Advertisement

ಧಾರವಾಡ- ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಧಾರವಾಡ ಹೈಕೋರ್ಟ್ ತಡೆ

08:48 AM Apr 23, 2022 | Team Udayavani |

ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಹೀಗಾಗಿ ಕೆಲ ಜನಪ್ರತಿನಿಧಿಗಳು, ರೈತರ ಮುಖಂಡರು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರಕಾರಿ ಭೂಮಿ ಬಳಕೆಗೆ ಸಲಹೆ ನೀಡಿದ್ದರು. ಇದರಿಂದ ರೈಲು ಮಾರ್ಗದ 5 ರಿಂದ 6 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ ಮರು ಸಮೀಕ್ಷೆ ಮಾಡಿತ್ತು.

ಬಳಿಕ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆ ಕೇಂದ್ರ ಕಚೇರಿಯಲ್ಲಿ 2021ರ ಅಕ್ಟೋಬರ್ 16ರಂದು ಜರುಗಿದ ಒಂಬತ್ತು ಜನ ಸಂಸತ್ತಿನ ಸದಸ್ಯರ ಸಭೆಯಲ್ಲಿ, ರೈತರು ಸೂಚಿಸಿದ ಮಾರ್ಗವನ್ನು ಬಿಟ್ಟು, ದೇಸೂರು ಮಾರ್ಗದಲ್ಲಿ ಕೃಷಿ ಭೂಮಿಯಲ್ಲಿಯೇ ಯೋಜನೆ ಪ್ರಾರಂಭಿಸಲು ಸಂಸತ್ತಿನ ಸದಸ್ಯರು, ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದ್ದರು.

ಇದರಿಂದ ಕೃಷಿ ಭೂಮಿ ಕಳೆದುಕೊಳ್ಳುವ ದೇಸೂರು ಗ್ರಾಮದ ಪ್ರಸಾದ್ ಪಾಟೀಲ ಸೇರಿ 15ಕ್ಕೂ ರೈತರು, ಹುಬ್ಬಳ್ಳಿಯಲ್ಲಿ ಸಂಸತ್ತಿನ ಒಂಬತ್ತು ಸದಸ್ಯರು, ಧಾರವಾಡ- ಬೆಳಗಾವಿ ರೈಲ್ವೆ ನೂತನ ಮಾರ್ಗದ ನಿರ್ಮಾಣಕ್ಕೆ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರ ಗೋಕಾಕರ ಅವರು, ಉದ್ದೇಶಿತ ಮಾರ್ಗವು ಗುರ್ಲಗುಂಜಿ, ದೇಸೂರು, ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗೇನಹಾಳ್, ಕೆಕೆ ಕೊಪ್ಪ ಮತ್ತು ಹಲಗಿಮರಡಿ ಗ್ರಾಮಗಳ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಾದ ಸುಮಾರು ಶೇ. 80ರಷ್ಟು ಕೃಷಿ ಭೂಮಿ ಫಲವತ್ತಾಗಿದೆ. ಜೊತೆಗೆ ಅಲ್ಲಿನ ನೂರಾರು ರೈತರು ಆ ಭೂಮಿಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ರೈಲ್ವೆ ನೂತನ ಮಾರ್ಗ ನಿರ್ಮಿಸಲು ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾವನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಾಪೀಠಕ್ಕೆ ಮನವಿ ಮಾಡಿದರು.

Advertisement

ವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಟ್ಟು, ನೂತನ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 2021ರ ಅ. 16ರಂದು ತೆಗೆದುಕೊಂಡ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next