Advertisement

ಆಲ್ಫೋನ್ಸೋ ಮಾವು ವಿಮೆಯಲ್ಲಿ ಧಾರವಾಡ ನಂ.1

06:00 AM Dec 04, 2018 | |

ಧಾರವಾಡ: ರಾಜ್ಯದಲ್ಲಿ ಅತೀ ಹೆಚ್ಚು ಆಲ್ಫೋನ್ಸೋ ಮಾವು ಉತ್ಪಾದಿಸುವ ಧಾರವಾಡ ಜಿಲ್ಲೆ ಈ ಬಾರಿ ಮಾವು ವಿಮೆಯಲ್ಲೂ ದಾಖಲೆ ಬರೆದಿದ್ದು, ರಾಜ್ಯದಲ್ಲಿಯೇ ಮಾವು ವಿಮೆ ಇರಿಸುವಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯಗಳು ಮತ್ತು ಹೊರ ದೇಶಗಳಿಗೆ ರುಚಿಯಾದ ಆಲ್ಫೋನ್ಸೋ ಮಾವಿನ ಹಣ್ಣುಗಳನ್ನು ರಫ್ತು ಮಾಡುವ ಖ್ಯಾತಿ ಗಳಿಸಿರುವ ಧಾರವಾಡ ಜಿಲ್ಲೆ ಮಾವು ಉತ್ಪಾದನೆ ಅಷ್ಟೇ ಅಲ್ಲ, ಹವಾಮಾನ ಆಧಾರಿತ ಮಾವು ಬೆಳೆ ವಿಮೆ ಇರಿಸುವಲ್ಲಿಯೂ ಇದೀಗ ನಂ.1 ಸ್ಥಾನಕ್ಕೇರಿದೆ. ಧಾರವಾಡ ಜಿಲ್ಲೆಯಿಂದ ಒಟ್ಟು 1,815 ಮಾವು ಬೆಳೆಗಾರರು ಈ ವರ್ಷ ಬೆಳೆವಿಮೆ ಇರಿಸಿದ್ದರೆ, 2ನೇ ಸ್ಥಾನದಲ್ಲಿ ಹಾವೇರಿ ಜಿಲ್ಲೆ ಇದ್ದು ಇಲ್ಲಿ 1,743 ಮಾವು ಬೆಳೆಗಾರರು ವಿಮೆ ಇರಿಸಿದ್ದಾರೆ. ಬೆಳಗಾವಿಯಲ್ಲಿ 912, ಬಾಗಲ ಕೋಟೆ 131, ವಿಜಯಪುರ 542, ಬೀದರ್‌57, ರಾಯಚೂರು 11,ಮೈಸೂರು-6, ಗದಗ-7, ಮಂಡ್ಯ-1 ಒಟ್ಟು ರಾಜ್ಯಾದ್ಯಂತ 5216 ಮಾವು ಬೆಳೆಗಾರರು ಪ್ರಸಕ್ತ ಸಾಲಿನ ಹಿಂಗಾರು, ಅಂದರೆ 2019ರ ಏಪ್ರಿಲ್‌ ಒಳಗಡೆ ಫಲ ಕೊಡುವ ಮಾವಿನ ಬೆಳೆ ಮೇಲೆ ಹವಾಮಾನ ಆಧಾರಿತ ಬೆಳೆ ವಿಮೆ ಇರಿಸಿದ್ದಾರೆ.

Advertisement

ಕಳೆದ ವರ್ಷ ಓರಿಯಂಟಲ್‌ ಇನ್ಸುರೆನ್ಸ್‌ ಕಂಪನಿಯು ರೈತರಿಂದ ವಿಮೆ ಸ್ವೀಕರಿಸಿತ್ತು. ಪ್ರತಿ ಹೆಕ್ಟೆರ್‌ಗೆ 3500 ರೂ.ಗಳ ಪ್ರಿಮಿಯಂ ಹಣ ಇರಿಸಿಕೊಂಡಿತ್ತು. ಈ ವರ್ಷ ಎಸ್‌ಬಿಐ ಬೆಳೆವಿಮೆ ಕಂಪನಿ ವಿಮಾ ಕಂತು ಪಡೆದುಕೊಂಡಿದ್ದು, ಪ್ರತಿ ಹೆಕ್ಟೇರ್‌ಗೆ 4200 ರೂ. ನಿಗದಿ ಪಡಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.80ಕ್ಕಿಂತ ಹೆಚ್ಚು ಮಾವು ಬೆಳೆಗಾರರು ವಿಮೆ ಇರಿಸಿದಂತಾಗಿದೆ. 

ದಕ್ಷಿಣದ ಜಿಲ್ಲೆಗಳು ನಿರ್ಲಕ್ಷ: ಉತ್ತರ ಕರ್ನಾಟ ಕದ ಜಿಲ್ಲೆಗಳು ಮಾವು ವಿಮೆ ಇರಿಸಿದಂತೆ ದಕ್ಷಿಣ ಕರ್ನಾಟಕದಲ್ಲಿ ಮಾವು ಬೆಳೆಯುವ ಜಿಲ್ಲೆಗಳು ವಿಮೆ ಇರಿಸಲು ಆಸಕ್ತಿ ತೋರಿಸಿಲ್ಲ. ಕೋಲಾರ, ರಾಮನಗರ, ಚಿಕ್ಕ ಮಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳಲಿ ತಕ್ಕ ಮಟ್ಟಿಗೆಆಲ್ಫೋನ್ಸೋಮಾವು ಬೆಳೆಯಲಾಗುತ್ತಿದೆ. ಆದರೆ ಆ ಜಿಲ್ಲೆಗಳಲ್ಲಿ ಯಾವೊಬ್ಬ ರೈತರು ಮಾವು ವಿಮೆ ಕಂತು ತುಂಬಲು ಆಸಕ್ತಿ ತೋರಿಲ್ಲ. 300ಕ್ಕೂ ಹೆಚ್ಚು ರೈತರು ವಂಚಿತ: ಇನ್ನು ಧಾರವಾಡ ಜಿಲ್ಲೆಯ ಅಳ್ನಾವರ ನೂತನ
ತಾಲೂಕು ರಚನೆಯಾದ ನಂತರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸಂರಕ್ಷಣ ವೆಬ್‌ಸೈಟ್‌ ನಲ್ಲಿ ಆಗಿರುವ ಮಾರ್ಪಾಡುಗಳು ಸರಿಯಾಗಿ ಆಗದ್ದರಿಂದ ಈ ಭಾಗದ 10ಕ್ಕೂ ಹೆಚ್ಚು ಹಳ್ಳಿಯ ರೈತರು ಮಾವು ವಿಮೆ ತುಂಬುವುದರಿಂದ ವಂಚಿತರಾದರು. ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ರೈತರು ತೊಂದರೆ ಅನುಭವಿಸಬೇಕಾಯಿತು. ಇನ್ನು ಜಂಟಿ ಖಾತೆ ಹೊಂದಿದ ರೈತರಿಗೆ ಬ್ಯಾಂಕ್‌ಗಳು ಹೊಲದ ಪಹಣಿ ಪತ್ರದಲ್ಲಿ ಹೆಸರು ಇರುವ ಎಲ್ಲರೂ ಖುದ್ದು ಹಾಜರಾಬೇಕೆಂದು ಕಡ್ಡಾಯಗೊಳಿಸಿದ್ದರಿಂದ ಸಾಕಷ್ಟು ರೈತರು ಸಮಯದ ಅಭಾವಕ್ಕಾಗಿ ವಿಮೆ ಪಾವತಿಸಲು ಹಿಂದೇಟು ಹಾಕಿದರು. ಇದರ ಮಧ್ಯೆಯೂ ಈ ವರ್ಷ ಜಿಲ್ಲೆಯಲ್ಲಿ ಈ ಹಿಂದೆಂದಿಗಿಂತಲೂ ಅಧಿಕ ಮಾವು ಬೆಳೆಗಾರರು ವಿಮೆ ಇರಿಸಿದ್ದಾರೆ.

ತಕ್ಕಷ್ಟು ಬರುತ್ತಿಲ್ಲ ವಿಮೆ ಹಣ: ಒಟ್ಟು ವಿಮಾ ಹಣದಲ್ಲಿ ಶೇ.5.81ರಷ್ಟು ರೈತರು, ಶೇ.31.94ರಷ್ಟು ರಾಜ್ಯ ಸರ್ಕಾರ ಮತ್ತು ಶೆ.31.91ರಷ್ಟು ಕೇಂದ್ರ ಸರ್ಕಾರ ವಿಮಾ ಕಂಪನಿಗೆ ಹಣ ಭರಿಸುತ್ತವೆ. 2017ರಲ್ಲಿ ಮಾವಿನ ಬೆಳೆಯ ಮೇಲೆ ಇರಿಸಿದ ಹವಾಮಾನ ಆಧಾರಿತ ಮಾವು ವಿಮೆ ಕಂತು ರೈತರಿಗೆ ಲಾಭದಾಯಕವಾಗಿಲ್ಲ ಎಂದು ಮಾವು ಬೆಳೆಗಾರರು ದೂರುತ್ತಿದ್ದಾರೆ. ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 590ಕ್ಕೂ ಹೆಚ್ಚು ರೈತರು 9.3 ಕೋಟಿ ರೂ. 2018-19ನೇ ಸಾಲಿಗಾಗಿ ಈ ವಿಮೆಯನ್ನು ಪ್ರತಿ ಹೆಕ್ಟೇರ್‌ಗೆ 4,200 ರೂ.ಗಳಂತೆ ಪಡೆದುಕೊಳ್ಳಲಾಗಿದೆ. ಈ ಪೈಕಿ ಎರಡು ಎಕರೆ ತೋಟಗಳಿಗೆ ವಿಮೆ ಕಂತು ತುಂಬಿದ ರೈತರೇ ಅಧಿಕವಾಗಿದ್ದು, ಅವರಿಂದ ಪ್ರತಿ ಎರಡು ಎಕರೆ ಮಾವಿನ ತೋಟಕ್ಕೆ 3250 ರೂ. ವಿಮೆ ಹಣ  ಪಡೆದುಕೊಳ್ಳಲಾಗಿದೆ.

ಬೆಳೆ ಬರದಿದ್ದರೂ ಕೈ ಹಿಡಿಯದ ವಿಮೆ!
ಧಾರವಾಡ ಜಿಲ್ಲೆಯಲ್ಲಿ 10,568 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆದರೆ, ಬೆಳಗಾವಿಯಲ್ಲಿ 5690 ಹೆಕ್ಟೇರ್‌, ಹಾವೇರಿ 6,751 ಹೆಕ್ಟೇರ್‌,ಬಾಗಲಕೋಟೆ 1280 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಇನ್ನುಳಿದಂತೆ ದಕ್ಷಿಣದ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲೂ ಸಾವಿರಾರು ಎಕರೆ ಮಾವು ತೋಟವಿದ್ದು, ಇಲ್ಲಿನ ರೈತರು ವಿಮೆಗೆ ಆಸಕ್ತಿ ತೋರಿಸಿಲ್ಲ. ಕಳೆದ ವರ್ಷ  ರವಾಡ,ಬೆಳಗಾವಿ, ಹಾವೇರಿ ಜಿಲ್ಲೆಗಳಿಂದಲೇ 3 ಲಕ್ಷ ಟನ್‌ ಆಲ್ಫೋನ್ಸೋ ಉತ್ಪಾದನೆ ನೀರಿಕ್ಷೆ ಮಾಡಲಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಶೇ.58ರಷ್ಟು ಬೆಳೆ ಹಾನಿಯಾದರೂ ವಿಮೆ ಹಣ ರೈತರಿಗೆ ಸರಿಯಾಗಿ ಬರಲೇ ಇಲ್ಲ ಎಂದು ರೈತರು ದೂರುತ್ತಿದ್ದಾರೆ.

Advertisement

 ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next