ತಾಳಿಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಳಿಕೋಟೆಯ ಎಚ್.ಎಸ್. ಪಾಟೀಲ ಪಪೂ ಕಾಲೇಜ್ ಸಹಯೋಗದಲ್ಲಿ ಪಟ್ಟಣದಲ್ಲಿ ಎರಡು ದಿನ ನಡೆದ ಪಪೂ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಧಾರವಾಡ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡವು.
ಪಂದ್ಯಾವಳಿಯಲ್ಲಿ ರಾಜ್ಯದ 32 ಜಿಲ್ಲೆಗಳ 32 ಬಾಲಕರು ಹಾಗೂ 32 ಬಾಲಕಿಯರ ತಂಡ ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಅತಿ ಪೈಪೋಟಿ ಒಡ್ಡಿದ ಧಾರವಾಡ ಜಿಲ್ಲೆ ತಂಡ ದಕ್ಷಿಣ ಕನ್ನಡ ಜಿಲ್ಲೆ ತಂಡವನ್ನು ಹಿಮ್ಮೆಟ್ಟಿಸಿ ಗೆಲುವು ತಮ್ಮದಾಗಿಸಿಕೊಂಡಿತು. ಬಾಲಕಿಯರ ತಂಡದಲ್ಲಿ ತೀವ್ರ ಪೈಪೋಟಿ ಒಡ್ಡಿದ್ದ ಧಾರವಾಡ ತಂಡವನ್ನು ದಕ್ಷಿಣ ಕನ್ನಡ ಜಿಲ್ಲೆ ತಂಡ ಹಿಮ್ಮೆಟ್ಟಿಸಿ ಗೆಲುವು ತಮ್ಮದಾಗಿಸಿಕೊಂಡಿತು.
ಸ್ಕೋರ್ ವಿವರ: ಬಾಲಕರ ಫೈನಲ್ ಪಂದ್ಯದಲ್ಲಿ ಧಾರವಾಡ ತಂಡ 24-6 ಅಂಕಗಳಿಂದ ವಿಜಯ ಸಾಧಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಮೊದಲ ಅರ್ಧದ ಪಂದ್ಯದಲ್ಲಿ 8-4 ಅಂಕಗಳಿಂದ ಧಾರವಾಡ ತಂಡ ಮುಂದೆ ಇತ್ತು. ಎರಡನೇ ಅರ್ಧ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ ಎದುರಾಳಿ ವಿರುದ್ಧ ಪ್ರತಿರೋಧ ತೋರದಿರುವುದ ರಿಂದ ಕೊನೆಯಲ್ಲಿ 24-6 ಅಂಕಗಳಿಂದ ಧಾರವಾಡ ತಂಡ ಗೆಲುವು ಸಾಧಿಸಿತು. ಧಾರವಾಡ ತಂಡದ ನಾಯಕ ಗೋಳಪ್ಪ ಹಿರೆಗೋಳ ಅದ್ಭುತ ಆಟ ಪ್ರದರ್ಶಿಸಿದರು.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಆಳ್ವಾಸ್ ಬಾಲಕಿಯರ ತಂಡ 33-5 ಅಂಕಗಳಿಂದ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಆಳ್ವಾಸ್ ತಂಡ ಎದುರಾಳಿಗೆ ಅವಕಾಶ ನೀಡದೇ ಇರುವುದು ಕಂಡು ಬಂತು.
ಪಂದ್ಯದ ಮೊದಲಾರ್ಧದಲ್ಲಿ 18-3 ಅಂಕ ಪಡೆದು ಮುನ್ನಡೆ ಸಾಧಿಸಿತ್ತು. ಎರಡನೇ ಅರ್ಧ ಪಂದ್ಯದಲ್ಲಿ 33-5 ಅಂಕಗಳಿಂದ ಜಯ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯಿತು. ಫೈನಲ್ ಪಂದ್ಯ ಸೋತ ಧಾರವಾಡ ತಂಡ ರನ್ನರ್ ಅಫ್ ಆಗಿ ಹೊರಹೊಮ್ಮಿತು. ಆಳ್ವಾಸ್ ತಂಡದ ಸಂಯೋಜನೆ ಆಟದಿಂದ ಪಂದ್ಯದಲ್ಲಿ ಗೆಲುವು ಸಾಧಿತು.
ಕ್ರೀಡಾಕೂಟದ ಉಸ್ತುವಾರಿಯನ್ನು ಎಸ್‌ಕೆಪಪೂ ಕಾಲೇಜಿನ ದೈಹಿಕ ಶಿಕ್ಷಕ ಆರ್.ಎಲ್. ಕೊಪ್ಪದ, ಎಚ್‌ಎಸ್‌ಪಿ ಪಪೂ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ರಾಠೊಡ, ಮಲ್ಲು ರಾಯಗೊಂಡ, ಎಸ್.ಜಿ. ಮಂಗ್ಯಾಳ, ಅಶೋಕ ಕಟ್ಟಿ, ರಾವುತ ಪೂಜಾರಿ, ಶಿವು ನಾಯಕ, ಎಸ್.ಜಿ. ದೋತ್ರೆ ವಹಿಸಿದ್ದರು.
ಪಪೂ ಕಾಲೇಜಿನ ಉಪ ನಿರ್ದೇಶಕ ಅಂಕದ, ಬಿಪಿಎಡ್ ಕಾಲೇಜ್ ಪ್ರಾಚಾರ್ಯ ಭೀಮಣ್ಣ ಅರಕೇರಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಎಸ್.ಡಿ.ಗಾಂಜಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಪ್ರಕಾಶ ಗೊಂಗಡಿ, ಸಂಗಮಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಪಾಟೀಲ, ಯುಥ್ ನ್ಪೋರ್ಟ್ಸ್ ಕ್ಲಬ್ ಸದಸ್ಯರು ಮೇಲುಸ್ತುವಾರಿ ವಹಿಸಿದ್ದರು. ಕ್ರೀಡಾಕೂಟದಲ್ಲಿ ಮುಖ್ಯ ನಿರ್ಣಾಯಕರಾಗಿ ವಿ.ಡಿ. ಪಾಟೀಲ, ರಮೇಶ ಪಾಟೀಲ, ಮಕಾಂದಾರ, ಸುರೇಶ ನಾಯಕ, ಭಜಂತ್ರಿ, ರಜಪೂತ ಕಾರ್ಯ ನಿರ್ವಹಿಸಿದರು.
ಜಿ.ಟಿ. ಘೋರ್ಪಡೆ