Advertisement

Dharwad;76ರ ವಯೋವೃದ್ಧ ದುಬೈ ಕ್ರೀಡಾಕೂಟಕ್ಕೆ

06:50 PM Jul 26, 2023 | Team Udayavani |

ಧಾರವಾಡ : ಹೈಬ್ರಿಡ್ ಆಹಾರ ತಿಂದ ಹೊಸ ಜನಾಂಗಕ್ಕೆ 40ವರ್ಷಕ್ಕೆ ಅರಳು ಮರಳು, ಮೊಣಕಾಲು ನೋವು. ದೃಷ್ಟಿ ಮಂದ ಸೇರಿದಂತೆ ವೃದ್ಧಾಪ್ಯದ ರೋಗಗಳು ಸಾಲು ಸಾಲಾಗಿ ಕಾಡುತ್ತವೆ. ಆದರೆ ಇವನ್ನೆಲ್ಲ ಮೆಟ್ಟಿ ನಿಂತು ಯುವಕರೂ ನಾಚುವಂತೆ ಕ್ರೀಡೆಗಳಲ್ಲಿ ಸಾಧನೆ ಮಾಡುತ್ತಾ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ 76 ವರ್ಷದ ಹಿರಿಯ ನಾಗರಿಕ ಶಿವಪ್ಪ ಸಲಕಿ.

Advertisement

ಹೌದು… ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಜು.31 ರಿಂದ ಆ.6 ವರೆಗೆ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದ ಪೈಕಿ 75 ಕ್ಕೂ ವರ್ಷ ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟದಲ್ಲಿ 400 ಮೀಟರ್, 800 ಮೀಟರ್ ಮತ್ತು 1500 ಮೀಟರ್ ಓಟದಲ್ಲಿ ಶಿವಪ್ಪ ಸಲಕಿ ಪಾಲ್ಗೊಳ್ಳುತ್ತಿದ್ದಾರೆ.

ರಾಜ್ಯಮಟ್ಟದ 26 ಕ್ಕೂ ಅಧಿಕ , ರಾಷ್ಟ್ರ ಮಟ್ಟದ 20 ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವ ಶಿವಪ್ಪ ಮಲೇಶಿಯಾ, ನೇಪಾಳಗಳಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರಾಷ್ಟಿಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಹಿರಿಮೆ. ಈ ಹಿಂದೆ ನೇಪಾಳದಲ್ಲಿ ಎಸ್‌ಬಿಕೆಎಫ್ (ಸಂಯುಕ್ತ ಭಾರತೀಯ ಖೇಲ್ ಫೆಡರೇಷನ್) ಆಯೋಜಿಸಿದ್ದ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಂಡು, 100 ಮೀ, 800 ಮೀ ಹಾಗೂ 1500 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಮಲೇಷಿಯಾದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿಯೂ ಪಾಲ್ಗೊಂಡಿದ್ದರು.

ಯುವಕರಿಗೆ ಶಿವಪ್ಪಜ್ಜನ ಟಿಪ್ಸ್
ಶಿವಪ್ಪನವರಿಗೆ ವಯಸ್ಸು 76. ಆದರೆ ಈಗಲೂ ಮಳೆ, ಚಳಿಯಿದ್ದರೂ ಈಗಲೂ ನಿತ್ಯ ಬೆಳಗಿನ ಜಾವ 4 ಗಂಟೆಗೆ ಎದ್ದೇಳುವ ಶಿವಪ್ಪ, ಸುಮಾರು ಒಂದು ತಾಸು ಯೋಗಾಸನ ಮಾಡುತ್ತಾರೆ. ನಂತರ 10 ಕಿ.ಮೀ ಓಡುತ್ತಾರೆ. ನಿತ್ಯ ಸಂಜೆ 5 ಕಿ.ಮೀ ನಡೆಯುತ್ತಾರೆ. ಸಸ್ಯಾಹಾರಿ ಆಗಿರುವ ಶಿವಪ್ಪ ಅವರಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋದಾಗ ಊಟದ ಸಮಸ್ಯೆ ಕಾಡುತ್ತದೆ. ಹೀಗಾಗಿ, ಮನೆಯಿಂದ ಹೋಗುವಾಗ 15 20 ಜೋಳದ ರೊಟ್ಟಿ, ಚಪಾತಿ, ಶೇಂಗಾ, ಪುಟಾಣಿ, ಗುರೆಳ್ಳು ಚಟ್ನಿ, ಖಾರ ಕಟ್ಟಿಕೊಂಡು ಹೋಗುತ್ತಾರೆ. ಕ್ರೀಡೆಯ ಜತೆಗೆ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ಇರುವ ಈವರೆಗೂ ಬಿಪಿ, ಶುಗರ್ ಇವರತ್ತ ಸುಳಿದಿಲ್ಲ. ಹೀಗಾಗಿ ಈ ಆರೋಗ್ಯದ ಗುಟ್ಟು ಹೇಳುವ ಶಿವಪ್ಪ, ಯುವಕರು ಗುಟ್ಕಾ, ಮದ್ಯ ಸೇವನೆಯಂತಹ ಚಟ ಬಿಡಬೇಕು. ಮೊಬೈಲ್‌ನ ಗೀಳಿನಿಂದ ಹೊರಗೆ ಬರಬೇಕು. ಬೆಳಗಿನ ಜಾವ ಬೇಗ ಎದ್ದು ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ಧನ ಸಹಾಯಕ್ಕೆ ಮನವಿ
ಶಿವಪ್ಪ ಅವರಿಗೆ ಇದೀಗ ದೇಶ ವಿದೇಶಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಮಸ್ಯೆ ಉಂಟಾಗಿದ್ದು, ದುಬೈಗೆ ತೆರಳಲು ಶಿವಪ್ಪ ಅವರಿಗೆ ಆರ್ಥಿಕ ನೆರವಿನ ಸಂಕಷ್ಟ ಎದುರಾಗಿದ್ದು, ಈಗಾಗಲೇ ಶಾಸಕ ವಿನಯ ಕುಲಕರ್ಣಿ, ಈಶ್ವರ ಶಿವಳ್ಳಿ ತಲಾ 10 ಸಾವಿರ ರೂ., ಮರೇವಾಡದ ಪರಮೇಶ್ವರ ಚವಡಿಮನಿ 5 ಸಾವಿರ ಹಣ ನೀಡಿದ್ದಾರೆ. ಇದಲ್ಲದೇ ಮೊಮ್ಮಗಳು ಅನಿತಾ ಮಟ್ಟಿ ಕೂಡ ತಮ್ಮ ಉಳಿತಾಯದಲ್ಲಿ 5 ಸಾವಿರ ಹಣ ನೀಡಿದ್ದಾರೆ. ಆದರೆ ಇದು ಸಾಲದು. ಹೀಗಾಗಿ ಆಸಕ್ತ ಕ್ರೀಡಾಪ್ರೇಮಿಗಳು ಶಿವಪ್ಪ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬಹುದಾಗಿದೆ.

Advertisement

ಬ್ಯಾಂಕ್ ಖಾತೆ ವಿವರ ಇಂತಿದೆ: ಶಿವಪ್ಪ ಮಹಾಂತಪ್ಪ ಸಲಕಿ, ಬ್ಯಾಂಕ್ ಖಾತೆ ಸಂಖ್ಯೆ 12572250022113, ಐಎಫ್‌ಎಸ್‌ಸಿ ನಂಬರ ಇಘ್ಕೆಆ0011257, ಕೆನರಾ ಬ್ಯಾಂಕ್, ತಿಮ್ಮಾಪೂರ ಶಾಖೆ, ಧಾರವಾಡ. ಮೊಬೈಲ್ ಸಂಖ್ಯೆ :9353225458

ಶಿವಪ್ಪನವರ ಸಾಧನೆ, ಯುವಕರನ್ನೇ ನಾಚುವಂತೆ ಮಾಡುವ ಯೋಗಾಸನ, ಚಟುವಟಿಕೆಗಳು ನಮಗೆ ಪ್ರೇರಣೆ. ಹೀಗಾಗಿ ಶಾಸಕರಿಂದ ಈಗಾಗಲೇ 10 ಸಾವಿರ ನೀಡಿದ್ದು, ಮುಂದೆ ಕೂಡ ನೆರವು ಮಾಡುವ ಭರವಸೆ ನೀಡಿದ್ದಾರೆ. ಇದಲ್ಲದೇ ಸರಕಾರದಿಂದ ಅಗತ್ಯ ನೆರವು ಒದಗಿಸುವ ಭರವಸೆ ಶಾಸಕ ವಿನಯ ಕುಲಕರ್ಣಿ ನೀಡಿದ್ದಾರೆ. ಆಸಕ್ತರೂ ಕೂಡ ಅವರ ಈ ಸಾಧನೆಗೆ ಕೈ ಜೋಡಿಸಬೇಕು.
-ಈಶ್ವರ ಶಿವಳ್ಳಿ, ಅಧ್ಯಕ್ಷರು, ಧಾರವಾಡ ಗ್ರಾಮೀಣ ಕಾಂಗ್ರೆಸ್ ಬ್ಲಾಕ್.

ಸದಾ ಹಸನ್ಮುಖಿ ಆಗಿರುವ ಶಿವಪ್ಪಜ್ಜ ನಮಗೆಲ್ಲರಿಗೂ ಪ್ರೇರಣೆ. ಈಗಾಗಲೇ ಹಿರಿಯರ ವಿಭಾಗದಲ್ಲಿ ವಿದೇಶದಲ್ಲಿ ಸಾಧನೆ ಮಾಡಿದ್ದು, ದುಬೈನಲ್ಲಿ ಕೂಡ ದೇಶದ ಕೀರ್ತಿ ಹೆಚ್ಚಿಸಲಿ ಎಂಬ ಆಸೆ ಇದೆ.
 -ಅನಿತಾ ಮಟ್ಟಿ, ಶಿವಪ್ಪನವರ ಮೊಮ್ಮಗಳು.

Advertisement

Udayavani is now on Telegram. Click here to join our channel and stay updated with the latest news.

Next