Advertisement

ಧಾರಾನಗರಿಯಲ್ಲಿ ನುಡಿಜಾತ್ರೆ ಮುಗಿದ ಮೇಲೆ…

12:30 AM Jan 08, 2019 | |

ಧಾರವಾಡ: ಮೂರು ದಿನಗಳಿಂದ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದ ಮರುದಿನ, ಧಾರಾನಗರಿಯ ಯುವ ಸಾಹಿತಿಗಳು ಸಮ್ಮೇಳನದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ. ಕನ್ನಡತನ ಮತ್ತು ಕನ್ನಡದ ಅಸ್ಮಿತೆಯನ್ನು ದಾಖಲಿಸಿದ ಸ್ಥಳವನ್ನು ನೆನೆಯುತ್ತಿದ್ದಾರೆ.

Advertisement

ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುತ್ತದೆ ಎನ್ನುವ ನಿರೀಕ್ಷೆಯಿತ್ತಾದರೂ ಇಷ್ಟೊಂದು ಜನಸ್ಪಂದನೆ ಲಭಿಸುತ್ತದೆ ಎಂದು ನಂಬಿರಲಿಲ್ಲ. ಆದರೆ ಸಾಕಷ್ಟು ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ಬಂದಿದ್ದರಿಂದ ಸಮ್ಮೇಳನ ಯಶಸ್ವಿಯಾಗಿ ತೆರೆ ಕಂಡಿತು.

ಪುಸ್ತಕ ಮಳಿಗೆಗಳಲ್ಲಿ ಉತ್ತಮ ವ್ಯಾಪಾರವಾದರೆ, ಎಲ್ಲ ಗೋಷ್ಠಿಗಳಲ್ಲೂ ಜನರು ಸಕ್ರಿಯರಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇನ್ನು ಪ್ರಧಾನ ವೇದಿಕೆಯಲ್ಲಿ ನಡೆದ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಕ್ಕ ಜನಸ್ಪಂದನೆಯಿಂದ ಸಮ್ಮೇಳನ ಆಯೋಜಕರು ಸಂತಸಗೊಂಡಿದ್ದಾರೆ.

ಜಿಲ್ಲಾಡಳಿತ ಫುಲ್‌ಖುಷ್‌: ಸಾಹಿತ್ಯ ಸಮ್ಮೇಳನ ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಆಗಬೇಕು ಎನ್ನುವ ಹಿರಿಯ ಸಾಹಿತಿಗಳ ಒತ್ತಡ ಬದಿಗಿಟ್ಟು ಜಿಲ್ಲಾಡಳಿತ ಸಮ್ಮೇಳನವನ್ನು ಕೃಷಿ ವಿವಿ ಆವರಣಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಜನರು ಅಷ್ಟು ದೂರ ಬರುತ್ತಾರೋ ಇಲ್ಲವೋ ಎನ್ನುವ ಭಯ ಜಿಲ್ಲಾಡಳಿತಕ್ಕಿತ್ತು.

ಆದರೆ, ಮೂರು ದಿನವೂ ಭಾರೀ ಜನಸ್ತೋಮ ಹರಿದು ಬಂದಿದ್ದರಿಂದ ಜಿಲ್ಲಾಡಳಿತ ಫುಲ್‌ ಖುಷಿ ಪಟ್ಟಿದೆ.

Advertisement

ಅಸಮಾಧಾನ: ಈ ಮಧ್ಯೆ ಕಸಾಪ ಮಾಡಿದ ಅವಾಂತರ ಗಳ ಬಗ್ಗೆಯೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರನ್ನು ಸಾಹಿತ್ಯ ಸಮ್ಮೇಳನ ಆಯೋಜಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅಷ್ಟೇಯಲ್ಲ, ನಾಡೋಜ ಕಣವಿ ಅವರನ್ನು ಮನೆಗೆ ಹೋಗಿ ಆಹ್ವಾನಿಸಿದಂತೆ ಪಟ್ಟಣ ಶೆಟ್ಟಿ ಅವರನ್ನೂ ಆಹ್ವಾನಿಸಬೇಕಿತ್ತೆಂಬ ಮಾತು ಕೇಳಿಬರುತ್ತಿದೆ. ಸಮ್ಮೇಳನ ಸ್ಥಳ, ವೇದಿಕೆ, ಪುಸ್ತಕ ಮಳಿಗೆ ಸಾಲು ಎಲ್ಲೆಡೆ ವಿಪರೀತ ಧೂಳು ಆವರಿಸಿತ್ತು. ಇದರಿಂದ ಸಾಹಿತ್ಯ ಪ್ರೇಮಿಗಳು ಹೇಳಲಾಗದ ಹಿಂಸೆ ಅನುಭವಿಸಿದರು. ಪಾರ್ಕಿಂಗ್‌ ವ್ಯವಸ್ಥೆಯಿಂದಲೂ ಕಿರಿಕಿರಿಯಾಯಿತು. ಪ್ರಧಾನ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವ ಸಾಹಿತಿಗಳ ಸೆಲ್ಫಿ ಕ್ರೇಜ್‌ ಸಮ್ಮೇಳನ ಮುಗಿದ ಮರುದಿನ ಸೋಮವಾರವೂ ಮುಂದುವರಿದಿತ್ತು.

ಸಮ್ಮೇಳನ ಐತಿಹಾಸಿಕ ಯಶಸ್ಸು ಕಂಡಿದೆ. ಪುಸ್ತಕ ಮಳಿಗೆಯಲ್ಲಿ 3 ಕೋಟಿ ರೂ.ಗಳಷ್ಟು ವಹಿವಾಟು ಆಗಿದೆ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದೆವು. ಒಟ್ಟಾರೆ ಜಿಲ್ಲಾಡಳಿತ,ಹಿರಿಯ ಸಾಹಿತಿಗಳು ಮತ್ತು ಮಾಧ್ಯಮಗಳ ಸಹಕಾರವನ್ನು ನಾನು ಎಂದಿಗೂ ಮರೆಯಲ್ಲ.
– ಡಾ.ಲಿಂಗರಾಜ ಅಂಗಡಿ,
ಕಸಾಪ ಜಿಲ್ಲಾಧ್ಯಕ್ಷ

ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ಬಾಬ್ತುಗಳನ್ನುಜ.20ರೊಳಗೆ ತುಂಬಿ ಕೊಡುವಂತೆ ನಿರ್ದೇಶನ ನೀಡಿದ್ದೇನೆ. ಸಮ್ಮೇಳನಕ್ಕೆ ಒಂದೇ ಒಂದು ಕಪ್ಪುಚುಕ್ಕೆ ಬರದಂತೆ
ನೋಡಿಕೊಳ್ಳುವುದೇ ನನಗೆ ಮುಖ್ಯ.
– ದೀಪಾ ಚೋಳನ್‌, ಧಾರವಾಡ ಜಿಲ್ಲಾಧಿಕಾರಿ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next