ಧಾರವಾಡ: ಕೃಷಿ ವಿಶ್ವವಿದ್ಯಾಲಯಗಳು ರೈತರ ಜೊತೆ ಕೃಷಿ ಅಭಿವೃದ್ಧಿಗೆ ಜಂಟಿ ಪ್ರಯೋಗ ಮಾಡುವುದು ಹಾಗೂ ಕೃಷಿ ಪದವೀಧರರು ಹೊಲಗಳಿಗೆ ಮರಳಿ ಆಧುನಿಕ ಕೃಷಿ ಮಾಡಿದರೆ ಮಾತ್ರ ದೇಶದ ಕೃಷಿ ಉಳಿಯಲು ಸಾಧ್ಯ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ-2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು. ಆದರೆ ಇಂದು ಕೃಷಿಯನ್ನು ಎಲ್ಲರೂ ಕನಿಷ್ಠ ಎಂದು ಹೇಳುತ್ತಿರುವುದು ದುರಂತಕ್ಕೆ ಮುನ್ನುಡಿಯಾಗಿದೆ. ಕೃಷಿ ಓದಿದವರು ಕಚೇರಿಗಳಲ್ಲಿ ಕುಳಿತು ನೌಕರಿ ಮಾಡಲು ಹೋಗುತ್ತಿರುವುದೇ ಕೃಷಿ ಹಿಂದುಳಿಯಲು ಪ್ರಮುಖ ಕಾರಣ ಎಂದರು.
ಕೃಷಿ ಮತ್ತು ಉದ್ಯಮ ಎರಡೂ ಸೇರಬೇಕು. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯಾದರೆ ಮಾತ್ರ ರೈತರು ಉಳಿಸಲು ಸಾಧ್ಯ. ಕೃಷಿ ಪದವೀಧರರು ಕೃಷಿ ಅಭಿವೃದ್ಧಿಗೆ ಮತ್ತು ದೇಶದ ಇಂದಿನ ಕೃಷಿ ಬೇಡಿಕೆಗಳಿಗೆ ತಕ್ಕಂತೆ ಹೊಸ ವಿಚಾರಗಳನ್ನು ಶೋಧಿಸಿ ಅಭಿವೃದ್ಧಿ ಪಡಿಸಲು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕೃಷಿ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಸ್ವಾಮಿನಾಥನ್ ವರದಿ ಅನುಷ್ಠಾನ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ನೀಡುವುದು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವುದು ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಕೃಷಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ರೈತರು ಮತ್ತು ಕೃಷಿ ವಿಜ್ಞಾನಿಗಳ ಮಧ್ಯೆ ಒಂದು ಒಪ್ಪಂದವಾಗಬೇಕು. ಇಬ್ಬರು ಸೇರಿ ಕೃಷಿ ಕೃಷಿ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು 800 ಕೋಟಿ ರೂ. ಕೊಡುವುದಾಗಿ ಹೇಳಿದ್ದು, ಈ ಕೆಲಸವನ್ನು ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಆರಂಭಿಸಿದ್ದೇವೆ. ಸಾವಯವ ಕೃಷಿಗೆ ರೈತರು ಮರಳಬೇಕು. ಸರ್ಕಾರ ಹೆಚ್ಚಿನ ಆದ್ಯತೆಯನ್ನು ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ನೀಡಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಕೃಷಿ ಒಂದು ಉದ್ಯಮವಾಗಬೇಕು. ಈ ನಿಟ್ಟಿನಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೋದ್ಯಮಗಳು ಹೆಚ್ಚು ಬರಬೇಕು. ಕೈಗಾರಿಕಾ ಇಲಾಖೆಯಿಂದ ಇದಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಸಚಿವ ಸಿ.ಸಿ. ಪಾಟೀಲ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಇನ್ನಿತರರಿದ್ದರು. ಡಾ| ಉಷಾ ಸಂಕನಗೌಡರ ನಿರೂಪಿಸಿದರು. ಕುಲಪತಿ ಡಾ|ಮಹದೇವ ಚೆಟ್ಟಿ ಸ್ವಾಗತಿಸಿದರು.
ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡುವ ವಿಚಾರವಾಗಿ ಮೂರು ದಿನಗಳಲ್ಲಿ ಸಂಪುಟ ಉಪಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಅಲ್ಲದೇ ಇನ್ನುಳಿದ ಬೆಳೆಗಳಿಗೂ ಬೆಂಬಲ ಬೆಲೆ ನೀಡುವ ಕುರಿತು ಪರಿಶೀಲಿಸಲಾಗುವುದು.
– ಲಕ್ಷ್ಮಣ ಸವದಿ, ಕೃಷಿ ಸಚಿವ