ಧಾರವಾಡ: ನೂತನ ತಾಂತ್ರಿಕತೆಗಳ ಜೊತೆ ಜೊತೆಗೆ ಪರಿಸರ ಮತ್ತು ಕೃಷಿಗೆ ಪೂರಕವಾದ ಸುಸ್ಥಿರ ತಂತ್ರಜ್ಞಾನಗಳ ಶೋಧನೆಗೆ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಡಾ.ವಿ.ಆರ್.ದೇಸಾಯಿ ಹೇಳಿದರು.
ಇಲ್ಲಿನ ಐಐಟಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಮೊದಲ ಸ್ನೇಹ-ಮಿಲನ ಕಾರ್ಯಕ್ರಮ ನಿಮಿತ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಧಾರವಾಡ ಐಐಟಿ ಇನ್ನು ಅಂಬೇಗಾಲು ಇಡುತ್ತಿದೆ. ಇದಕ್ಕಿಗ ಏಳು ವರ್ಷಗಳಾಗಿದ್ದು, ಇಷ್ಟೇ ಅವಧಿಯಲ್ಲಿ ಸುತ್ತಮುತ್ತಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಗಳ ಜೊತೆಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ರೂಪಿಸಿದ್ದೇವೆ. ಕೆಲವು ವಿಶ್ವವಿದ್ಯಾಲಯಗಳ ಜೊತೆಗೆ ಕೈ ಜೋಡಿಸಿ ಒಡಂಬಡಿಕೆ ಕೂಡ ಮಾಡಿಕೊಂಡಿದ್ದೇವೆ ಎಂದರು.
ಕೊಳಚೆ ನೀರು ಶುದ್ಧಿಕರಣ, ನೀರಿನ ಮರು ಬಳಕೆ, ವೇದ ಕೃಷಿ, ಹನಿ ನೀರಾವರಿಯಂತ ವಿಚಾರಗಳು ಮೇಲ್ನೋಟಕ್ಕೆ ತಂತ್ರಜ್ಞಾನ ಎನ್ನಿಸುವುದಿಲ್ಲ. ಆದರೆ ಧಾರವಾಡ ಐಐಟಿ ಇಂತಹ ವಿಚಾರಗಳಿಗೆ ಮಹತ್ವ ಕೊಟ್ಟು ಸುಸ್ಥಿರ ತಂತ್ರಜ್ಞಾನವನ್ನು ವೃದ್ಧಿಗೊಳಿಸುತ್ತಿದೆ. ಕೆರೆಗಳ ಸಂರಕ್ಷಣೆ, ಪ್ರತಿಯೊಂದು ಹಳ್ಳಿಯಲ್ಲಿನ, ಪ್ರತಿಯೊಬ್ಬ ವ್ಯಕ್ತಿಯು ಉತ್ಪಾದಿಸುವ ಕೊಳಚೆ ನೀರನ್ನು ಸುಸ್ಥಿರ ತಂತ್ರಜ್ಞಾನದ ಮೂಲಕ ಮರು ಬಳಕೆಗೆ ಯೋಗ್ಯವಾಗಿ ಹೊರ ಬಿಡುವುದು ಹೇಗೆ? ಎಂಬುದನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದರು.
ಪರಿಸರ ಸ್ನೇಹಿ ಕ್ಯಾಂಪಸ್: ಐಐಟಿಯ ಹಿರಿಯ ಪ್ರಾಧ್ಯಾಪಕ ಸೂರ್ಯಪ್ರತಾಪ್ ಸಿಂಗ್ ಮಾತನಾಡಿ, ಧಾರವಾಡ ಐಐಟಿ ಕ್ಯಾಂಪಸ್ ದೇಶದಲ್ಲಿಯೇ ಪರಿಸರ ಸ್ನೇಹಿ ಕ್ಯಾಂಪಸ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದು, ಇಡೀ ಕ್ಯಾಂಪಸ್‌ಗೆ ಬೇಕಾಗುವ ಶಕ್ತಿ ಮತ್ತು ನೀರಿನ ಸ್ವಾವಲಂಬನೆ ಪಡೆದುಕೊಂಡಿದೆ. ಅಷ್ಟೇಯಲ್ಲ, ನುರಿತ ಪ್ರಾಧ್ಯಾಪಕ ವೃಂದಕ್ಕೆ ಸ್ಟ್ಯಾನ್‌ಫೋರ್ಡ್ ವಿಶ್ವದ್ಯಾಲಯ ಬಿಡುಗಡೆ ಮಾಡಿದ ವಿಶ್ವದ ಅತ್ಯಂತ ಪ್ರಭಾವಿ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡ ಐಐಟಿಯ ಡಾ.ಬಸವರಾಜ್ಪ್ಪ ಮತ್ತು ಡಾ.ಅಮರನಾಥ ಹೆಗಡೆ ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ವಿಚಾರ ಎಂದರು.
ಹುದ್ದೆಗಳ ಕೊರತೆಯಿದೆ: ಇನ್ನು ಧಾರವಾಡ ಐಐಟಿಯಲ್ಲಿ ಹುದ್ದೆಗಳ ಕೊರತೆ ಇರುವ ಬಗ್ಗೆ ಕೂಡ ಡಾ.ದೇಸಾಯಿ ಸರ್ಕಾರದ ಗಮನ ಸೆಳೆದಿದ್ದಾರೆ. ಹತ್ತು ಜನ ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕ ಇರಬೇಕು. 11 ಜನ ಬೋಧಕೇತರ ಸಿಬ್ಬಂದಿ ಇರಬೇಕು. ಇದು ಕೇಂದ್ರ ಸರ್ಕಾರವೇ ನಿಗದಿ ಪಡೆಸಿದ ನಿಯಮ. ಆದರೆ ಸದ್ಯಕ್ಕೆ ಐಐಟಿ ಧಾರವಾಡದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಸರ್ಕಾರ ಇದನ್ನು ಸರಿದೂಗಿಸುವ ವಿಶ್ವಾಸ ನನಗೆ ಇದೆ ಎಂದರು.
ಧಾರವಾಡ ಐಐಟಿಯ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟನೆಯಾಗಿ ಮೊದಲ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆಯಲ್ಲಿದ್ದು ಅವರೆಲ್ಲರನ್ನು ಒಟ್ಟಾಗಿ ಸೇರಿಸಿ, ಅವರಿಂದ ಐಐಟಿ ಧಾರವಾಡಕ್ಕೆ ಆಗಬೇಕಿರುವ ಉತ್ತಮ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ಡಾ.ದೇಸಾಯಿ ಹೇಳಿದರು.