Advertisement

Dharwad: ಅಮೆರಿಕದ ನಿಕ್‌ ಚಾಪೆಲ್‌ಗೆ ಅಗ್ರ ಶ್ರೇಯಾಂಕ

05:15 PM Oct 17, 2023 | Team Udayavani |

ಧಾರವಾಡ: ಜಿಲ್ಲಾ ಲಾನ್‌ ಟೆನಿಸ್‌ ಸಂಸ್ಥೆಯ ಅಂಗಳದಲ್ಲಿ ಆರಂಭಗೊಂಡಿರುವ ಐಟಿಎಫ್‌ ಧಾರವಾಡದ ಪುರುಷರ ಸಿಂಗಲ್ಸ್‌ ಹಾಗೂ ಡಬಲ್ಸ್‌ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ನಡೆದವು.

Advertisement

ರವಿವಾರ ಮಧ್ಯಾಹ್ನ ಸುರಿದ ಮಳೆಯಿಂದ ಮುಂದೂಡಲ್ಪಟಿದ್ದ ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ನಡೆದರೆ, ಮಳೆ
ಹಾಗೂ ಮಂದಬೆಳಕಿನ ಕಾರಣದಿಂದ ಸೋಮವಾರದ ಪಂದ್ಯಾಟಗಳು ಮಂಗಳವಾರಕ್ಕೆ ಮುಂದೂಡಲ್ಪಟ್ಟವು.

ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಪೈಕಿ ಎಂಟು ಜನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯಲಿದ್ದು, ಸೋಮವಾರ
ನಡೆಯಬೇಕಿದ್ದ ಬಾಕಿ ನಾಲ್ಕು ಪಂದ್ಯಗಳು ಮಳೆ ಮತ್ತು ಬೆಳಕಿನ ಕೊರತೆಯಿಂದಾಗಿ ಮಂಗಳವಾರಕ್ಕೆ ಮುಂದೂಡಲ್ಪಟ್ಟವು. ಅಂತಿಮ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ವಿಷ್ಣುವರ್ಧನ ಮತ್ತು ಮಾಧವಿನ್‌ ಕಾಮತ ಅವರ ಮಧ್ಯ ನಡೆದ ಪಂದ್ಯ ಮಂದಬೆಳಕಿನ ಕಾರಣ ಪೂರ್ಣಗೊಳ್ಳಲಿಲ್ಲ. ಇನ್ನೊಂದು ಪಂದ್ಯದಲ್ಲಿ ಲ್ಯೂಕ್‌ ಸೊರೆನ್‌ಸನ್‌ ಅವರು ರೋಹನ್‌ ಮೆಹ್ರಾ ಅವರನ್ನು 6-3, 7-5 ಅಂಕಗಳಿಂದ ಪರಾಭವಗೊಳಿಸಿದರು.

ಇನ್ನು ಫೈಸಲ್‌ ಕಮಾರ್‌ ಅವರು ಹಾಮಿನ್‌ ಡಕ್‌ ವು ಅವರನ್ನು 6-3, 7-5 ರಿಂದ ಸೋಲಿಸಿದರು. ಮತ್ತೂಂದು ಪಂದ್ಯದಲ್ಲಿ
ಇಟಲಿಯ ಎನ್‌ರಿಕೋ ಗೈಸೋಮಿನಿ ಅವರು ಜ್ಯಾಕ್‌ ಕಾರ್ಲಸನ್‌ ವಿಸ್ಟರ್‍ಯಾಂಡ್‌ ಅವರನ್ನು 6-4, 1-6, 10-6 ಅಂಕಗಳಿಂದ
ಪರಾಭವಗೊಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಜಗಮೀತಸಿಂಗ್‌ ಅವರು ಧರ್ಮಾಲಿ ಶಾಹ ಅವರನ್ನು 7-6 (9), 6-ರಿಂದ ಪರಾಭವಗೊಳಿಸಿದರು. ರಂಜಿತ್‌ ವರಾಲಿ ಮತ್ತು ಕಬೀರ ಹಂಸ್‌, ಸುರಜ್‌ ಪ್ರಬೋದ ಮತ್ತು ಯಶ್‌ ಯಾದವ, ಅಭಿನವ ಸಂಜೀವ ಷಣ್ಮುಗಂ ಮತ್ತು ತುಷಾರ ಮದನ್‌ ಅವರ ನಡುವಿನ ಪಂದ್ಯಗಳು ಪೂರ್ಣಗೊಳ್ಳದೇ ಮುಂದೂಡಲ್ಪಟ್ಟವು.

ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದವರು:
ಮುಖಿಲ್‌ ರಾಮನನ್‌ ಅವರನ್ನು 6-1, 6-3ರಿಂದ ಪರಾಭವಗೊಳಿಸಿದ ಯಶ್‌ ಯಾದವ ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಕಬೀರ ಹಂಸ ಅವರು ನೀರಜ್‌ ಯಶಪಾಲ ಅವರನ್ನು  6-2, 6-1ರಿಂದ, ಜಗಮೀತಸಿಂಗ್‌ ಅವರು ತೈಜಮೆನ್‌ ಲೂಫ್‌ ಅವರನ್ನು 6-4, 1-1ರಿಂದ ಪರಾಭವಗೊಳಿಸಿದರು. ಧರ್ಮಿಲ್‌ ಶಾ ಅವರು ಮಾಟಿಸ್‌ ಸೌತಕೊಂಬೆ ಅವರನ್ನು 6-1, 6-2 ರಿಂದ ಸೋಲಿಸಿದರು. ಮತ್ತೂಂದು ಪಂದ್ಯದಲ್ಲಿ ಅಭಿನವ ಸಂಜೀವ ಷಣ್ಮುಗಂ ಅವರು ಚಿರಾಗ್‌ ದುಹಾನ್‌ ಅವರನ್ನು 7-5, 6-4 ಅಂಕಗಳಿಂದ
ಪರಾಭವಗೊಳಿಸಿದರು. ಸಂದೇಶ ದತ್ತಾತ್ರೇಯ ಕುರಾಲೆ ಅವರನ್ನು ತುಶಾರ ಮದನ್‌ ಅವರು 7-6 (4), 6-2 ರಿಂದ ಮಣಿಸಿದರು.

Advertisement

ಡ್ರಾ ಸಮಾರಂಭ: ಜಿಲ್ಲಾ ಲಾನ್‌ ಟೆನಿಸ್‌  ಅಸೋಸಿಯೇಶನ್‌ ಅಧ್ಯಕ್ಷರೂ ಆಗಿರುವ ಡಿಸಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಸೋಮವಾರ ಪಂದ್ಯಾವಳಿಯ ಡ್ರಾ ಸಮಾರಂಭ ಜರುಗಿತು. ಗುರುದತ್ತ ಹೆಗಡೆ ಅವರೇ ಪಂದ್ಯಗಳ ಡ್ರಾ ತೆಗೆದರು. ಅಮೆರಿಕಾದ ನಿಕ್‌ ಚಾಪೆಲ್‌ ಅವರಿಗೆ ಅಗ್ರ ಶ್ರೇಯಾಂಕ, ಬೋಗ್ಧಾನ್‌ ಬೊರೊವ್‌ ದ್ವಿತೀಯ, ಭಾರತದ ದಿಗ್ವಿಜಯಸಿಂಗ್‌ ಮತ್ತು 2022ರ ಏಶಿಯನ್‌ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಮತ್ತು ಡೇವಿಸ್‌ ಕಪ್‌ ತಂಡದ ಸದಸ್ಯ ರಾಮಕುಮಾರ ರಾಮನಾಥನ್‌ ಕ್ರಮವಾಗಿ
ಮೂರು ಮತ್ತು ನಾಲ್ಕನೇ ಶ್ರೇಯಾಂಕ ನೀಡಲಾಯಿತು. ಹುಡಾ ಆಯುಕ್ತ ಸಂತೋಷ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಸಂದೀಪ ಬಣವಿ, ಪಂದ್ಯಾವಳಿಯ ನಿರ್ದೇಶಕ ಜಿ.ಆರ್‌. ಅಮರನಾಥ, ಐಟಿಎಫ್‌ ಮೇಲ್ವಿಚಾರಕ ಪುನೀತ ಗುಪ್ತಾ, ದೇಶದ ಪ್ರಮುಖ ಆಟಗಾರರಾದ ರಾಮಕುಮಾರ ರಾಮನಾಥನ್‌, ಪುರವ ರಾಜಾ ಮತ್ತು ದಿಗ್ವಿಜಯ ಸಿಂಗ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next