ಕರ್ನಾಟಕದಲ್ಲಿ ಅನೇಕ ಸಿಹಿ ಖಾದ್ಯಗಳಿವೆ. ಹೋಳಿಗೆ, ಲಡ್ಡು ಹೀಗೆ ಹಲವು ವಿಧದ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುವಂತಹದ್ದು. ಧಾರವಾಡಕ್ಕೆ ಭೌಗೋಳಿಕ ಸೂಚಿಯ ಟ್ಯಾಗ್ ನೀಡುವ ಸಿಹಿ ತಿನಿಸು ಈ ಧಾರವಾಡ ಪೇಡಾ. ಬಾಯಿಗೆ ಹಾಕಿಕೊಂಡರೆ ಕರಗುವ ಈ ಪೇಡಾ ಧಾರವಾಡವನ್ನು ಮತ್ತಷ್ಟು ಫೇಮಸ್ ಮಾಡಿದೆ. ಈ ಸಿಹಿಗೆ 175 ವರ್ಷಗಳ ಇತಿಹಾಸವೂ ಇದೆ. 19ನೇ ಶತಮಾನದಲ್ಲಿ ಉತ್ತರ ಪ್ರದೇಶದ ಉನಾವೋ ಎಂಬ ಊರಿನಿಂದ ಧಾರವಾಡಕ್ಕೆ ಬಂದ ಠಾಕೂರ್ ಕುಟುಂಬ ಈ ಪೇಡಾದ ಸೃಷ್ಟಿಕರ್ತರು. ರಾಮ್ ರತನ್ ಸಿಂಗ್ ಠಾಕೂರ್ ಈ ಪೇಡಾಗಳನ್ನು ತಯಾರಿಸಿ, ಸ್ಥಳೀಯ ಊರುಗಳಿಗೆ ಮಾರಿದ ಮೊದಲ ವ್ಯಕ್ತಿ. 5 ದಶಕಗಳಲ್ಲಿ ಧಾರವಾಡ ಮಾತ್ರವಲ್ಲದೇ ಹುಬಳ್ಳಿ, ಬೆಂಗಳೂರು, ಹಾವೇರಿಯಲ್ಲೂ ಈ ಪೇಡಾ ಫೇಮಸ್ ಆಯಿತು.
ಬೇಕಾಗುವ ಪದಾರ್ಥಗಳು
••ಹಾಲು: 2 ಲೀಟರ್
••ನಿಂಬೆ ರಸ: 2 ಟೇಬಲ್ ಸ್ಪೂನ್
••ತುಪ್ಪ: 1 ಟೇಬಲ್ ಸ್ಪೂನ್
••ಸಕ್ಕರೆ : 6 ಟೇಬಲ್ ಸ್ಪೂನ್
••ಏಲಕ್ಕಿ ಪುಡಿ: ಕಾಲು ಟೇಬಲ್ ಸ್ಪೂನ್
•••ಪುಡಿ ಮಾಡಿದ ಸಕ್ಕರೆ: 5 ಟೀ ಸ್ಪೂನ್ (ಪೇಡಾದ ಮೇಲೆ ಹಾಕಲು)
ಮಾಡುವ ವಿಧಾನ
ಮೊದಲಿಗೆ ಹಾಲಿನಿಂದ ಪನ್ನಿರ್ ತಯಾರಿಸಿಕೊಳ್ಳಬೇಕು. ಗ್ಯಾಸ್ ಮೇಲೆ ಪಾತ್ರೆ ಇಟ್ಟು ಹಾಲು ಹಾಕಿ ಕುದಿಸಬೇಕು. ಹಾಲು ಕುದಿಯುತ್ತಾ ಗುಳ್ಳೆಗಳು ಬಂದಾಗ ಅದಕ್ಕೆ ಸ್ವಲ್ಪ ಸ್ವಲ್ಪವೇ ನಿಂಬೆಹಣ್ಣಿನ ರಸ ಹಾಕಬೇಕು. ನಿಂಬೆ ರಸ ಹಾಕಿ ತಿರುವುತ್ತಾ ಇರಬೇಕಾದರೇ ಹಾಲು ಒಡೆಯಲಾರಂಭಿಸಿ ಪನ್ನಿರ್ ಸಿದ್ದವಾಗುತ್ತದೆ. ಗ್ಯಾಸ್ ಆಫ್ ಮಾಡಿ ಹತ್ತಿ ಬಟ್ಟೆಯಲ್ಲಿ ಪನ್ನೀರಿ ಹಾಕಿ ಪನ್ನೀರಿನಲ್ಲಿರುವ ನೀರಿನಾಂಶವನ್ನೆಲ್ಲ ತೆಗೆದು ಸಿದ್ದ ಪಡಿಸಿಕೊಳ್ಳಬೇಕು.
ಅನಂತರ ಒಂದು ಚಮಚ ತುಪ್ಪ ಹಾಕಿ ಪನ್ನೀರಿನ ಬಣ್ಣ ಬದಲಾಗುವವರೆ ಹುರಿದುಕೊಳ್ಳಿ. ಬಳಿಕ 6 ಟೇಬಲ್ ಸ್ಪೂನ್ ಸಕ್ಕರೆ ಮತ್ತು 1 ಟೇಬಲ್ ಸ್ಪೂನ್ ಹಾಲು ಹಾಕಿ ಚೆನ್ನಾಗಿ ಕಲಡಿಸಿ. ಗ್ಯಾಸ್ ನಿಧಾನವಾಗಿರಿಸಿ ಸಕ್ಕರೆ ಕರಗಿಸಿಕೊಳ್ಳಿ. ಈ ಹೂರಣ ಕಂದು ಬಣ್ಣಕ್ಕೆ ತಿರುಗುವವರೆಗೆ ಕೈಯಾಡಿಸುತ್ತಾ ಇರಿ. ಹಾಲಿನಾಂಶ ಕಡಿಮೆಯಾಗುತ್ತಿದ್ದಂತೆ ಮತ್ತೆ ಒಂದು ಟೇಬಲ್ ಸ್ಪೂನ್ ಹಾಲು ಸೇರಿಸಿ ಗೋಲ್ಡನ್ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಈ ಮಿಶ್ರಣವನ್ನು ಮಿಕ್ಸರ್‌ಗೆ ಹಾಕಿ ನೀರು ಅಥವಾ ಹಾಲು ಹಾಕದೇ ಹುಡಿ ಮಾಡಿಕೊಳ್ಳಿ. ಮತ್ತೆ ಕಡಾಯಿಗೆ 3 ಟೇಬಲ್ ಸ್ಪೂನ್ ಹಾಲು ಹಾಕಿ ಹುಡಿಯನ್ನು ಕಡು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಒಂದು ವೇಳೆ ಈ ಮಿಶ್ರಣ ಮತ್ತಷ್ಟು ಒಣಗಿದರೇ ಸೀದು ಹೋಗದಂತೆ ಹಾಲು ಹಾಕಿ ಹುರಿದುಕೊಳ್ಳಬಹುದು. ಆನಂತರ 1/4 ಟೇಬಲ್ ಸ್ಪೂನ್ ಏಲಕ್ಕಿ ಹುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಗ್ಯಾಸ್ ಆಫ್ ಮಾಡಿ ತಣ್ಣಗಾಗುವವರೆಗೂ ಕಾದು ಸಣ್ಣದಾದ ಉಂಡೆ ಮಾಡಿಕೊಂಡು ಉಂಡೆಯನ್ನು ಸಕ್ಕರೆ ಹುಡಿಯನ್ನು ಉರುಳಿಸಿದರೆ ರುಚಿಯಾದ ಧಾರವಾಡ ಪೇಡಾ ಸವಿಯಲು ಸಿದ್ದ.