ಧಾರವಾಡ : ಬರಗಾಲದ ಬರೆಗೆ ರೈತನ ಪಾಲಿನ ಜೀವನಾಡಿ ಆಗಿರುವ ಜಾನುವಾರುಗಳು ಪರಭಾರೆ ಆಗುತ್ತಿದ್ದು, ಆದರೆ ಮಾರಾಟಕ್ಕೆಂದು ಜಾನುವಾರು ಮಾರುಕಟ್ಟೆಗೆ ಬರುವ ಜಾನುವಾರುಗಳ ದಾಹ ಮಾತ್ರ ತೀರದಾಗಿದೆ. ಜಾನುವಾರುಗಳ ನೀರಿನ ದಾಹ ನೀಗಿಸಲೆಂದೇ ತೊಟ್ಟಿಗಳಿದ್ದರೂ ಅವುಗಳಲ್ಲಿ ನೀರಿಲ್ಲ…!
Advertisement
ಧಾರವಾಡ ಎಪಿಎಂಸಿ ವ್ಯಾಪ್ತಿಯ ಮಾಳಾಪೂರದ ಜಾನುವಾರು ಮಾರುಕಟ್ಟೆಯ ದುಸ್ಥಿತಿಯಿದು. ಜಾನುವಾರುಗಳ ದಾಹ ನೀಗಿಸಬೇಕಾದ ನೀರಿನ ತೊಟ್ಟಿಗಳಲ್ಲಿ ನೀರಿಲ್ಲ, ಖಾಲಿ ತೊಟ್ಟಿಗಳಲ್ಲಿ ಬರೀ ಮದ್ಯದ ಬಾಟಲಿಗಳದ್ದೇ ಸಾಮ್ರಾಜ್ಯ. ಶುಚಿತ್ವದ ಕೊರತೆಯ ಜತೆಗೆ ಅನೈತಿಕ ಚಟುವಟಿಕೆಗಳದ್ದೇ ಕಾರುಬಾರು, ಎಣ್ಣೆ ಪಾರ್ಟಿಗಳ ಕಟ್ಟೆಯಾಗಿರುವ ಹರಾಜು ಕಟ್ಟೆಯೇ ಮಾರುಕಟ್ಟೆಯ ದುಸ್ಥಿತಿಗೆ ಸಾಕ್ಷಿ. ಇಲ್ಲಿಗೆ ಮಾರಾಟಕ್ಕೆಂದು ಬರುವ ಜಾನುವಾರುಗಳಿಗೆ ಕುಡಿಯುವ ನೀರು ಕೂಡ ಸಿಗದಂತಹ ಕೆಟ್ಟ ದುಸ್ಥಿತಿ ಇಲ್ಲಿದೆ.
ಇರುವ ಈ ತೊಟ್ಟಿಗಳಲ್ಲಿ ಸಾರಾಯಿ ಬಾಟಲಿಗಳು ಬಿದ್ದಿವೆ. ಮದ್ಯದ ಪಾಕೇಟ್, ಬಾಟಲಿಗಳು ತೊಟ್ಟಿಯಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ.
Related Articles
Advertisement
ಅನೈತಿಕ ತಾಣವಾದ ಕಟ್ಟೆ: ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹೋಲ್‌ಸೇಲ್ ಎಲೆ ವ್ಯಾಪಾರಕ್ಕಾಗಿಯೇ 2017-18ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಅಂದಾಜು 55 ಲಕ್ಷ ರೂ. ಗಳಲ್ಲಿ ಮೂರು ಮುಚ್ಚು ಹರಾಜು ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಈಗ ಹಳೇ ಎಪಿಎಂಸಿಯಲ್ಲಿ ನಡೆಯುತ್ತಿರುವ ಹೋಲ್‌ಸೇಲ್ ಎಲೆ ವ್ಯಾಪಾರ ಮಾರುಕಟ್ಟೆ ಈ ಕಟ್ಟೆಗೆ ಸ್ಥಳಾಂತರ ಆಗಬೇಕಿತ್ತು. ಆದರೆ ಈ ಕಾರ್ಯವಾಗದೇ ಹರಾಜು ಕಟ್ಟೆಗಳು ಹಾಗೇ ಉಳಿದುಕೊಂಡು, ಅನೈತಿಕ ಚಟುವಟಿಕೆಗಳ ಕಟ್ಟೆಯಾಗಿದ್ದವು. ಈ ಪೈಕಿ ಎರಡು ಹರಾಜು ಕಟ್ಟೆಗಳಲ್ಲಿ ಇದೀಗ ಕಳೆದ 2-3 ತಿಂಗಳಿಂದ ಘನತಾಜ್ಯ ವಿಲೇವಾರಿ ಘಟಕ ನಿರ್ಮಾಣದ ಮೂಲಕ ಸದ್ಬಳಕೆ ಮಾಡಿಕೊಂಡಿದ್ದು, ಆದರೆ ಇನ್ನೊಂದು ಹರಾಜು ಕಟ್ಟೆಯಂತೂ ಹಾಗೇ ಉಳಿದುಕೊಂಡು ಬಿಟ್ಟಿದೆ. ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಇರುವ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರ ಕಚೇರಿ ಪಕ್ಕದಲ್ಲೇ ಈ ಹರಾಜು ಕಟ್ಟೆಯಿದ್ದು, ಇದು ಅನೈತಿಕ ಚಟುವಟಿಕೆಗಳ ತಾಣದ ಕಟ್ಟೆಯಾಗಿ ಮಾರ್ಪಟ್ಟಿವೆ.
ಹೀಗಾಗಿ ಮದ್ಯದ ಬಾಟಲಿ ರಾರಾಜಿಸುತ್ತಿದ್ದು,ಪ್ರತಿ ದಿನ ರಾತ್ರಿ ಎಣ್ಣೆ ಪಾರ್ಟಿಗಳು ನಡೆಯುತ್ತಿರುವುದಕ್ಕೆ ಪುಷ್ಠಿ ನೀಡುತ್ತಿವೆ. ಈ ಕಟ್ಟೆ ಆವರಣದಲ್ಲಿ ಅಷ್ಟೇ ಅಲ್ಲ ಜಾನುವಾರು ಮಾರುಕಟ್ಟೆಯೂ ಅನೈತಿಕ ಚಟುವಟಿಕೆಯ ತಾಣವಾಗಿದೆ. ಇನ್ನು ಈ ಪ್ರಾಂಗಣದಲ್ಲಿಯೇ ಕುರಿ ಮತ್ತು ಮೇಕೆಗಳ ಮಾರುಕಟ್ಟೆ ಆಧುನೀಕರಣ ಮಾಡುವ 10 ಲಕ್ಷ ರೂ.ಗಳ ಕಾಮಗಾರಿಗೆ ಅನುಮೋದನೆ ಲಭಿಸಿದ್ದಲ್ಲದೇ ಅದಕ್ಕಾಗಿ ಜಾಗವನ್ನೂ ಮೀಸಲಿಡಲಾಗಿತ್ತು. ಆದರೆ ನನೆಗುದಿಗೆ ಬಿದ್ದಿರುವ ಈ ಯೋಜನೆ ಕಾಮಗಾರಿ ಮಾತ್ರವರ್ಷಗಳೇ ಕಳೆದರೂ ಆರಂಭಗೊಂಡಿಲ್ಲ. ಈ ರೀತಿಯ ಅಭಿವೃದ್ಧಿ ಕಾಣದ ಜಾನುವಾರು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಮೂಲ ಸೌಕರ್ಯ ಮರೀಚಿಕೆ
ಜಿಲ್ಲೆಯಲ್ಲಿ ಧಾರವಾಡ ಎಪಿಎಂಸಿ, ಹುಬ್ಬಳ್ಳಿ ಎಪಿಎಂಸಿ, ಅಣ್ಣಿಗೇರಿ ಎಪಿಎಂಸಿ, ನೂಲ್ವಿ ಎಪಿಎಂಸಿ ವ್ಯಾಪ್ತಿಯಲ್ಲಿ ಸೇರಿ ಒಟ್ಟು ನಾಲ್ಕು ಜಾನುವಾರು ಮಾರುಕಟ್ಟೆಗಳಿವೆ. ಈ ಪೈಕಿ ಧಾರವಾಡ ಎಪಿಎಂಸಿ ವ್ಯಾಪ್ತಿಯ ಮಾಳಾಪೂರದ ಜಾನುವಾರು
ಮಾರುಕಟ್ಟೆಯೇ ದೊಡ್ಡದು. ಇಲ್ಲಿ ವಾರದಲ್ಲಿ ಒಂದು ದಿನ ನಡೆಯುವ ಜಾನುವಾರು ಸಂತೆಗೆ ಬರುವ ಜಾನುವಾರುಗಳ ನೀರಿನ ದಾಹ ಸಹ ನೀಗಿಸದಂತಹ ದುಸ್ಥಿತಿ. ಈ ರೀತಿ ಮೂಲಭೂತ ಸೌಕರ್ಯಗಳಿಂದ ದಿನದಿಂದ ದಿನಕ್ಕೆ ಸೊರಗುತ್ತಿದ್ದು, ಅದೇ ರೀತಿ ಜಿಲ್ಲೆಯ ಉಳಿದ ಜಾನುವಾರು ಮಾರುಕಟ್ಟೆಗಳು ಸಹ ಮೂಲಭೂತ ಸೌಲಭ್ಯಗಳಿಂದ ಮರೀಚಿಕೆಯಾಗಿರುವುದಂತೂ ಸತ್ಯ. ಜಾನುವಾರು ಮಾರುಕಟ್ಟೆಯಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ನೀರಿಲ್ಲ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ನೀರಿನ ತೊಟ್ಟಿಗಳಲ್ಲಿ ನೀರು ಬಿಡುವ ಕಾರ್ಯ ಮಾಡಲಾಗುವುದು. ಇದರ ಜತೆಗೆ ಮಾರುಕಟ್ಟೆಯ ಮೂಲಸೌಕರ್ಯಗಳಿಗೆ ಆದ್ಯತೆ ಕೊಡಲಾಗುವುದು.
*ವಿ.ಜಿ.ಹಿರೇಮಠ
ಕಾರ್ಯದರ್ಶಿ, ಎಪಿಎಂಸಿ, ಧಾರವಾಡ *ಶಶಿಧರ್ ಬುದ್ನಿ