ಧಾರವಾಡ: ತಹಶೀಲ್ದಾರ್ ಎಂದರೆ ಒಂದು ಕಾರ್, ಕೈಯಲ್ಲಿ ನಾಲ್ವರು ಉಪ ತಹಶೀಲ್ದಾರ್, ಶಿರಸ್ತೇದಾರ್, ಸುಂದರ ಕಟ್ಟಡ, ತಾಲೂಕಿನ ಪ್ರಥಮ ದಂಡಾಧಿಕಾರಿಯಾಗಿದ್ದರಿಂದ ಕಚೇರಿಯಲ್ಲೊಂದು ಕೋರ್ಟ್, ಅದರ ಮೇಲೊಂದು ಸುಂದರ ಖುರ್ಚಿ ಎಲ್ಲವೂ ಇರಲೇಬೇಕು. ಆದರೆ ಧಾರವಾಡ ಜಿಲ್ಲೆಯಲ್ಲಿ ರಚನೆಯಾದ ಮೂರು ಹೊಸ ತಾಲೂಕುಗಳು ಸದ್ಯಕ್ಕೆ ತ್ರಿಶಂಕು ಸ್ಥಿತಿಯಲ್ಲಿದ್ದು, ಕನಿಷ್ಟ ಮೂಲಸೌಕರ್ಯಗಳು ಇಲ್ಲದ ದುಃಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
Advertisement
ಅಖಂಡ ಧಾರವಾಡ ಜಿಲ್ಲೆ ವಿಭಜನೆಯಾಗಿ 20 ವರ್ಷಗಳ ನಂತರ ಐದು ತಾಲೂಕು ಹೊಂದಿದ್ದ ಧಾರವಾಡ ಜಿಲ್ಲೆಗೆ ಮತ್ತೆ ಮೂರು ಹೊಸ ತಾಲೂಕುಗಳು ರಚನೆಯಾಗಿದ್ದು, ಅಳ್ನಾವರ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿಗೆ ಎರಡು ವರ್ಷ ತುಂಬಿದವು. ಇವು ಹೆಸರಿಗೆ ಮಾತ್ರ ತಾಲೂಕು ಎನಿಸಿಕೊಂಡಿದ್ದು, ಪರಿಪೂರ್ಣವಾಗಿ, ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ಜನರಿಗೆ ಆಡಳಿತ ಕೊಡುವಲ್ಲಿ ವಿಫಲವಾಗುತ್ತಿವೆ.
ತಹಶೀಲ್ದಾರ್‌ಗೆ ತಾಲೂಕು ವಿಭಜನೆಯೇ ದೊಡ್ಡ ಸವಾಲಾಗಿ ನಿಂತಿದೆ. ಅಣ್ಣಿಗೇರಿ ತಾಲೂಕು: ಅಣ್ಣಿಗೇರಿ ತಾಲೂಕಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಇಲ್ಲಿ ಮಿನಿ ವಿಧಾನಸೌಧ ಕಟ್ಟಡಬೇಕು ಎಂದು ಚರ್ಚೆಯಾಗಿ ಪ್ರಸ್ತಾವನೆ ಸಿದ್ಧಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯಕ್ಕೆ ಅಣ್ಣಿಗೇರಿ ಪಟ್ಟಣವು ಸೇರಿ 21 ಹಳ್ಳಿಗಳನ್ನು ಒಳಗೊಂಡಿರುವ ಈ ತಾಲೂಕಿನ ಕಚೇರಿ ಇರುವುದು ಅಣ್ಣಿಗೇರಿ ಪಟ್ಟಣದಿಂದ 4 ಕಿಮೀ ದೂರದ ವೆಂಕಟೇಶ್ವರ ಮಿಲ್‌ನಲ್ಲಿ. ಇದನ್ನೆ ದುರಸ್ತಿ ಮಾಡಿಕೊಂಡು ಸದ್ಯಕ್ಕೆ ತಾಲೂಕು ಕೇಂದ್ರ ನಡೆಯುತ್ತಿದ್ದು, ತಹಶೀಲ್ದಾರ್ ಸೇರಿ ಒಟ್ಟು 5 ಜನ ನೌಕರರು ಇಡೀ ತಾಲೂಕಿಗೆ ನಿಯುಕ್ತಿಗೊಂಡಿದ್ದಾರೆ. ಇನ್ನು ಕಚೇರಿಯಲ್ಲಿ ಸ್ವತಃ ತಹಶೀಲ್ದಾರ್‌ಗೆ ಶೌಚಾಲಯವಿಲ್ಲ. ನೌಕರರು ಇಲ್ಲಿ ಬಯಲು ಶೌಚಕ್ಕೆ ಹೋಗಬೇಕು. ಈವರೆಗೂ 10 ಲಕ್ಷ ರೂ. ಅನುದಾನ ಬಂದಿತ್ತು. ಅದನ್ನು ಕಚೇರಿ ಮತ್ತು ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಲಾಗಿದೆ.
Related Articles
Advertisement
ಅಳ್ನಾವರ ನೂತನ ತಾಲೂಕು: ಮಲೆನಾಡಿನ ಸೆರಗು ಮತ್ತು ಧಾರವಾಡ ಜಿಲ್ಲೆಯ ಕಟ್ಟ ಕಡೆಯ ತಾಲೂಕಾಗಿರುವ ಅಳ್ನಾವರ 13 ಹಳ್ಳಿಗಳು ಮತ್ತು ಅಳ್ನಾವರ ಪಟ್ಟಣ ಸೇರಿ ಒಟ್ಟು 34 ಸಾವಿರ ಜನಸಂಖ್ಯೆ ಹೊಂದಿದ ನೂತನ ತಾಲೂಕಾಗಿದೆ.
ಸದ್ಯಕ್ಕೆ ಇಲ್ಲಿನ ಎಪಿಎಂಸಿ ಆವರಣದಲ್ಲಿ 3.19 ಎಕರೆ ಜಾಗದಲ್ಲಿ ಹೊಸ ತಾಲೂಕು ಕಚೇರಿ (ಮಿನಿ ವಿಧಾನಸೌಧ) ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ಇದಕ್ಕೆ ಒಪ್ಪಿಗೆಯನ್ನು ಕೂಡ ನೀಡಿದೆ. ಇಲ್ಲಿ ತಹಶೀಲ್ದಾರ್, ಇಬ್ಬರು ಶಿರಸ್ತೆದಾರ್, ಓರ್ವ ರೆವೆನ್ಯೂ ಇನ್ಸ್‌ಪೆಕ್ಟರ್, ಇಬ್ಬರು ಎಫ್‌ಡಿಸಿ, ಒಬ್ಬರು ಎಸ್‌ಡಿಸಿ, ನಾಲ್ವರು ಡಿ ದರ್ಜೆ ನೌಕರರು ಸೇರಿದಂತೆ 11 ಜನ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯೂ ಅಷ್ಟೇ, ಪ್ರತ್ಯೇಕ ವಾಹನ ಸೌಕರ್ಯವಿಲ್ಲ. ಆದರೆ ಸದ್ಯಕ್ಕೆ ಇಲ್ಲಿನ ನಾಡ ಕಚೇರಿಯಲ್ಲಿಯೇ ತಹಶೀಲ್ದಾರ್ ಕಚೇರಿ ಕಾರ್ಯಗಳು ನಡೆದಿವೆ. ನೆರೆ ಹಾವಳಿಗೆ ಸಿಲುಕಿದ ತಾಲೂಕಿಗೆ 1.75 ಕೋಟಿ ರೂ. ಪರಿಹಾರಧನ ಬಂದಿತ್ತು. ಅದನ್ನು ವಿತರಿಸಲಾಗಿದೆ.