ಧಾರವಾಡ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಾಗುವ ಒಟ್ಟು 58 ವಾದ್ಯಗಳ ಪೈಕಿ 48 ವಾದ್ಯಗಳು ರೂಪುಗೊಳ್ಳುವ ಮರಗಳ ಸಸಿಗಳನ್ನು, ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ನೂತನವಾಗಿ ರೂಪಿಸಿದ “ಸ್ವರ ವನ’ದಲ್ಲಿ ನೆಡಲಾಗುತ್ತಿದೆ.
ಶಾಸ್ತ್ರೀಯ ಸಂಗೀತದ ತವರು ಧಾರವಾಡಕ್ಕೆ ಇದೊಂದು ವಿಶೇಷ ಮೆರಗು. ಶಿರಸಿಯ ಯೂತ್ ಫಾರ್ ಸೇವಾ ಸಂಯೋಜಕ, ಪರಿಸರವಾದಿ ಉಮಾಪತಿ ಭಟ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಈ “ಸ್ವರವನ’ ರೂಪಿತವಾಗುತ್ತಿದೆ.
ಡಿ.8ರಂದು ಸಂಜೆ 4:00 ಗಂಟೆಗೆ ಹಳ್ಳಿಗೇರಿಯ ನೇಚರ್ ಫಸ್ಟ್ ಕೋ ವಿಲೇಜ್ ನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಮನಗುಂಡಿಯ ಚೆನ್ನಯ್ಯನಗಿರಿ ಮಹಾಮನೆ ಆಶ್ರಮದ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಿಜಗುಣ ಪುರಂದರ ಪ್ರಶಸ್ತಿ ಪುರಸ್ಕೃತ ಪಂ| ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಅವರು ಸ್ವರವನದಲ್ಲಿ ಸಸಿ ನೆಟ್ಟು ಉದ್ಘಾಟಿಸಲಿದ್ದಾರೆ. ಶಿರಸಿಯ ಪರಿಸರವಾದಿ ಉಮಾಪತಿ ಭಟ್ ಕೆ.ವಿ. ಪ್ರಾಸ್ತಾವಿಕ ಮಾತನಾಡಲಿದ್ದಾರೆ.
ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ, ಏಕ ವ್ಯಕ್ತಿ ತಾಳ ಮದ್ದಲೆ ಖ್ಯಾತಿಯ ಹಿರಿಯ ಸಾಹಿತಿ ದಿವಾಕರ ಹೆಗಡೆ, ಕೆರೆಹೊಂಡ ಅವರು ಸಂಗೀತ ಮತ್ತು ಪರಿಸರ ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನೇಚರ್ ಫಸ್ಟ್ ಇಕೋ ವಿಲೇಜ್‌ನ ಸಂಸ್ಥಾಪಕ, ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಂಚಯ್ಯ ವಿರೂಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗೀತ ದಿಗ್ಗಜರು, ಸಂಗೀತ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಸಂಗೀತ ಸಾಧಕರು, ವಿದ್ಯಾರ್ಥಿಗಳು, ವಿಶೇಷ ಆಹ್ವಾನಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.