Advertisement
ಧಾರವಾಡ: ಹುಬ್ಬಳ್ಳಿ ಪಡಸಾಲೆಯಲ್ಲಿ ರಾಜಕೀಯ ಮಾಡಿಕೊಂಡು ಬೆಳೆದ ಯುವ ನಾಯಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ದೊರೆಯಾದ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ ಶೆಟ್ಟರ ಸಚಿವ ಸ್ಥಾನ ತ್ಯಜಿಸಿದ್ದು, ಇದೀಗ ಧಾರವಾಡ ಜಿಲ್ಲೆಯ ಕೋಟಾದಡಿ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ಮತ್ತು ಲೆಕ್ಕಾಚಾರಗಳು ಆರಂಭವಾಗಿವೆ.
Related Articles
Advertisement
ಶಂಕರನಿಂದ ಪಾಟೀಲಗಿರಿಯ ಕಸರತ್ತು : ಜಿಲ್ಲೆಯಲ್ಲಿ ಸದ್ಯಕ್ಕೆ ಸಚಿವ ಸ್ಥಾನದ ಪಟ್ಟಿಯಲ್ಲಿ ಸೇರ್ಪಡೆಯಾಗಲು ಸಜ್ಜಾಗಿರುವ ಹೆಸರು ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರದ್ದು. ತಮ್ಮ ರಾಜಕೀಯ ಜ್ಞಾನದ ಪರಿಮಿತಿಯಲ್ಲೇ ಗಿರಕಿ ಹೊಡೆಯುತ್ತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಎಸ್‌ವೈ ಹಾಗೂ ಜಗದೀಶ ಶೆಟ್ಟರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಶಂಕರ ಪಾಟೀಲ, ಅವರು ಬಿಎಸ್‌ವೈ ಮತ್ತು ಶೆಟ್ಟರ ಬಣಗಳ ಮಧ್ಯೆ ಉಂಟಾದ ತಿಕ್ಕಾಟ ಹತ್ತಿಕ್ಕಲು ಈ ಹಿಂದೆ ಕೊಂಡಿಯಾಗಿ ಕೆಲಸ ಮಾಡಿದ್ದರು. ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ರೈತ ಸಮುದಾಯ ಪ್ರತಿನಿಧಿಸುವ ವ್ಯಕ್ತಿ, ಹೇಗಿದ್ದರೂ ಬೆಲ್ಲದ ಇಂದಲ್ಲ ನಾಳೆ ದೊಡ್ಡ ಹುದ್ದೆ ಏರಿಯೇ ಏರುತ್ತಾರೆ, ಹೀಗಾಗಿ ನನಗೆ ಸದ್ಯಕ್ಕೆ ಸಚಿವ ಸ್ಥಾನ ಕರುಣಿಸಿಬಿಡಿ ಎನ್ನುತ್ತಿದ್ದಾರೆ ಮುನೇನಕೊಪ್ಪ ಅವರು.
ಅಮೃತ ಸಾ(ದ)ರದ ಲೆಕ್ಕಾಚಾರ: ಮೂರು ವರ್ಷಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿರುವ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಅಭಿಮಾನಿಗಳು ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೇಳುತ್ತಿದ್ದಾರೆ. ಲಿಂಗಾಯತ ಸಾದರ ಸಮುದಾಯದವರು ಜಿಲ್ಲೆಯಲ್ಲಿ ಒಮ್ಮೆಯೂ ಸಚಿವರಾಗಿಲ್ಲ. ಅವರ ತಂದೆ ಎ.ಬಿ.ದೇಸಾಯಿ ಅವರು ಒಮ್ಮೆ ಅಲ್ಪಾವಧಿಗೆ ಶಾಸಕರಾಗಿದ್ದು ಬಿಟ್ಟರೆ ಅವರಿಗೂ ರಾಜಕೀಯ ಅಧಿಕಾರ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿಯಾಗಿ ಹೂಗುತ್ಛ ನೀಡಿ ಎಂದಿನಂತೆ, ನಾನು ವಿನಯ್ ಕುಲಕರ್ಣಿ ಅವರನ್ನು ಸೋಲಿಸಿದವನು ಎಂದು ಪರಿಚಯ ಮಾಡಿಕೊಂಡು ಬಂದಿದ್ದಾರೆ. ಅದೂ ಅಲ್ಲದೇ ದೇಸಾಯಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಲಿಂಗಾಯತ ಸಾದರ ಉಪ ಜಾತಿಗೆ ಸೇರಿದ್ದು, ತೆರೆಮರೆಯಲ್ಲೇ ಸಚಿವ ಸ್ಥಾನಕ್ಕೆ ಅವರು ಕಸರತ್ತು ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಹೆಸರಿಗೆ ಸಿಎಂ, ಸಚಿವನಾದರೂ ಆಗುವೆ?: ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರವಿಲ್ಲ ಎನ್ನುವ ಸೂತ್ರ ಜಾರಿಯಲ್ಲಿದೆ. ಆದರೂ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಅವರ ಅಭಿಮಾನಿಗಳು ತಮ್ಮ ಶಾಸಕರು ಸಚಿವರಾಗಲಿ ಎನ್ನುವ ಸಣ್ಣ ಕೂಗು ಇದ್ದು, ಧ್ವನಿ ಮಾತ್ರ ವರಿಷ್ಠರ ಕಿವಿಗೆ ಬಿದ್ದಂತಿಲ್ಲ. ಹೆಸರಲ್ಲೇ ಸಿಎಂ ಇದೆ ಅಷ್ಟು ಸಾಕು ಎನ್ನುವ ಶಾಸಕ ನಿಂಬಣ್ಣವರ, ಸಂತೋಷ ಲಾಡ್ ವಿರುದ್ಧ ಭರ್ಜರಿ ಜಯಗಳಿಸಿ ರಾಜ್ಯ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದರು.
ಸಿಎಂ ಜಿಲ್ಲೆಯ ಅಪಾಯವೂ ಇದೆ: ಇನ್ನೊಂದು ಲೆಕ್ಕಾಚಾರ ಪ್ರಕಾರ ಸ್ವತಃ ಮುಖ್ಯಮಂತ್ರಿಗಳು ಧಾರವಾಡ ಜಿಲ್ಲೆಗೆ ಸೇರಿದ್ದು, ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮೊದಲೇ ಗಜಪ್ರಸವದಂತಾಗಿದ್ದು, ಇಡೀ ಮುಂಬೈ ಬಾಯ್ಸ ತಂಡದ ಜತೆಗೆ ಬಿಜೆಪಿಯಲ್ಲಿನ ಹೊಸಬರು, ಪ್ರಾದೇಶಿಕವಾರು ಲೆಕ್ಕಾಚಾರ, ಹೈಕಮಾಂಡ್ ಅಭಯವಿದ್ದವರು, ಆರ್‌ಎಸ್‌ಎಸ್ ಬೆಂಬಲಿತರು ಹೀಗೆ ಸಾಲು ಸಾಲು ಕೋಟಾಗಳಡಿ ಸಚಿವ ಸ್ಥಾನ ನೀಡಬೇಕಿರುವ ದೊಡ್ಡ ಸವಾಲು ನೂತನ ಮುಖ್ಯಮಂತ್ರಿಗಳಿಗೆ ಎದುರಾಗಿದೆ. ಈ ಎಲ್ಲದರ ನಡುವೆಯೇ ಧಾರವಾಡ ಜಿಲ್ಲೆಯವರೇ ಸ್ವತಃ ಮುಖ್ಯಮಂತ್ರಿ ಇರುವುದರಿಂದ ಮೊದಲ ವಿಸ್ತರಣೆಯಲ್ಲಿ ಯಾರಿಗೂ ಸಚಿವ ಸ್ಥಾನ ಬೇಡ ಎನ್ನಲೂಬಹುದು. ಆದರೆ ಉತ್ತರ ಕರ್ನಾಟಕದ ಬಿಜೆಪಿ,ಆರ್‌ಎಸ್‌ಎಸ್‌ನ ರಾಜಕೀಯ ಶಕ್ತಿ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೂ ಪ್ರಾತಿನಿಧ್ಯ ಅನಿವಾರ್ಯ ಎನ್ನುತ್ತಿದ್ದಾರಂತೆ ಬಿಜೆಪಿಯ ನಿರ್ಣಾಯಕ ಮುಖಂಡರು.