Advertisement

ಭಾರತದ ಕೃಷಿಗೆ ಕಾಬೂಲ್‌ವಾಲಾ ಫಿದಾ

02:54 PM Jun 13, 2023 | Team Udayavani |

ಧಾರವಾಡ: ಅಫ್ಘಾನಿಸ್ತಾನ್‌ ಅಂದ್ರೆ ಎಲ್ಲರಿಗೂ ಮೊದಲು ನೆನಪಾಗೋದು ತಾಲಿಬಾನಿಗಳು ಮತ್ತು ಬಿನ್‌ ಲಾಡೆನ್‌. ಅಷ್ಟೇಯಲ್ಲ ಗುಂಡಿನ ಸದ್ದು, ರಕ್ತದೋಕುಳಿ, ಮಹಿಳೆಯರ ಮಾರಣಹೋಮ, ಮಕ್ಕಳ ಕೈಯಲ್ಲೂ ಬಂದೂಕು. ಆದರೆ ಅದೇ ಅಫ್ಘಾನಿಸ್ತಾನ್‌ದ ವ್ಯಕ್ತಿಯೊಬ್ಬರು ಭಾರತ ದೇಶದ ಕೃಷಿಗೆ ಫಿದಾ ಆಗಿ ಬಂದೂಕು ಹಿಡಿಯುವ ಕೈಗಳಿಗೆ ನೇಗಿಲು ಕೊಡಿಸುವ ಹಂಬಲದೊಂದಿಗೆ ಕೃಷಿ ಅಧ್ಯಯನಕ್ಕೆ ಬಂದಿದ್ದಾರೆ. ಕೃಷಿ ಪದವಿ ಮಾತ್ರವಲ್ಲ, ಇದೀಗ ಪಿಎಚ್‌ಡಿ ಪದವಿ ಕೂಡ ಪಡೆದು ಗಾಂಧಾರ ನಾಡನ್ನು ಕೃಷಿ ಸೀಮೆಯ ಗಂಧರ್ವ ನಾಡು ಮಾಡುವ ಸಂಕಲ್ಪ ಮಾಡಿದ್ದಾರೆ.

Advertisement

ಹೌದು. ಕಣ್ಣು ಹಾಯಿಸಿದಲ್ಲೆಲ್ಲ ಬರೀ ಬೆಟ್ಟ, ಗುಡ್ಡ, ಕಲ್ಲಿನ ಕಪ್ಪು ಬೂದಿ, ಮಣ್ಣೆ ತುಂಬಿರುವ ಅಫ್ಘಾನಿಸ್ತಾನ್‌ದಲ್ಲಿ ಕೃಷಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸಹಜ. ಆದರೆ ಅಲ್ಲಿನ ಅಲ್ಪ ಪ್ರಮಾಣದ ಕೃಷಿ ಜತೆಗೆ ಔಷಧೀಯ ಸಸ್ಯಗಳನ್ನು ಬೆಳೆಸಿ ಕೃಷಿ ವೃದ್ಧಿ ಮಾಡುವ ಕನಸಿನೊಂದಿಗೆ ಪಿಎಚ್‌ಡಿ ಸಂಶೋಧನಾ ಪ್ರಬಂಧ ಬರೆದು ಡಾಕ್ಟರೇಟ್‌ ಪದವಿ ಪಡೆದು ಸೈ ಎಣಿಸಿಕೊಂಡಿದ್ದಾರೆ ಕಾಬೂಲ್‌ ನಿವಾಸಿ ಮೊಹಮ್ಮದ್‌ ಅಕ್ಬರ್‌ ನಾದೀರ ಪೂರ.

ಮೂಲತಃ ಕಾಬೂಲ್‌ ನಿವಾಸಿಯಾಗಿರುವ ಮೊಹಮ್ಮದ್‌, ಅಫ್ಘಾನಿಸ್ತಾನ್‌ದಲ್ಲಿ ಜನಿಸಿದ್ದರೂ ಅವರ ಸೆಳೆತ ಚಿಕ್ಕಂದಿನಿಂದಲೂ ಭಾರತದತ್ತ ನೆಟ್ಟಿತ್ತು. ಈ ದೇಶದಿಂದ ಬರುವ ಘಮ ಘಮಿಸುವ ಬಾಸುಮತಿ ಅಕ್ಕಿಯ ಬಿರಿಯಾನಿ ಸವಿ, ಸಾಂಬಾರು ಪದಾರ್ಥಗಳ ರುಚಿ ಒಟ್ಟಾರೆ ಭಾರತೀಯ ಅಡುಗೆ, ಸಂಸ್ಕೃತಿ ಎಲ್ಲವೂ ಇವರಿಗೆ ಅಪ್ಯಾಯಮಾನ. ಇದೇ ಭಾರತೀಯ ಪ್ರೀತಿಯಲ್ಲೇ ಸಾಕಷ್ಟು ಓದಿ ಉತ್ತಮ ಹುದ್ದೆಗಳನ್ನು ಸರ್ಕಾರದ ಮಟ್ಟದಲ್ಲಿ ಅಲಂಕರಿಸಿದ್ದ ಮೊಹಮ್ಮದ್‌, ಇನ್ನಷ್ಟು ಓದುವುದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಭಾರತೀಯ ಕೃಷಿಯನ್ನು. ಅದರಲ್ಲೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಾಧನೆ ನೋಡಿ ಮೊಹಮ್ಮದ್‌ ಇದೇ ವಿಶ್ವವಿದ್ಯಾಲಯವನ್ನು ಹುಡುಕಿಕೊಂಡು ಬಂದು ಇಲ್ಲಿ ಕೃಷಿ ಶಿಕ್ಷಣ ಪಡೆದಿದ್ದಾರೆ.

ಧಾರವಾಡ ಕೃಷಿ ವಿವಿಗೆ 2015ರಲ್ಲಿ ಕೃಷಿ ವಿವಿ ಸೇರಿ ಮೊದಲು ಕೃಷಿ ಪದವಿ, ನಂತರ ಸ್ನಾತಕೋತ್ತರ ಪದವಿ ಪಡೆದು ಆ ಮೇಲೆ 2019ರಲ್ಲಿ ಅಫ್ಘಾನಿಸ್ತಾನ್‌ಕ್ಕೆ ಮರಳಿ ಪುನಃ ಧಾರವಾಡ ಕೃಷಿ ವಿವಿಯಲ್ಲಿಯೇ ಪಿಎಚ್‌ಡಿ ಮಾಡಲು ಬಂದಿದ್ದಾರೆ. ಇದಾದ ಮೇಲೆ ದೇಶದಲ್ಲಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಭಾರತೀಯ ಕೃಷಿ ಬಗ್ಗೆ ಲೇಖನಗಳನ್ನು ಸಾದರ ಪಡಿಸಿದ್ದಾರೆ.

ಬಿಹಾರದಲ್ಲಿ ನಡೆದ ಸಮ್ಮೇಳನದಲ್ಲಿ ಇವರು ಸಲ್ಲಿಸಿದ ಪ್ರಬಂಧ ಲೇಖನ ಕೃಷಿ ತಜ್ಞರ ಗಮನ ಸೆಳೆದಿದೆ. ಮೊಹಮ್ಮದ್‌ ಈವರೆಗೂ ಒಟ್ಟು 12ಕ್ಕೂ ಹೆಚ್ಚು ಲೇಖನಗಳನ್ನು ದೇಶದ ವಿವಿಧ ಐಎಸ್‌ ಬಿಎನ್‌ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

Advertisement

“ಹಿಂಗ್‌’ ಮಾಡುವ ಹುಚ್ಚು: ಬರಡು ನೆಲ ಅಫ್ಘಾನಿಸ್ತಾನದ ಎಲ್ಲಾ ಭೂಮಿಯೂ ಕೃಷಿಗೆ ಯೋಗ್ಯ ವಾಗಿಲ್ಲ. ಆದರೆ ಆ ದೇಶದಿಂದ ಪ್ರತಿ ವರ್ಷ 1444 ಮೆಟ್ರಿಕ್‌ ಟನ್‌ನಷ್ಟು ಹಿಂಗ್‌ (ಅಸೋಫೋಟೋ ಡಿಯಾ ಸಸ್ಯದಿಂದ ಸಿದ್ಧಗೊ ಳ್ಳುವ ಉಪ್ಪಿನಕಾಯಿ, ಅಡುಗೆಗೆ ಬಳಸುವ ರಾಸಾಯನಿಕ ಪದಾರ್ಥ) ಭಾರತಕ್ಕೆ ರಫ್ತಾಗುತ್ತಿದೆ. ಇದರ ಒಟ್ಟು ಮೌಲ್ಯ 115 ಮಿಲಿಯನ್‌ ಡಾಲರ್‌. ಇದೆ ಅಸೋಫೋಟೋ ಡಿಯಾ ಎನ್ನುವ ಸಸ್ಯರಾಶಿ ಹೆಚ್ಚಾಗಿ ಅಫ್ಘಾನಿಸ್ತಾನ್‌, ಕಜಕಿಸ್ತಾನ ಮತ್ತು ಇರಾನ್‌ ದೇಶದಲ್ಲಿದೆ. ಈ ಪೈಕಿ ಅಫ್ಘಾನಿಸ್ತಾನ್‌ದಿಂದಲೇ ಅತೀ ಹೆಚ್ಚು ಹಿಂಗು ಭಾರತ ಮಾರುಕಟ್ಟೆಗೆ ಬರುತ್ತಿದೆ. ಇದು ಅಲ್ಲಿನ ರೈತರ ಬದುಕು ಹಸನಾಗಿಸಲು ಸಾಧ್ಯ ಎನ್ನುತ್ತಾರೆ ಮೊಹಮ್ಮದ್‌ ಪೂರ್‌.

ಹೀಗಾಗಿ ಇದರ ಕೃಷಿಗೆ ಒತ್ತು ನೀಡಬೇಕಿದೆ ಎನ್ನುವ ಪರಿಕಲ್ಪನೆ ಮತ್ತು ಯೋಜನೆ ರೂಪಿಸಿರುವ ಮೊಹಮ್ಮದ್‌, ಭಾರತೀಯ ಆಹಾರ ಪದ್ಧತಿ ಮತ್ತು ಇಲ್ಲಿನ ಕೃಷಿಯನ್ನು ತಿಳಿದು ತನ್ನ ದೇಶದಲ್ಲಿನ ಕೃಷಿ ಚಟುವಟಿಕೆ ವಿಸ್ತರಿಸಲು ಹೊಸ ಪರಿಭಾಷಿಕೆ ಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಭಾರತ- ಅಫ್ಘಾನಿಸ್ತಾನದ ಮಧ್ಯದ ಕೃಷಿ ವ್ಯಾಪಾರ ವಿಷಯದ ಮೇಲೆಯೇ ಸಂಶೋಧನಾ ಪ್ರಬಂಧ ಮಂಡಿಸಿದ್ದು, ಇದಕ್ಕೆ ಕೃಷಿ ವಿವಿ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಹೆಂಡತಿ, ಮಕ್ಕಳು ತುಂಬು ಸಂಸಾರ ವಿದ್ದು, ಉತ್ತಮ ನೌಕರಿಯೂ ಇವರಿಗೆ ಸರ್ಕಾರ ನೀಡಿತ್ತು. ಆದರೆ ಕೃಷಿ ಬೆಳೆಸುವ ಇವರ ಹಂಬಲಕ್ಕೆ ಧಾರವಾಡ ಕೃಷಿ ವಿ.ವಿ. ವೇದಿಕೆಯಾಗಿದೆ.

ರೈತ ಕುಲ ಬೆಳೆಸುವ ಹಂಬಲ: ಕೃಷಿ ಆರ್ಥಿಕತೆ ವಿಭಾಗದಲ್ಲಿ ಟ್ರೇಡ್‌ ಪರಫಾರ್ಮೆನ್ಸ್‌ ಆಫ್‌ ಸೆಲೆಕ್ಟೆಡ್‌ ಅಗ್ರಿಕಲ್ಚರಲ್‌ ಕಮ್ಯುಡಿಟಿ ಇಂಡಿಯಾ- ವೇಸಾವೇಸ್‌ ಅಫ್ಘಾನಿಸ್ತಾನ್‌ ಆ್ಯಂಡ್‌ ಎಕಾನಾಮಿಕ್‌ ಅನಾಲಿಸಿಸ್‌’ ವಿಷಯದಲ್ಲಿ ಮೊಹಮ್ಮದ್‌ ಪಿಎಚ್‌ಡಿ ಮಾಡಿದ್ದಾರೆ. ಒಂದು ಎಕರೆ ಭೂಮಿಯಲ್ಲಿ ಎಷ್ಟು ಗೋಧಿ ಬೆಳೆಯಬಹುದು? ಒಂದು ಹೆಕ್ಟೇರ್‌ ಒಣ ಭೂಮಿಯನ್ನು ಕೃಷಿ ಉತ್ಪಾದನಾ ಘಟಕವನ್ನಾಗಿ ಹೇಗೆ ಪರಿವರ್ತಿಸಬಹುದು? ಇಂತಹ ಹತ್ತಾರು ಪ್ರಶ್ನೆಗಳು ಅಫ್ಘಾನಿಸ್ತಾನದ ಜನರಲ್ಲಿಲ್ಲ. ಅಲ್ಲಿ ಶೇ.85 ಜನ ಬಡವರಾಗಿದ್ದಾರೆ. ಹೀಗಾಗಿ ಕಡಿಮೆ ನೀರು, ಹೆಚ್ಚು ಉಷ್ಣತೆ, ಹೆಚ್ಚು ಹಿಮಪಾತ ಮಣಿಸಿ ಬೆಳೆಯಬಲ್ಲ ಆಹಾರ ಪದಾರ್ಥದ ಬೀಜಗಳ ಶೋಧನೆ ಮತ್ತು ಇಲ್ಲಿಯೇ ಬೆಳೆಯುವ ದೇಶಿ ಔಷಧಿಯ ಸಸ್ಯಗಳನ್ನು ಇನ್ನಷ್ಟು ಶೋಧಿಸಿ ಅಲ್ಲಿನ ರೈತ ಕುಲ ಬೆಳೆಸುವ ಹಂಬಲ ಮೊಹಮ್ಮದ್‌ಗೆ ಇದೆ.

ನನ್ನ ದೇಶದ ಜನರ ಕೈಯಲ್ಲಿ ಸದ್ಯಕ್ಕೆ ಬಂದೂಕಿಗಿಂತಲೂ ಹೆಚ್ಚಾಗಿ ಹೊಲ ಊಳುವ ಉಪಕರಣಗಳನ್ನು ಕೊಡಬೇಕಿದೆ. ಸರ್ಕಾರ ಇಲ್ಲಿನ ರೈತರಿಗೆ ಸಬ್ಸಿಡಿ ಕೊಡುತ್ತಿದೆ. ಆದರೆ ಅಲ್ಲಿ ಯಾವುದೇ ಸಬ್ಸಿಡಿ ಇಲ್ಲ. ನಾನು ಮರಳಿ ಹೋಗಿ ಅಲ್ಲಿ ಭಾರತೀಯ ಸಮಗ್ರ ಕೃಷಿ ಪದ್ಧತಿ ಬೆಳೆಸುವ ಸಂಕಲ್ಪ ಮಾಡಿದ್ದೇನೆ. ●ಮೊಹಮ್ಮದ ಅಕ್ಬರ್‌ ನಾದೀರ ಪೂರ್‌, ಕಾಬೂಲ್‌ ನಿವಾಸಿ

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next