ಧಾರವಾಡ: ನೊವಲ್ ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರದ ನಿರ್ದೇಶನದ ಅನುಸಾರ ಎಚ್ಚರಿಕೆ ಕ್ರಮಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಕೊರೊನಾದ ಲಕ್ಷಣಗಳು ಇಲ್ಲದಿದ್ದರೂ ಸಹ ನೆಗಡಿ, ಕೆಮ್ಮು, ಸೀನಿನಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಪ್ರತ್ಯೇಕ ಫ್ಲೂ ಕಾರ್ನರ್ ಸ್ಥಾಪಿಸಬೇಕು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿ ಭಯ ನಿವಾರಿಸಬೇಕು. ರೋಗ ಲಕ್ಷಣ ಇರುವವರು ಮತ್ತು ಚಿಕಿತ್ಸೆ ನೀಡುವ ನರ್ಸಿಂಗ್ ಮತ್ತು ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಸಾಮಾನ್ಯ ಜನರಿಗೆ ಮಾಸ್ಕ್ ಬಳಕೆಯ ಅಗತ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ನೊವಲ್ ಕೊರೊನಾ ವೈರಸ್ ತಡೆಗಟ್ಟಲು ಈಗ ಪಾಲಿಸುತ್ತಿರುವ ಕ್ರಮಗಳನ್ನು ಮುಂದುವರಿಸಬೇಕು. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕೆಯಾಗಿ ಕೆಮ್ಮು, ನೆಗಡಿ, ಸೀನಿನಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಫ್ಲೂ ಕಾರ್ನರ್ ಸ್ಥಾಪಿಸಿ ಚಿಕಿತ್ಸೆ ನೀಡಬೇಕು. ಕೆಮ್ಮು, ನೆಗಡಿ, ಸೀನಿನಿಂದ ಬಳಲುತ್ತಿರುವವರು ಕೊರೊನಾ ರೋಗದ ಭೀತಿಗೆ ಒಳಗಾಗಬೇಕಿಲ್ಲ. ಆದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಅರೆ ವೈದ್ಯಕೀಯ ಸಿಬ್ಬಂದಿಗೆ ನಿರಂತರ ತರಬೇತಿ ನೀಡಿ ಸಂವೇದನಾಶೀಲತೆ ಹೆಚ್ಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಮಿತವಾಗಿ ನೀಡುವ ಸಲಹೆಗಳನ್ನು ಖಾಸಗಿ ಆಸ್ಪತ್ರೆಗಳೂ ಕೂಡ ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ಸಲಹೆಗಳನ್ನು ಅಧಿಕೃತವಾಗಿ ತ್ವರಿತವಾಗಿ ಖಾಸಗಿ ಆಸ್ಪತ್ರೆಗಳಿಗೆ ತಲುಪಿಸಲಾಗುತ್ತದೆ. ರೋಗದ ಲಕ್ಷಣ ಇರುವವರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸುವುದು, ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್‌ಗಳಲ್ಲಿ ದಾಖಲಿಸುವುದು, ಅನುಸರಿಸಬೇಕಾದ ಚಿಕಿತ್ಸಾ ವಿಧಾನ ಎಲ್ಲದಕ್ಕೂ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಬೇಕು. ಪರಿಸ್ಥಿತಿ ಎದುರಿಸಲು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸಹಕಾರ ಅಗತ್ಯವಾಗಿದೆ ಎಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಎಲ್ಲ ಜಾತ್ರೆ, ಉರುಸು, ಧಾರ್ಮಿಕ ಆಚರಣೆಗಳು ರದ್ದುಗೊಂಡಿವೆ. ಧಾರ್ಮಿಕ ಮುಖಂಡರು ಸ್ವಯಂಪ್ರೇರಿತರಾಗಿ ಇವುಗಳ ಆಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಹಕರಿಸಲು ಕೋರಬೇಕು. ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಬೇಕು. ಅವರ ವ್ಯಾಪ್ತಿಯಲ್ಲಿ ವಿದೇಶಗಳಿಂದ ಬಂದಿರುವ ನಿವಾಸಿಗಳ ಬಗ್ಗೆ ಮಾಹಿತಿ ಕ್ರೋಢಿಕರಿಸಬೇಕು ಎಂದು ಸಲಹೆ ನೀಡಿದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಶಿವಕುಮಾರ ಮಾನಕರ, ಜಿಲ್ಲಾ ಸಮೀಕ್ಷಣಾ ಧಿಕಾರಿ ಡಾ| ಸುಜಾತಾ ಹಸವಿಮಠ, ಕಿಮ್ಸ್ ವೈದ್ಯಕೀಯ ನಿರ್ದೇಶಕ ಡಾ|ಅರುಣಕುಮಾರ, ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಾಧಿ ಕಾರಿ ಡಾ| ರವಿ, ಎಸ್‌ಡಿಎಂ ಆಸ್ಪತ್ರೆಯ ಡಾ| ವಿಜಯ ಕುಲಕರ್ಣಿ, ಡಾ| ಬಲರಾಮ ನಾಯಕ್, ಡಾ| ಕಿರಣ ಹೆಗಡೆ, ಡಾ|ಎಸ್.ಎಂ. ಹೊನಕೇರಿ, ಡಾ| ಎಸ್.ಎಂ. ನಿಂಬಣ್ಣವರ, ಡಾ| ತನುಜಾ, ಡಾ| ಶ್ರೀನಿವಾಸ, ಡಾ| ಭಾರತಿ ಕೊರ್ಲಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಸಂಗಮೇಶ ಕಲಹಾಳ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಇದ್ದರು.