ಧಾರವಾಡ: ಇಲ್ಲಿನ ಭಕ್ತರು ಉತ್ಕೃಷ್ಟ ವಿದ್ಯಾಕೇಂದ್ರವನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಮಾಳಮಡ್ಡಿಯ ವಿಶ್ವೇಶತೀರ್ಥ ಪಬ್ಲಿಕ್ ಸ್ಕೂಲ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಿಶ್ವೇಶತೀರ್ಥರು ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತಿದ್ದರು.ಶಾಲೆ-ಕಾಲೇಜುಗಳನ್ನು ನಿರ್ಮಿಸುವುದರೊಂದಿಗೆ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ
ಆರಂಭಿಸಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲತೆ ಕಲ್ಪಿಸಿದ್ದಾರೆ ಎಂದರು.
ವಿದ್ಯಾಕಾಶಿಯಲ್ಲಿ ಮತ್ತೊಂದು ಶಾಲೆ ಆರಂಭಗೊಳ್ಳುತ್ತಿರುವುದು ಹರ್ಷ ತಂದಿದೆ. ಮಾಳಮಡ್ಡಿಯ ವಿಶ್ವೇಶತೀರ್ಥ ಮಾರ್ಗದಲ್ಲಿ ವಿಶ್ವೇಶತೀರ್ಥ ಶಾಲೆ ಆರಂಭಗೊಂಡಿದೆ. ಪ್ರಹ್ಲಾದನಂಥ ಮಕ್ಕಳನ್ನು ರೂಪಿಸುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಬೇಕು. ಕೇವಲ ಗುರುಕುಲದ ಮಕ್ಕಳಿಗೆ ಮಾತ್ರವಲ್ಲ, ಲೌಕಿಕ ಶಿಕ್ಷಣ ಪಡೆಯುವ ಮಕ್ಕಳಿಗೂ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರ ಕಲಿಸುವುದು ಅವಶ್ಯಕ ಎಂದು ಹೇಳಿದರು.
ಜೆಎಸ್ಸೆಸ್ ಸಂಸ್ಥೆಯ ಕಾರ್ಯದರ್ಶಿ ಡಾ| ಅಜಿತಪ್ರಸಾದ ಮಾತನಾಡಿ, ಗುರುಕುಲಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗುರುಕುಲ ಆಧಾರಿತ ಶಿಕ್ಷಣ ನೀಡುವುದರಿಂದ ಶ್ರೀ ವಿಶ್ವೇಶತೀರ್ಥ ಸ್ಕೂಲ್ ನಿಸ್ಸಂದೇಹವಾಗಿ ಪ್ರಖ್ಯಾತ ಶಾಲೆಯಾಗಿ ಹೊರಹೊಮ್ಮಲಿದೆ ಎಂದರು. ಎಸ್.ಎಂ. ದಾಂಡೇವಾಲೆ ಮಾತನಾಡಿದರು. ಕೆ.ಆರ್. ದೇಶಪಾಂಡೆ, ಡಾ| ಆನಂದ ಪಾಂಡುರಂಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಪಾಲ್ಗೊಂಡು ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದರು. ಹು-ಧಾ
ಪಶ್ಚಿಮ ಕ್ಷೇತ್ರದ ಚುನಾವಣೆಯಲ್ಲಿ ಪುನರ್ ಸ್ಪರ್ಧಿಸಿರುವ ಅರವಿಂದ ಬೆಲ್ಲದ ಅವರಿಗೆ ಶ್ರೀ ಗಳು ಆಶೀರ್ವದಿಸಿ ಶುಭ ಕೋರಿದರು. ವಿಶ್ರಾಂತ ಕುಲಪತಿ ಡಾ| ಪ್ರಮೋದ ಗಾಯಿ, ಡಾ| ಎಸ್.ಆರ್. ಕೌಲಗುಡ್ಡ, ಶ್ರೀಕಾಂತ ಕೆಮ್ತೂರ ಇದ್ದರು.