ಧಾರವಾಡ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಬಿಂದನ್ ಪಾಟೀಲ್ ಹೇಳಿದರು.
ಕೆಸಿಡಿಯಲ್ಲಿ 2023-24ನೇ ಸಾಲಿನ ಕವಿವಿ ವ್ಯಾಪ್ತಿಯ ಪುರುಷ ಮತ್ತು ಮಹಿಳೆಯರ ಏಕ ವಲಯ ಗುಡ್ಡಗಾಡು ಓಟದ ಸ್ಪರ್ಧೆ ಮತ್ತು ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಪ್ರಸ್ತುತ ಕ್ರೀಡಾಕ್ಷೇತ್ರವು ಯುವ ಸಮುದಾಯವನ್ನು ಹೆಚ್ಚು ಆಕರ್ಷಿಸುತ್ತಿದೆ. ಎಲ್ಲಾ ಕ್ರೀಡೆಗಳಲ್ಲಿ ಭಾರತ ಸಾಧನೆ ಮಾಡುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ಕಲಾ ಕಾಲೇಜಿನ ಜಿಮಖಾನಾ ಉಪಾಧ್ಯಕ್ಷೆ ಡಾ| ಮಂಜುಳಾ ಚಲುವಾದಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಬಹಳ ಮುಖ್ಯವಾದ ಚಟುವಟಿಕೆ. ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ| ಡಿ.ಬಿ.ಕರಡೋಣಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಮಸ್ಕೃತಿಕ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ವಿದ್ಯಾರ್ಥಿಗಳ ದೈಹಿಕ-ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಎಂದರು.
ಕೆಸಿಡಿ ಸೂಪರ್ ಸ್ಟಾರ್: ಏಕ ವಲಯ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕರ್ನಾಟಕ ಕಲಾ ಕಾಲೇಜಿನ ಕ್ರೀಡಾಪಟುಗಳು ಮೊದಲ ಸ್ಥಾನ ಪಡೆದುಕೊಂಡು ವೀರಾಗ್ರಣಿಯಾದರು. ದ್ವೀತಿಯ ಸ್ಥಾನವನ್ನು ಧಾರವಾಡ ಶಿವಾಜಿ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು. ತೃತೀಯ ಸ್ಥಾನವನ್ನು ಹುಬ್ಬಳ್ಳಿಯ ಸರಕಾರಿ ಪ್ರಥಮದರ್ಜೆ ಕಾಲೇಜು ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಕೂಡ ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿಯರು ಮೊದಲ ಸ್ಥಾನ ಗಳಿಸಿ ಚಾಂಪಿಯನ್ ಆದರು. ಎರಡನೇ ಸ್ಥಾನವನ್ನು ಭಟ್ಕಳ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿಯರು ಪಡೆದುಕೊಂಡರು. ಮೂರನೇ ಸ್ಥಾನವನ್ನು ಹುಲಕೋಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಪಡೆದುಕೊಂಡರು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾದ ಡಾ| ಜಗದೀಶ ಕೆ., ಕರ್ನಾಟಕ ಕಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ| ಮಂಜುನಾಥ ಅಸುಂಡಿ, ಡಾ| ಗೋವಿಂದಪ್ಪ ಇನ್ನಿತರರಿದ್ದರು.