Advertisement
ಇನ್ನು ದಾಸೋಹ ಪರಂಪರೆಯ ಕೊಂಡಿ ಎಂಬಂತಿರುವ ಧಾರವಾಡದ ಮುರುಘಾಮಠದ ಹೆಸರಿಟ್ಟಿರುವ ನುಡಿಜಾತ್ರೆಯ ದಾಸೋಹ ಪ್ರಾಂಗಣ ಶರಣ ಸಂಸ್ಕೃತಿಯ ಪ್ರತಿಬಿಂಬದಂತೆ ಕಾಣುತ್ತಿದೆ. ಯಾವ ಸ್ಥಳದಲ್ಲಿ ಪ್ರತಿವರ್ಷ ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತ ಕೃಷಿ ಜಾತ್ರೆ ನಡೆಯುತ್ತಿತ್ತೋ ಅದೇ ಸ್ಥಳದಲ್ಲಿ ಐತಿಹಾಸಿಕ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವುದಕ್ಕೆ ಈ ಭಾಗದ ರೈತರು, ಕಾರ್ಮಿಕರು,ಸಾಂಸ್ಕೃತಿಕ ಮುಖಂಡರು, ಜಾನಪದ ಕಲಾವಿದರು ಒಟ್ಟಾರೆ ಯುವಜನರು ಹೆಮ್ಮೆ ಪಡುತ್ತಿದ್ದಾರೆ.
Related Articles
Advertisement
ತುಂಬ ಪ್ರತಿಕೂಲವಾದ ಹವಾಮಾನ ಹೊಂದಿರುವ ಧಾರವಾಡ ಜಿಲ್ಲೆ ಎರಡು ಪ್ರಮುಖ ನದಿಗಳಾದ ತುಂಗಭದ್ರಾ, ಮಲಪ್ರಭಾ ಉಪನದಿಗಳಾದ ಕುಮದ್ವತಿ, ಬೆನ್ನಿಹಳ್ಳ ಹಾಗೂ ಶಾಲ್ಮಲಾ ಧಾರವಾಡದ ಕಣ್ಮಣಿಯಾಗಿದ್ದು ಪೂರ್ವಕ್ಕೆ ಹರಿದು ಸಮುದ್ರ ಸೇರುತ್ತವೆ. ಈ ಪ್ರದೇಶದ ಮುಖ್ಯ ಉದ್ಯೋಗ ಕೃಷಿಯಾಗಿದೆ. ಇಲ್ಲಿನ ಮುಖ್ಯ ಬೆಳೆಗಳೆಂದರೆ, ಅಕ್ಕಿ, ಶೇಂಗಾ, ಜವೆಗೋಧಿ,ಕಡಲೆಕಾಯಿ, ಹತ್ತಿ, ಮೆಣಸಿನಕಾಯಿ. ಶಿಕ್ಷಣಕ್ಕೆ ಇಡೀ ನಾಡಿನಲ್ಲೇ ಹೆಸರುವಾಸಿಯಾಗಿದೆ. ಧಾರವಾಡಕ್ಕೆ ರಾಜ್ಯದ ಎಲ್ಲ ಭಾಗಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣವನ್ನು ಅರಸುತ್ತ ಇಲ್ಲಿಗೆ ಬರುತ್ತಾರೆ. ಎರಡು ವಿಶ್ವವಿದ್ಯಾಲಯಗಳು, ಎರಡು ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ, ಅರೆ ಸರ್ಕಾರಿ, ಪದವಿ ಕಾಲೇಜುಗಳು,ಹೈಸ್ಕೂಲ್‌ಗಳು ಶಿಕ್ಷಣ ರಂಗದಲ್ಲಿ ಪ್ರಸಿದ್ಧಿಯನ್ನು ಪಡೆದು ಶೈಕ್ಷಣಿಕ ಕೇಂದ್ರವಾಗಿ ಹೆಸರು ಮಾಡಿದೆ. ಎಂಟು ತಾಲೂಕುಗಳನ್ನು ಹಾಗೂ 202. 3 ಚ.ಕಿ.ಮೀ. ದಷ್ಟು ವಿಸ್ತೀರ್ಣ ಹೊಂದಿದೆ ಧಾರವಾಡ!
ಧಾರವಾಡ ಸಾಹಿತ್ಯಿಕ ರಂಗದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕ ರಂಗದಲ್ಲೂ ಅನೇಕ ಸಾಧನೆಗಳನ್ನು ಮಾಡಿದೆ. ಪಕ್ಕದ ಅವಳಿ ನಗರದಲ್ಲಿ ಹುಬ್ಬಳ್ಳಿಯ ಶ್ರೀಸಿದ್ದಾರೂಢರು, ಗದುಗಿನ ಶ್ರೀ ಶಿವಾನಂದರು, ಗರಗದ ಶ್ರೀ ಮಡಿವಾಳಪ್ಪನವರು, ಕಳಸದ ಶ್ರೀ ಗೋವಿಂದಭಟ್ಟರು, ಶಿಶುನಾಳದ ಶರೀಫಜ್ಜ, ಕನಕದಾಸರು- ಹೀಗೆ ಧಾರ್ಮಿಕ ಜಗತ್ತಿನ ಅತ್ಯಂತ ಶ್ರೀಮಂತರು ಇಲ್ಲಿ ಬಾಳಿ ಹೋದ ಐತಿಹ್ಯಗಳಿವೆ. ನಾಡಿನ ತುಂಬಾ ಇಲ್ಲಿಯವರೆಗೆ 83 ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಸಮ್ಮೇಳನಗಳು ನಡೆದಿವೆ.
ಮೊತ್ತಮೊದಲ ಬಾರಿಗೆ ಧಾರವಾಡದಲ್ಲಿ ಅಖೀಲ ಭಾರತ 4 ನೇ ಸಾಹಿತ್ಯ ಸಮ್ಮೇಳನವು 1918 ರ ಮೇ 11ರಿಂದ ಮೂರು ದಿನ ಜರಗಿತು. ಆಗ ಆರ್. ನರಸಿಂಹಾಚಾರ್ ಅಧ್ಯಕ್ಷರಾಗಿದ್ದರು. ಎರಡನೆಯ ಬಾರಿ 19ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳನ 1933 ಡಿಸೆಂಬರ್ 29ರಿಂದ ಮೂರು ದಿನ ಜರಗಿತು. ಆಗ ಅಧ್ಯಕ್ಷರು ವೈ. ನಾಗೇಶ್ ಶಾಸ್ತ್ರಿ ಅವರಾಗಿದ್ದರು. ಮೂರನೆಯ ಬಾರಿ ಅಂದರೆ 25 ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳನವು 1940ರ ಡಿಸೆಂಬರ್ 27ರಿಂದ ಮೂರು ದಿನಗಳ ಕಾಲ ಜರುಗಿದಾಗ ವೈ. ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷರಾಗಿದ್ದರು. 39ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳನ 1957ರ ಮೇ 7ರಿಂದ ಮೂರು ದಿನ ನಡೆದಾಗ ಕುವೆಂಪು ಅವರು ಅಧ್ಯಕ್ಷರಾಗಿದ್ದರು. 59ನೆಯ ಸಾಹಿತ್ಯ ಸಮ್ಮೇಳನವು 1990ರ ಮೇ 16ರಿಂದ 18ರವರೆಗೆ ನಡೆದಾಗ ಆರ್. ಸಿ. ಹಿರೇಮಠ ಅವರು ಅಧ್ಯಕ್ಷರಾಗಿದ್ದರು. ಇದಾದ ಮೇಲೆ 84 ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳವನ್ನು ಮತ್ತೆ ಧಾರವಾಡದಲ್ಲಿ ಆಯೋಜಿಸಲಾಗಿದೆ. ಚಂದ್ರಶೇಖರ ಕಂಬಾರರು ಅಧ್ಯಕ್ಷರಾಗಿರುವ ಈ ಸಮ್ಮೇಳನಕ್ಕೆ ಇವತ್ತಿಗೆ ಮೂರನೆಯ ದಿನ.
ಆದಿಕವಿ ಪಂಪನ ಜನ್ಮಸ್ಥಳ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಆಗಿದ್ದು ಸಾಹಿತ್ಯದ ತೀವ್ರತರವಾದ ಗಟ್ಟಿತನ ಬೆಳೆಯಲು ಇದು ಕಾರಣವಾಗಿದೆ. ಈ ನೆಲದಲ್ಲಿ ಅರಳಿದ ಸಾಹಿತ್ಯ ರತ್ನಗಳಾದ ಆಲೂರ ವೆಂಕಟರಾಯರಿಂದ ಹಿಡಿದು ಫ. ಗು.ಹಳಕಟ್ಟಿ, ಆನಂದಕಂದ, ಉತ್ತಂಗಿ ಚನ್ನಪ್ಪ, ದ. ರಾ. ಬೇಂದ್ರೆ, ವಿ. ಕೃ.ಗೋಕಾಕ, ವರದರಾಜ ಹುಯಿಲಗೋಳ, ಶಂಬಾ ಜೋಷಿ, ರಾಘವೇಂದ್ರ ಖಾಸನೀಸ, ರಾವ ಬಹದ್ದೂರ, ಕೀರ್ತಿನಾಥ ಕುರ್ತಕೊಟಿ, ಶ್ರೀರಂಗ, ಗಿರೀಶ ಕಾರ್ನಾಡ್, ಗಿರಡ್ಡಿಗೊವಿಂದರಾಜ, ಚಂದ್ರಶೇಖರ ಕಂಬಾರ, ಚಂಪಾ, ಎಂ. ಎಂ. ಕಲಬುರ್ಗಿ, ಗದಿಗಯ್ಯ ಹೊನ್ನಾಪೂರಮಠ, ಬಾಲಚಂದ್ರ ಘಾಣೆಕರ, ಬಸವರಾಜ ಕಟ್ಟಿಮನಿ, ಜಿ. ಎಸ್.ಅಮೂರ, ಸೋಮಶೇಖರ ಇಮ್ರಾಪೂರ, ಶಂಕರ ಮೊಕಾಶಿ ಪುಣೇಕರ, ಸಿದ್ದಲಿಂಗ ಪಟ್ಟಣಶೆಟ್ಟಿ, ಶಾಂತಾದೇವಿ ಕಣವಿ, ಶಾಂತಾದೇವಿ ಮಾಳವಾಡ, ಪಾಟೀಲ ಪುಟ್ಟಪ್ಪ, ಪಂಚಾಕ್ಷರಿ ಹಿರೇಮಠ, ಚನ್ನವೀರ ಕಣವಿ, ರಾಜಶೇಖರ ಭೂಸನೂರಮಠ… ಹೀಗೆ ಪಟ್ಟಿ ಉದ್ದವಿದೆ.
ಧಾರವಾಡದ ಸ್ಮತಿ ಸಮೃದ್ಧ ; ವರ್ತಮಾನವೂ ಸಿರಿವಂತವೇ. ಈ ಸಮ್ಮೇಳನದ ಸಂಭ್ರಮವನ್ನು ನೋಡಿದರೆ ತಿಳಿಯುವುದಿಲ್ಲವೆ?
ಬಸವಣ್ಣೆಪ್ಪ ಕಂಬಾರ