಮದಲ್ಲಿ ಶನಿವಾರ ಗ್ರಾಮದ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದ ಬಿ.ಜಿ.ಪಾಟೀಲ ಎಂಬುವವರು ಬೀಳೆ ಬಾಳ ಗ್ರಾಮದ 62 ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳ ರೇಷನ್ ಅಕ್ಕಿ ನೀಡಿಲ್ಲ. ಇದರಿಂದ ಗ್ರಾಮಸ್ಥರು ಅಂಗಡಿಕಾರನನ್ನು ಕೇಳಲು ಹೋದರೆ ಪಡಿತರ ಖಾಲಿಯಾಗಿದೆ ಎಂದು ಸಬೂಬು ನೀಡಿದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಗೋದಾಮು ಪರಿಶೀಲಿಸಿದಾಗ ಅಲ್ಲಿ ಅಕ್ಕಿಯು ಇಲ್ಲಾ. ಸಾರ್ವಜನಿಕರಿಗೂ ವಿತರಿಸಿಲ್ಲ ಹಾಗಾದರೆ ಅಕ್ಕಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿ ಪ್ರತಿಭಟನೆಗೆ ಇಳಿದು ಸ್ಥಳಕ್ಕೆ ಆಹಾರ ನಿರೀಕ್ಷಕರು ಬರುವಂತೆ ಪಟ್ಟು ಹಿಡಿದರು.
ಕಳೆದ 20 ವರ್ಷದಿಂದ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಬಿ.ಜಿ.ಪಾಟೀಲ್ ಬಿಳೆಬಾಳ ಗ್ರಾಮದ 49 ಅಂತ್ಯೋದಯ ಕಾರ್ಡ ಹಾಗೂ 337 ಬಿಪಿಎಲ್ ಕಾರ್ಡದಾರರಿಗೆ ರೇಷನ್ ವಿತರಣೆಯಲ್ಲಿ ಹಲವು ವರ್ಷದಿಂದ ಪ್ರತಿ ಕಾರ್ಡ್ ಗೂ 1 ಕೆ ಜಿ ಅಕ್ಕಿ ಕಡಿತ ಮಾಡುತ್ತಾ ಬಂದಿದ್ದು. ಆಗಸ್ಟ್ ತಿಂಗಳು 62 ಪಡಿತರ ಚೀಟಿದಾರರಿಗೆ ಅಕ್ಕಿಯನ್ನೇ ನೀಡಿಲ್ಲ. ಈ ಅಕ್ಕಿಯನ್ನು ಅಂಗಡಿಕಾರನೇ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ರೇಷನ್ ಕೇಳಲು ಹೋದರೆ ಸರ್ವರ್ ಸಮಸ್ಯೆ ಇದೆ ಎಂದು ಉತ್ತರಿಸುತ್ತಾರೆ ಎಂದು ಗ್ರಾಮಸ್ಥರಾದ ಸರೋಜಾವ್ವ ಚಲವಾದಿ, ಇಸ್ಮಾಯಿಲ್ ಸಾಬ ಕಿಲ್ಲೇದಾರ, ಶಂಕ್ರಪ್ಪ ಚಲವಾದಿ, ರಾಜೇಸಾಬ ಕಿಲ್ಲೇದಾರ, ರಮೇಶ ಛಲವಾದಿ ಸೇರಿ ಅನೇಕರು ಆರೋಪ ಮಾಡಿದರು.
ಈ ತಿಂಗಳಲ್ಲಿ ಬಿಳೆಬಾಳ ಗ್ರಾಮದಲ್ಲಿರುವ 337 ಬಿಪಿಎಲ್ ರೇಷನ ಕಾರ್ಡ ಇದ್ದು, ಇದಕ್ಕೆ ಆಹಾರ ನಿರೀಕ್ಷಕರು 21.73 ಕ್ವಿಂಟಾಲ್ ಅಕ್ಕಿ ವಿತರಿಸಿದ್ದು. ಹಾಗೂ 49 ಅಂತ್ಯೋದಯ ಕಾರ್ಡಗೆ 7.49 ಕ್ವಿಂಟಾಲ್ ಅಕ್ಕಿ ಕುಂದಗೋಳ ಆಹಾರ ನೀರೀಕ್ಷರು ವಿತರಿಸಿದ್ದು. ಇಷ್ಟಾದರೂ ನ್ಯಾಯಬೆಲೆ ಅಂಗಡಿಕಾರ ಅರ್ಹ 62 ಅರ್ಹ ಫಲಾನುಭವಿಗಳಿಗೆ ರೇಷನ ಇಲ್ಲವೆಂದು ಅಂಗಡಿಕಾರ ಸಬೂಬು ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಆಹಾರ ನಿರೀಕ್ಷಕ ಶಂಕರ ಜೋಶಿ ಮಾತನಾಡಿ, 62 ಕುಟುಂಬಗಳಿಗೆ ಪಡಿತರ ಕೊಡಿಸುತ್ತೇನೆ ಹಾಗೂ ನ್ಯಾಯಬೆಲೆ ಅಂಗಡಿಕಾರನ ವರ್ತನೆ ಸರಿಯಾಗಿಲ್ಲ. ಅವರನ್ನು ಬದಲಾಯಿಸಿ ಎಂದು ಗ್ರಾಮಸ್ಥರು ಪತ್ರದ ಮೂಲಕ ದೂರು ನೀಡಿದ್ದಾರೆ. ಅದರಂತೆ ನಾನು ಮೇಲಾಧಿಕಾರಿಗಳಿಗೆ ತಿಳಿಸಿ ಮುಂದೇ ಕಾನೂನು ಕ್ರಮ ಜರುಗಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರೀಫ ಸಾಹೇಬನವರ, ಅಬ್ಬಾಸ ಕಿಲ್ಲೆದಾರ, ಹಜೇರೆಸಾಬ ಕಿಲ್ಲೆದಾರ, ಹನುಮಂತ ಚಲವಾದಿ, ಈರಪ್ಪ ಸನದಿ, ನಾಗನಗೌಡ ಹಿರೇಗೌಡ್ರ, ಬಸನಗೌಡ ಕೃಷ್ಣಗೌಡ್ರ, ಹಜರು ಹುಡೇದ ಸೇರಿ ಅನೇಕರು ಪ್ರತಿಭಟನೆಯಲ್ಲಿದ್ದರು.