ಬೆಂಗಳೂರು: ಬೆಳೆಗಳಿಗೇ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೆ, ಇಲ್ಲೊಬ್ಬ ರೈತ ತನ್ನ ಬೈಕ್ ಅನ್ನೇ ಬಂಗಾರದ ನೀರಲ್ಲಿ ಅದ್ದಿ ತೆಗೆಯುವ ಮೂಲಕ ಸುದ್ದಿಯಾಗಿದ್ದಾನೆ! ಧಾರವಾಡ ಸಮೀಪದ ಹಳ್ಳಿಯೊಂದರಲ್ಲಿ ಬಸವರಾಜ ಎಂಬ ರೈತ ತಮ್ಮಲ್ಲಿದ್ದ ಎನ್‌ಫೀಲ್ಡ್ ಬೈಕ್‌ಗೆ ಚಿನ್ನದ ಲೇಪನ ಮಾಡಿಸಿದ್ದಾರೆ. ಈ ಮೂಲಕ ಸುತ್ತಲಿನ ಹಳ್ಳಿಗಳಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾರೆ. ಬೆಳಗಾದರೆ ರಸ್ತೆಗಿಳಿಯುವ ಫಳ ಫಳ ಹೊಳೆಯುವ ‘ಚಿನ್ನದ ಬೈಕ್’ ಈಗ ನೋಡುಗರ ಕಣ್ಣು ಕುಕ್ಕುತ್ತಿದೆ. ನಿತ್ಯ ಬೈಕ್ ನೋಡಲಿಕ್ಕಾಗಿಯೇ ಬಸವರಾಜರ ಮನೆಗೆ ಜನ ಬರುತ್ತಿದ್ದಾರೆ.
ಈ ಮೊದಲು ಕೆಂಪು ಬಣ್ಣದ ಎನ್‌ಫೀಲ್ಡ್ (ಬುಲೆಟ್) ಬೈಕ್ ಅನ್ನು ತದನಂತರ ಬಸವರಾಜ ಸಂಪೂರ್ಣವಾಗಿ ಬಣ್ಣ ತೆಗೆದುಹಾಕಿ, ಅಪ್ಪಟ ಚಿನ್ನದ ಲೇಪನವನ್ನು ಬಳಿಸಿದ್ದಾರೆ. ಬೈಕ್‌ನ ಗಾರ್ಡ್, ಟೂಲ್ ಬಾಕ್ಸ್, ಬ್ಯಾಟರಿಯಿಂದ ಹಿಡಿದು ಪ್ರತಿ ಯೊಂದು ಭಾಗವೂ ಬಂಗಾರದ ನೀರಿನಲ್ಲಿ ಅದ್ದಿ ತೆಗೆಯಲಾಗಿದೆ.ಇದಕ್ಕಾಗಿ ಬಸವರಾಜ, ಸುಮಾರು 4 ವರ್ಷಗಳ ಕಾಲ ಅಕ್ಕಸಾಲಿಗರೊಬ್ಬರ ಬಳಿ ಬಿಟ್ಟಿದ್ದರು. ಇದಕ್ಕೆ 9 ಲಕ್ಷ ರೂ. ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಇದು “ಚಿನ್ನದ ಬುಲೆಟ್’ ಆಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಅದರ ಮೌಲ್ಯ ಷೋರೂಂಗಿಂತ ಹತ್ತು ಪಟ್ಟು ಹೆಚ್ಚಳವಾಗಿದೆ. ಅಕ್ಕಸಾಲಿಗರ ಅಂಗಡಿಯಿಂದ ಈಚೆಗಷ್ಟೇ ಬಂದಿಳಿದ ಈ ಬೈಕ್ ಅನ್ನು ಧಾರವಾಡದಿಂದ ಊರಿನವರೆಗೆ ದಾರಿಯುದ್ದಕ್ಕೂ ಪಟಾಕಿ ಹೊಡೆಯುತ್ತಾ ಮೆರವಣಿಗೆಯಲ್ಲಿ ಕೊಂಡೊಯ್ದುದನ್ನು ನೋಡಿದ ಜನ ಬಾಯಿ ಮೇಲೆ ಬೆರಳಿಟ್ಟಿದ್ದರು. ಬಸವರಾಜ ಆಗರ್ಭ ಶ್ರೀಮಂತರೇನೂ ಅಲ್ಲ. ಸುಮಾರು 2 -3 ಎಕರೆ ಜಮೀನು ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಯೋಜನೆಯೊಂದರಡಿ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪ್ರತಿಯಾಗಿ 25-30 ಲಕ್ಷ ರೂ. ಪರಿಹಾರ ರೂಪದಲ್ಲಿ ಬಂದಿತ್ತು. ಈ ಬಗ್ಗೆ ಬಸವರಾಜ ಅವರನ್ನು ‘ಉದಯವಾಣಿ’ ಸಂಪರ್ಕಿಸಿದಾಗ, ಚಿನ್ನದ ಬೈಕ್‌ನ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದರು. ‘ನಮ್ಗೆ ಪತ್ತಾರವ್ನು (ಅಕ್ಕಸಾಲಿಗ) ಭಾಳ ಪರಿಚಯ್ದವ್ನು ಇದ್ದ. ಅವ ಫ್ರೀ ಆಗಿ ಮಾಡಿಕೊಟ್ಟಾನ. ಅವ್ನು ತನ್ನ ವಿಳಾಸ ಅಥವಾ ಮೊಬೈಲ್ ನಂಬರ್ ಯಾವುದನ್ನೂ ಯಾರಿಗೂ ಕೊಡಬ್ಯಾಡ್ರಿ ಅಂತ ಹೇಳ್ಯಾನ’ ಎಂದು ಫೋನ್ ಕರೆ ಕಡಿತಗೊಳಿಸಿದರು.
ನಿದ್ದೆಗೆಡಿಸಿದ ಚಿನ್ನದ ಬೈಕ್!
ಚಿನ್ನದಿಂದ ಲೇಪಿತವಾಗಿರುವುದರಿಂದ ಈ ಬೈಕ್ ನಿರ್ವಹಣೆ ಸ್ವಲ್ಪ ಸೂಕ್ಷ್ಮವಾಗಿರಬೇಕಾಗುತ್ತದೆ. ಮಳೆ ಯಲ್ಲಿ ಇದನ್ನು ಹೊರಗೆ ತೆಗೆಯುವಂತಿಲ್ಲ. ಎಲ್ಲೆಂದ ರಲ್ಲಿ ಇಟ್ಟು ಹೋಗುವಂತೆಯೂ ಇಲ್ಲ. ರಾತ್ರಿ ಸುರಕ್ಷಿತ ಜಾಗದಲ್ಲಿ ನಿಲ್ಲಿಸಬೇಕಾಗುತ್ತದೆ. ಹಾಗಾಗಿ, ಹುರುಪಿನಲ್ಲಿ ಚಿನ್ನದ ಬಣ್ಣಕ್ಕೆ ಪರಿವರ್ತಿಸಿದರು. ಈಗ ಅದಕ್ಕೆ ನಿರಂತರ ಕಾವಲು ಇಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಇದು ಬಸವರಾಜ ಅವರ ನಿದ್ದೆಗೆಡಿಸಿದೆ ಎಂದೂ ಗ್ರಾಮಸ್ಥರು ಹೇಳುತ್ತಾರೆ.
— ವಿಜಯ್ ಕುಮಾರ್ ಚಂದರಗಿ