Advertisement

ಧಾರವಾಡ: ಬಹುತ್ವದಲ್ಲಿ ಪುಟಿದೆದ್ದ ಭಾರತ ಬಂಧುತ್ವ

06:28 PM Jan 17, 2023 | Team Udayavani |

ಧಾರವಾಡ: ಐದು ದಿನಗಳ ಕಾಲ ಕುಣಿದು ಕುಪ್ಪಳಿಸಿದ ಸುಂದರ ನೆನಪುಗಳೆಲ್ಲ ಈಗ ಬದುಕಿನ ಖಾತೆಯ ಬ್ಯಾಲೆನ್ಸ್‌, ಒಬ್ಬರಿಗೆ ತಂಡಗಳನ್ನು ಗೆಲ್ಲಿಸಿ ಬಹುಮಾನ ಪಡೆದ ಸಂಭ್ರಮ, ಇನ್ನೊಬ್ಬರಿಗೆ ಬಹುಮಾನಕ್ಕಿಂತಲೂ ಭಾಗಿಯಾಗಿದ್ದೇ ಖುಷಿ, ವಿವಿಧತೆ ಇದ್ದರೂ ಏಕತೆಯ ಪರಮಾನ್ನ, ರಾಷ್ಟ್ರಭಕ್ತಿಯ ಉತ್ಕರ್ಷಕ್ಕೆ ಭಾರತ ಮಾತಾ ಕೀ ಜೈ ಎಂಬ ಜಯಘೋಷ, ಒಟ್ಟಿನಲ್ಲಿ ಸೇರಿದ ಬಹುತ್ವದಲ್ಲಿ ಕೊನೆಗೆ ಮೂಡಿದ್ದು ಬಂಧುತ್ವ.

Advertisement

ಹೌದು. ಚಂದನ ಹೈ ಇಸ್‌ ದೇಶ ಕೀ ಮಿಟ್ಟಿ … ತಪೋಭೂಮಿ ಹರ್‌ ಗ್ರಾಮ ಹೈ… ಹರ ಬಾಲಾ ದೇವಿಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ ಹೈ (ಈ ದೇಶದ ಮಣ್ಣು ಗಂಧವಿದ್ದಂತೆ, ಇಲ್ಲಿನ ಪ್ರತಿ ಗ್ರಾಮವೂ ತಪೋಭೂಮಿ ಹಾಗೂ ಪ್ರತಿ ಬಾಲಕಿ ದೇವಿಯಾದರೆ ಪ್ರತಿಯೊಬ್ಬ ಬಾಲಕ ರಾಮನಿದ್ದಂತೆ) ಕವಿಯೊಬ್ಬ ಭಾರತ ದೇಶದ ಸಂಸ್ಕೃತಿಯನ್ನು ಬಿಂಬಿಸಿದ ಪರಿ ಇದು. ಅಕ್ಷರಶಃ ಈ ಹಾಡು ಮೆಲಕು ಹಾಕುವಂತಿತ್ತು 26ನೇ ರಾಷ್ಟ್ರೀಯ ಯುವಜನೋತ್ಸವ. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬ ಯುವಕನು ದೇಶಭಕ್ತಿಯ ಪಾಠ ಕಲಿತರಲ್ಲದೇ, ವಿವಿಧತೆಯಲ್ಲಿ ಏಕತೆ ಸಂಸ್ಕೃತಿ ಮತ್ತು ಭಾರತದ ದೇಶೀ ಪರಂಪರೆಯ ಪಾಲನೆಗೆ ಕಟಿಬದ್ಧರಾಗುವ ನಿಶ್ಚಯ ಮಾಡಿಕೊಂಡರು.

ಸಂಸ್ಕೃತಿ ವಿನಿಮಯದ ದೃಷ್ಟಿಯಿಂದಲೂ ಯುವಜನೋತ್ಸವದಲ್ಲಿ ಎಲ್ಲೇ ಮುಖಾಮುಖಿಯಾದರೂ ಪರಸ್ಪರ ಹರ್ಷದಿಂದಲೇ ಎಲ್ಲಾ ತಂಡಗಳು ಖುಷಿ ಖುಷಿಯಾಗಿ ಮಾತನಾಡಿಕೊಂಡು ಸಂಭ್ರಮಿಸುವ ದೃಶ್ಯ ಕಂಡು ಬಂದರೆ, ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಕೂಡ ಎಲ್ಲಾ ರಾಜ್ಯಗಳ ಭಾಷಾ ಪ್ರೇಮಕ್ಕೆ ಒತ್ತು ಸಿಕ್ಕಿದ್ದು ಗೋಚರಿಸಿತು. ಆಹಾರ ವೈವಿಧ್ಯತೆಯನ್ನು ಎಲ್ಲರೂ ಒಮ್ಮನಸ್ಸಿನಿಂದ ಸ್ವೀಕರಿಸಿದರೆ, ಸ್ಪರ್ಧೆಗಳು ಹೆಸರಿಗೆ ಮಾತ್ರ ಇದ್ದಂತ್ತಿತ್ತು. ಅದರಲ್ಲಿನ ಸಾರವನ್ನು ಪ್ರಸ್ತುತಪಡಿಸಿದ ಕಲಾ ಪ್ರಕಾರಗಳನ್ನು ಯುವಶಕ್ತಿ ತೆರೆದ ಮನಸ್ಸಿನಿಂದ ನೋಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಸೆಲ್ಫಿ ಸಂಭ್ರಮಕ್ಕೆ ಖುಷಿ: ಇನ್ನು ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಧರಿಸಿದ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಸ್ಥಳೀಯರು ಧರಿಸಿ ಸಂಭ್ರಮಿಸಿದ್ದು ಯುವಜನೋತ್ಸವದಲ್ಲಿ ಕಂಡು ಬಂತು. ಪಂಜಾಬ್‌ನ ಬಾಂಗಡಾ ನೃತ್ಯದ ಬಟ್ಟೆ ತೊಟ್ಟವರು, ಮಹಾರಾಷ್ಟ್ರದ ಸಂತ ತುಕಾರಾಮ ದಿಂಡಿಯ ಧಿರಿಸು, ರಾಜಸ್ತಾನದ ಕುಣಿತದ ವೇಷ, ಕೇರಳದ ಬುಡಕಟ್ಟು ವೇಷ, ನಾಗಾಲ್ಯಾಂಡ್‌, ಮಣಿಪುರ ಮತ್ತು ಅಸ್ಸಾಂನ ವಿಭಿನ್ನ ಸಾಂಸ್ಕೃತಿಕ  ಬಟ್ಟೆ ಧರಿಸಿದವರೊಂದಿಗೆ ಯುವಜನೋತ್ಸವದಲ್ಲಿ ಭಾಗಿಯಾದ ಸಾರ್ವಜನಿಕರು ಮುಚ್ಚುಮರೆ ಇಲ್ಲದೇ ಅವರನ್ನು ಕೇಳಿ ಕೇಳಿ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಯುವಜನೋತ್ಸವದಲ್ಲಿ ಕಂಡು ಬಂತು. ಇನ್ನು ಆಹಾರ ವೈವಿಧ್ಯತೆಗೂ ಸ್ಥಳೀಯರು ಮಾರು ಹೋಗಿದ್ದು ಲಕ್ಷ ಲಕ್ಷ ರೂ.ಗಳನ್ನು ಮಳಿಗೆಯಲ್ಲಿದ್ದವರು ಎನಿಸಿದರು.

ಯುವ ಸಂಭ್ರಮವೇ ಸಂಕ್ರಾಂತಿ: ಇನ್ನು ಧಾರವಾಡಿಗರಿಗೆ ಈ ವರ್ಷ ಸಂಕ್ರಾಂತಿ ಸಂಭ್ರಮಕ್ಕಿಂತಲೂ ಹೆಚ್ಚಾಗಿ ಯುವಜನೋತ್ಸವ ಸಂಭ್ರಮವೇ ಅಧಿಕವಾಗಿತ್ತು. ಅದರಲ್ಲೂ ರವಿವಾರ ಇಡೀ ದಿನ ಕೆಸಿಡಿ, ಕೆಯುಡಿ, ಕೃಷಿ ವಿವಿ, ಕೆಲಗೇರಿ ಕೆರೆ ಸೇರಿದಂತೆ ಎಲ್ಲೆಲ್ಲಿ ಯುವಜನೋತ್ಸವದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವೋ ಅಲ್ಲೆಲ್ಲ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತ ದಾಂಗುಡಿ ಇಟ್ಟಿದ್ದು ಕಂಡು ಬಂತು. ಅದರಲ್ಲೂ ಸಂಜೆ ಕೆಸಿಡಿ ಮೈದಾನದತ್ತ ಹರಿದು ಬಂದ ಜನಪ್ರವಾಹದ ಹೊಡೆತಕ್ಕೆ ಭದ್ರತೆ ಕೈಗೊಳ್ಳುವ ಪೊಲೀಸರೇ ಕಕ್ಕಾಬಿಕ್ಕಿಯಾಗಿ ಹೋಗಿದ್ದರು.ಅಂದಾಜು 3 ಲಕ್ಷಕ್ಕೂ ಅಧಿಕ ಜನ ರವಿವಾರ ಯುವಜನೋತ್ಸವ ಎಲ್ಲಾ ಘಟಕಗಳಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

Advertisement

ಭಾವತೀರ ಯಾನ: ಇನ್ನು ಯುವಜನೋತ್ಸವ ಐದು ದಿನಗಳ ಕಾಲ ನಡೆದು ಸಮಾರೋಪಕ್ಕೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಉತ್ಸವ ಇನ್ನೆರಡು ದಿನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಾವೆಲ್ಲ ಸಂಭ್ರಮದಲ್ಲಿದ್ದೆವು. ಎಲ್ಲವನ್ನೂ ಮರೆತು ಆನಂದಿಸಿದೆವು. ಇಲ್ಲಿ ಬಹುತ್ವದ ನೆಲೆಗಳನ್ನು ಕಂಡೆವು. ಬಂಧುತ್ವದ ಸರಪಳಿಯಲ್ಲಿ ಬೆಸೆದುಕೊಂಡೆವು. ನಮ್ಮ ವೇಷ, ಭಾಷೆ, ಆಹಾರ ಎಲ್ಲವೂ ವಿಭಿನ್ನವಾದರೂ ಭಾರತ ಮಾತಾ ಕೀ ಜೈ ಎಂಬ ಒಂದೇ ಒಂದು ಘೋಷವಾಕ್ಯ ನಮ್ಮನ್ನೆಲ್ಲ ಜೋಡಿಸುತ್ತಿತ್ತು. ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆಯ ಸಂಗೀತ ರಸದೌತಣ ಎಲ್ಲವೂ ನಮ್ಮನ್ನು ಹಿಡಿದಿಟ್ಟವು. ಇದರಲ್ಲಿ ಭಾಗಿಯಾದ ನಾವೇ ಧನ್ಯರೆಂಬ ಧನ್ಯತಾ ಭಾವ ಯುವಕರಲ್ಲಿ ಮೂಡಿತಲ್ಲದೇ ಅಗಲುವುದು ಅನಿವಾರ್ಯವೆಂದು ಭಾರವಾದ ಮನಸ್ಸಿನಿಂದಲೇ ಯುವಜನೋತ್ಸವ ಸಮಾರೋಪದಲ್ಲಿ ಯುವಕರು ಪಾಲ್ಗೊಂಡು ಭಾವುಕರಾಗಿಯೇ ಪರಸ್ಪರ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.

ಫೇಡಾಕ್ಕೆ ಫಿದಾ
ದೇಶದ ವಿವಿಧ ರಾಜ್ಯಗಳಿಂದ ಧಾರವಾಡಕ್ಕೆ ಆಗಮಿಸಿದ್ದ ಯುವಕರು ಇಲ್ಲಿನ ವಾತಾವರಣ, ಇಲ್ಲಿನ ಆಹಾರ, ಉಡುಗೆ ತೊಡುಗೆ ಎಲ್ಲವನ್ನೂ ಮೆಚ್ಚಿಕೊಂಡರು. ಇಲ್ಲಿನ ಊಟ, ವಸತಿ ವ್ಯವಸ್ಥೆ ಬಗ್ಗೆ ಉತ್ತಮ ಅಭಿಪ್ರಾಯ ಇಟ್ಟುಕೊಂಡು ತಮ್ಮೂರಿನ ದಾರಿ ಹಿಡಿದರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಎಲ್ಲಾ ರಾಜ್ಯಗಳ ಯುವಕ-ಯುವತಿಯರನ್ನು ಸೆಳೆದು ನಿಲ್ಲಿಸಿದ್ದು ಇಲ್ಲಿನ ಸಂಸ್ಕೃತಿ. ಅದರಲ್ಲೂ ಧಾರವಾಡ ಫೇಡಾಕ್ಕೆ ಎಲ್ಲ ವಿದ್ಯಾರ್ಥಿಗಳು μದಾ ಆಗಿದ್ದಾರೆ. ಆಯೋಜಕರು ಮೊದಲ ದಿನದ ಕಿಟ್‌ನೊಂದಿಗೆ ಫೇಡಾದ ಬಾಕ್ಸ್ ಗಳನ್ನು ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲಾ 7500 ಜನರಿಗೂ ನೀಡಿದ್ದರು. ಆದರೆ ಅದನ್ನು ಎರಡೇ ದಿನದಲ್ಲಿ ಖಾಲಿ ಮಾಡಿದ ಸಾವಿರಾರು ಯುವಕರು ಸಮಯ ಸಿಕ್ಕಾಗಲೆಲ್ಲಾ ಮಿಶ್ರಾ ಮತ್ತು ಠಾಕೂರ ಸಿಂಗ್‌ ಫೇಡಾ ಮಳಿಗೆಗಳನ್ನು ಹುಡುಕಿಕೊಂಡು ಹೋಗಿ ಖರೀದಿಸಿಕೊಂಡು ಬಂದಿದ್ದಾರೆ. ಅದೂ ಅಲ್ಲದೇ ಕೊನೆಯ ದಿನ ಸಮಾರೋಪ ನಂತರ ಮಧ್ಯಾಹ್ನದವರೆಗೂ ಸಮಯ ಸಿಕ್ಕಿದ್ದರಿಂದ ತಮ್ಮ ಊರುಗಳಿಗೆ ಫೇಡಾ ಕೊಂಡೊಯ್ದಿದ್ದಾರೆ. ಹೊರ ರಾಜ್ಯಗಳಿಂದ ಬಂದ ಅನೇಕರು ನಮ್ಮಲ್ಲಿ ಫೇಡಾ ಖರೀದಿಸಿದ್ದಾರೆ. ಅವರಿಗೆಲ್ಲ ಉತ್ತಮ ದರ್ಜೆಯ ಪ್ರೇಶ್‌ ಫೇಡಾವನ್ನೇ ನಾವು ನೀಡಿದ್ದೇವೆ ಎನ್ನುತ್ತಾರೆ ಬಿಗ್‌ ಮಿಶ್ರಾದ ಗುರುದತ್‌.

ನಾನು ನನ್ನ ಜೀವನದಲ್ಲಿ ಸಾಕಷ್ಟು ದೊಡ್ಡ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಪಾರ್ಲಿಮೆಂಟ್‌ ನಲ್ಲಿ ಯುವಶಕ್ತಿ ಭಾಷಣ ಮಾಡಿದ್ದೇನೆ. ಆದರೆ ಧಾರವಾಡದ ಯುವಜನೋತ್ಸವ ನನ್ನಲ್ಲಿ ತುಂಬಿದ ಯುವ ಆಶಾವಾದ ಎಂದೆಂದಿಗೂ ಮರೆಯಲಾರದ್ದು. ನಾನು ಬಹುತ್ವದಲ್ಲಿ ಬಂಧುತ್ವ ಕಂಡೆ.
ಉಜ್ವಲ ದಡೀಚಾ, ರಾಜಸ್ತಾನ ಯುವಕ

ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next