Advertisement

ಎಸಿ ರೂಂ ಬಿಡಿ, ಹೊಲಕ್ಕೆ ಭೇಟಿ ಕೊಡಿ

05:18 PM Sep 23, 2018 | Team Udayavani |

ಧಾರವಾಡ: ಕೃಷಿ ವಿಜ್ಞಾನಿಗಳು ವಿಶ್ವ ವಿದ್ಯಾಲಯದ ಎಸಿ ರೂಮ್‌ಗಳನ್ನು ಬಿಟ್ಟು ರೈತರ ಹೊಲಕ್ಕೆ ಹೋಗಿ ಸಲಹೆ, ಮಾರ್ಗದರ್ಶನ ಮಾಡುವವರೆಗೂ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಇಲ್ಲಿನ ಕೃಷಿ ವಿವಿಯಲ್ಲಿ 2018ನೇ ಸಾಲಿನ ಕೃಷಿ ಮೇಳಕ್ಕೆ ಚಾಲನೆ ನೀಡಿ, ಬೀಜ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಇಂದು ಸಂಕಷ್ಟದಲ್ಲಿದ್ದು, ಕೃಷಿಯನ್ನೇ ನಂಬಿದ ಬಡ ರೈತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು, ಪ್ರಾಧ್ಯಾಪಕರು ಕೇವಲ ಕೃಷಿ ವಿವಿಯಲ್ಲಿ ಕುಳಿತು ಬೋಧನೆ ಮಾಡದೆ, ರೈತರ ಹೊಲಗಳಲ್ಲಿ ಕೃಷಿ ಅಭಿವೃದ್ಧಿಗೆ ಅಗತ್ಯವಾದ ಸಲಹೆ, ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ರೈತರು ಆಮಿಷಗಳಿಗೆ ಒಳಗಾಗಿ ತಮ್ಮ ಹೊಲಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಓದಿಸಲು ಹೊಲ ಮಾರಿ ನಗರಕ್ಕೆ ಬಂದು ಉಳಿಯುತ್ತಿದ್ದಾರೆ. ಇನ್ನು ಕೆಲವರು ಬಡಾವಣೆಗಳ ನಿರ್ಮಾಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲ ಕಡೆಗೂ ಬರೀ ಬಡಾವಣೆಗಳೇ ನಿರ್ಮಾಣವಾದರೆ ಮುಂದೊಂದು ದಿನ ಎಲ್ಲರೂ ಮಣ್ಣು ತಿನ್ನಬೇಕಾಗುತ್ತದೆ. ರೈತರು ಹೊಲ ಮಾರಿದರೆ ಅವರ ಮುಂದಿನ ಪೀಳಿಗೆ ಏನು ಮಾಡಬೇಕು? ಹೀಗಾಗಿ ನಿಮ್ಮ ಹೊಲಗಳನ್ನು ದಯವಿಟ್ಟು ಮಾರಾಟ ಮಾಡಬೇಡಿ ಎಂದರು.

ರೈತ ದೇಶದ ಬೆನ್ನಲುಬು ಎಂದು ಹೇಳುವ ಈ ವ್ಯವಸ್ಥೆಯೇ ಆತನ ಬೆನ್ನು ಮೂಳೆ ಮುರಿಯುತ್ತಿದೆ. ಕಳಪೆ ಬೀಜದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ರೈತರು ಹೆಚ್ಚಿನ ಉತ್ಪಾದನೆ ಕಡೆಗೆ ಲಕ್ಷé ವಹಿಸಬೇಕು. ಇಸ್ರೇಲ್‌ ಮಾದರಿ ಕೃಷಿ ನಮ್ಮ ದೇಶಕ್ಕೂ ಉತ್ತಮ ಮಾದರಿ. ಆದರೆ ಇಲ್ಲಿ ಸರ್ಕಾರ ಅದನ್ನು ಸರಿಯಾಗಿ ಜಾರಿಗೊಳಿಸಲು ಆಸಕ್ತಿ ವಹಿಸುತ್ತಿಲ್ಲ. ಈ ಎಲ್ಲ ಸಂಕಷ್ಟಗಳಿಂದ ಹೊರಬರಲು ರೈತರು ಜಾಣರಾಗುವುದೊಂದೇ ದಾರಿ ಎಂದರು.

ಸಾಲ ಮನ್ನಾ ಪರಿಹಾರವಲ್ಲ: ಸಾಲ ಮನ್ನಾದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬ ಪರಿಕಲ್ಪನೆಯೇ ತಪ್ಪು. ರೈತರ ಸಮಸ್ಯೆಗಳ ಪರಿಹಾರಕ್ಕೆ ಸಾಲ ಮನ್ನಾವೊಂದೇ ಪರಿಹಾರವಲ್ಲ. ಕೃಷಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಜೊತೆಗೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಅಂದಾಗ ಮಾತ್ರ ರೈತರು ಉಳಿಯಲು ಸಾಧ್ಯ ಎಂದರು.

Advertisement

ಜಾಹೀರಾತಿಗೆ ಮರುಳಾಗಬೇಡಿ: ಕೃಷಿ ವಿಜ್ಞಾನಿ ಡಾ| ಡಿ.ಕೆ. ಯಾದವ್‌ ಮಾತನಾಡಿ, ಬೀಜ ಸಂಸ್ಕೃತಿ ಉಳಿದರೆ ಮಾತ್ರ ಕೃಷಿ ಪರಿಪೂರ್ಣವಾಗಿ ಉಳಿಯಲು ಸಾಧ್ಯ. ಹೀಗಾಗಿ ರೈತರು ಕೃಷಿಯಲ್ಲಿ ಮೊದಲ ಆದ್ಯತೆಯನ್ನು ಗುಣಮಟ್ಟದ ಬೀಜಕ್ಕೆ ನೀಡಬೇಕು. ಗುಣಮಟ್ಟದ ಬೀಜಗಳನ್ನು ಮಾತ್ರ ಪಡೆದು ಸಂಸ್ಕರಿಸಿಟ್ಟುಕೊಳ್ಳಬೇಕು. ಕೆಲವು ಜಾಹೀರಾತು ಕಂಪನಿಗಳು ರೈತರಿಗೆ ಆಕರ್ಷಕ ಬಣ್ಣ ಮತ್ತು ವ್ಯಕ್ತಿಗಳಿರುವ ಚಿತ್ರಗಳನ್ನು ಮುದ್ರಿಸಿ ಕಳಪೆ ಬೀಜಗಳನ್ನು ಮಾರಾಟ ಮಾಡುತ್ತಿವೆ. ಇದನ್ನು ರೈತರು ಬಹಳ ಜಾಣ್ಮೆಯಿಂದ ನಿಭಾಯಿಸಿಕೊಂಡು ಬೀಜ ಕೊಳ್ಳಬೇಕು. ಧಾರವಾಡ ಕೃಷಿ ವಿವಿ ಉತ್ತಮ ಗುಣಮಟ್ಟದ ಬೀಜ ಉತ್ಪಾದನೆಯಲ್ಲಿ ದೇಶಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಂದ ಬೀಜ ಪಡೆದು ಅವುಗಳನ್ನು ಸಂಸ್ಕರಿಸಿಕೊಂಡು ಮುಂದಿನ ವರ್ಷಕ್ಕೆ ಬಳಸಿಕೊಳ್ಳುವ ಸಂಸ್ಕೃತಿಯನ್ನು ರೈತರು ಬೆಳೆಸಿಕೊಳ್ಳಬೇಕು ಎಂದರು.

ಕೃಷಿ ಮೇಳದ ಪ್ರಧಾನ ವೇದಿಕೆಯಲ್ಲಿ ಮಧ್ಯಾಹ್ನ ಈಶ್ವರ ಅರಳಿ ಹಾಗೂ ಎಂ.ಜಿ. ಹಿರೇಮಠ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಈಶ್ವರಚಂದ್ರ ಹೊಸಮನಿ, ಬಿ. ಸುಮಿತ್ರಾ ದೇವಿ, ಡಾ| ರಾಜೇಂದ್ರ ಸಣ್ಣಕ್ಕಿ, ಸುಶೀಲಕುಮಾರ ಬೆಳಗಲಿ ಹಾಗೂ ಸುರೇಶ ಗೊಣಸಗಿ, ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಡಿ.ಪಿ. ಬಿರಾದಾರ ಇನ್ನಿತರರಿದ್ದರು.

10 ಲಕ್ಷಕ್ಕೂ ಅಧಿಕ ಜನ ಭೇಟಿ ನಿರೀಕ್ಷೆ
ಕೃಷಿ ಮೇಳದ ಮೊದಲ ದಿನವೇ ಒಂದು ಲಕ್ಷಕ್ಕೂ ಅಧಿಕ ಜನರು ಕೃಷಿ ಮೇಳಕ್ಕೆ ಭೇಟಿ ಕೊಟ್ಟರು. ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ಬಂದಿದ್ದು ವಿಶೇಷವಾಗಿತ್ತು. ಶನಿವಾರವಾಗಿದ್ದರಿಂದ ಮಧ್ಯಾಹ್ನದ ನಂತರ ನಗರ ಪ್ರದೇಶದ ಜನರು ಕೃಷಿ ಉಪಕರಣಗಳ ಮಳಿಗೆಗಳಿಗೆ ಭೇಟಿ ಕೊಟ್ಟರು. ಪ್ರತಿವರ್ಷ ಶುಕ್ರವಾರದಿಂದ ಆರಂಭಗೊಳ್ಳುತ್ತಿದ್ದ ಕೃಷಿ ಮೇಳ ಈ ವರ್ಷ ಶನಿವಾರದಿಂದ ಆರಂಭಗೊಂಡಿದೆ. ಈ ವರ್ಷ 10 ಲಕ್ಷಕ್ಕೂ ಅಧಿಕ ಜನರು ಭೇಟಿ ಕೊಡುವ ಸಾಧ್ಯತೆ ಇದೆ ಎನ್ನುತ್ತಿದೆ ಕೃಷಿ ವಿವಿ.

ಚುನಾವಣೆ ರಾಜಕಾರಣ ಮತ್ತು ಪಾಪ್ಯುಲರ್‌ ಯೋಜನೆಗಳಿಂದಾಗಿ ಕೃಷಿಗೆ ಕೂಲಿಕಾರ್ಮಿಕರು ಸಿಗದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದರಿಂದ ಒಟ್ಟಾರೆ ಕೃಷಿ ಉತ್ಪಾದನೆಗೆ ಹೊಡೆತ ಬೀಳಲಿದ್ದು, ಭವಿಷ್ಯದಲ್ಲಿ ಕೃಷಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ.
. ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ

ಉತ್ತರ ಭಾರತದ ಕೃಷಿ ಮೇಳದಲ್ಲಿ ಕೇವಲ 2 ಲಕ್ಷ ರೈತರು ಸೇರಿದರೆ ಹೆಚ್ಚು. ಆದರೆ ಧಾರವಾಡ ಕೃಷಿ ಮೇಳದಲ್ಲಿ 10-12 ಲಕ್ಷ ರೈತರು ಭಾಗಿಯಾಗುವುದನ್ನು ನೋಡಿದರೆ ಖುಷಿಯಾಗುತ್ತದೆ.
. ಡಾ| ಡಿ.ಕೆ. ಯಾದವ್‌,
ನಿರ್ದೇಶಕ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ 

Advertisement

Udayavani is now on Telegram. Click here to join our channel and stay updated with the latest news.

Next