ಧಾರವಾಡ: ಅಡುಗೆ ಅನಿಲ ತುಂಬಿದ ಟ್ಯಾಂಕರ್ ಲಾರಿಯೊಂದು ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡಿದ್ದು, ಟ್ಯಾಂಕರ್ ನಿಂದ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆಯಾದ ಪರಿಣಾಮ ರಾಷ್ಟೀಯ ಹೆದ್ದಾರಿ 4 ಬಂದ್ ಮಾಡಿದ ಘಟನೆ ಧಾರವಾಡ ಹೈಕೋರ್ಟ್ ಬಳಿ ಬುಧವಾರ ನಡೆದಿದೆ.
ಅಡುಗೆ ಅನಿಲ ತುಂಬಿದ ಎಂಟು ಚಕ್ರವುಳ್ಳ ಲಾರಿಯನ್ನು ಹೈಕೋರ್ಟ್ ಬಳಿಯ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಚಾಲಕ ದಾಟಿಸಲು ಹೋಗಿದ್ದಾನೆ. ಆದರೆ ಅಂಡರ್ ಪಾಸ್ ಚಿಕ್ಕದು ಇರುವ ಕಾರಣ ದೊಡ್ಡದಾದ ಲಾರಿ ಸಿಲುಕಿಕೊಂಡಿದ್ದು, ಸಿಲುಕಿದ್ದ ಲಾರಿ ಹೊರ ತೆಗೆಯಲು ಚಾಲಕ ಪ್ರಯತ್ನಿಸಿದ್ದು, ಈ ವೇಳೆ ಟ್ಯಾಂಕರ್ ಗೆ ಧಕ್ಕೆಯಾಗಿ ಅನಿಲ ಸೋರಿಕೆ ಆರಂಭಗೊಂಡಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಇದರಿಂದ ಗಾಬರಿಯಾದ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಈ ವೇಳೆ 500 ಮೀಟರ್ ವ್ಯಾಪ್ತಿಯಲ್ಲಿ ಅನಿಲ ಸೋರಿಕೆಯಾಗಿದ್ದು, ಸಂಜೆಯಿಂದ ರಾತ್ರಿವರೆಗೂ ಸೋರಿಕೆಯಾಗುತ್ತಲೇ ಇತ್ತು. ಇಡೀ ವಾತಾವರಣದಲ್ಲಿ ಅನಿಲ ಸೋರಿಕೆಯ ವಿಷಯ ತಿಳಿಯುತ್ತಿದ್ದಂತೆಯೇ ಆತಂಕ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನೇ ಬಂದ್ ಮಾಡಲಾಗಿದೆ. ಹೀಗಾಗಿ ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಮಾಡಿರುವ ಪೊಲೀಸರು, ಬ್ಯಾರಿಗೇಡ್ ಹಾಕಿ ರಾಷ್ಟೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಿದ್ದಾರೆ.
ಚಾಲಕನ ನಿರ್ಲಕ್ಷ್ಯದಿಂದ ಈ ಪ್ರಮಾದ ಆಗಿದೆ. ಇದನ್ನು ಹೊರ ತೆಗೆಯಲು ಪ್ರಯತ್ನ ನಡೆಯುತ್ತಿದ್ದು, ಸದ್ಯಕ್ಕೆ ರಾ.ಹೆ. 4 ರಲ್ಲಿ ವಾಹನ ಸಂಚಾರ ನಿಲ್ಲಿಸಿದ್ದು, ಶೀಘ್ರವೇ ಅನಿಲ ಸೋರಿಕೆ ಲಾರಿಯನ್ನು ಹೊರ ತೆಗೆಯಲಾಗುವುದು.
-ಲೋಕೇಶ ಜಗಳಾಸರ,ಎಸ್ಪಿ, ಧಾರವಾಡ