Advertisement

ಬಿಜೆಪಿಗೆ ಉಸ್ತುವಾರಿಗಳು; ಪ್ರಧಾನ್‌, ಮಾಂಡವಿಯ, ಅಣ್ಣಾಮಲೈಗೆ ಹೊಸ ಹೊಣೆ

12:53 AM Feb 05, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆಅಧಿಕಾರ ಹಿಡಿಯುವುದಕ್ಕೆ ಶತ ಪ್ರಯತ್ನ ಆರಂಭಿಸಿರುವ ಬಿಜೆಪಿ ಸಂಪೂರ್ಣ ಚುನಾವಣೆ ಪ್ರಕ್ರಿಯೆಯನ್ನು ನಿಭಾಯಿಸು ವುದಕ್ಕೆ ಪ್ರತ್ಯೇಕ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಉಸ್ತುವಾರಿಯಾಗಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡ ವಿಯ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

Advertisement

ಇನ್ನೊಂದೆಡೆ ರಾಜ್ಯದ 224 ಕ್ಷೇತ್ರ ಗಳಿಗೂ ಸ್ಥಳೀಯವಾಗಿ ಉಸ್ತುವಾರಿ ಗಳನ್ನು ನಿಯೋಜನೆ ಮಾಡುವ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಸ್ತಾವ ವಾಗಿದೆ. ಈ ಮೂಲಕ ತನ್ನ ಸಂಘಟನ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಬಲಪಡಿಸಲು ಬಿಜೆಪಿ ಸಜ್ಜಾಗಿದೆ.

ಉಸ್ತುವಾರಿಯಾಗಿ ನೇಮಕಗೊಂಡಿ ರುವ ಧರ್ಮೇಂದ್ರ ಪ್ರಧಾನ್‌ ಹಾಗೂ ಕೆ. ಅಣ್ಣಾಮಲೈ ರಾಜ್ಯ ರಾಜಕಾರಣಕ್ಕೆ ಪರಿಚಿತ ಮುಖಗಳೇ. ಬಿಜೆಪಿ ನಾಯಕರ ಮಧ್ಯೆ ಯಾವುದೇ ಹಂತದಲ್ಲೂ ಭಿನ್ನಾಭಿಪ್ರಾಯ ಸೃಷ್ಟಿಯಾದರೆ ಅದನ್ನು ಸರಿದೂಗಿಸುವಲ್ಲಿ ಧರ್ಮೇಂದ್ರ ಪ್ರಧಾನ್‌ ಸಮರ್ಥರು ಎಂಬ ಕಾರಣಕ್ಕೆ ಬಿಜೆಪಿ ವರಿಷ್ಠರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಧಾನ್‌ 2011 ರಿಂದ 2013ರ ವರೆಗೆ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಅವರು ವೀಕ್ಷಕರಾಗಿಯೂ ಸಮತೋಲನ ಸಾಧಿಸಿದ್ದಾರೆ.

ಜತೆಗೆ ಯಾವುದೇ ರಾಜ್ಯಕ್ಕೆ ಉಸ್ತುವಾರಿ ಯಾಗಿ ನೇಮಿಸಿದರೂ ಅಲ್ಲಿಯೇ ಪಟ್ಟು ಹಿಡಿದು ಕುಳಿತು ಕಾರ್ಯತಂತ್ರ ರೂಪಿಸುವಲ್ಲಿ ಪ್ರಧಾನ್‌ ಎತ್ತಿದ ಕೈ. ಉತ್ತರ ಪ್ರದೇಶ ಹಾಗೂ ಬಿಹಾರ ಚುನಾವಣೆಯಲ್ಲೂ ಪ್ರಧಾನ್‌ ಚುನಾವಣ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಜತೆಗೆ ಪಶ್ಚಿಮ ಬಂಗಾಲ ಚುನಾವಣೆ ಸಂದರ್ಭ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮ ಕ್ಷೇತ್ರದ ಉಸ್ತುವಾರಿಯಾಗಿಯೂ ಸೈ ಎನಿಸಿ ಕೊಂಡಿದ್ದರು. ಈ ಎಲ್ಲ ಕಾರಣಗಳಿಂದ ಕರ್ನಾಟಕದಲ್ಲೂ ಪಕ್ಷವನ್ನು ಗೆಲುವಿನ ದಡ ಹತ್ತಿಸುವಲ್ಲಿ ಯಶಸ್ವಿಯಾಗಬಹುದೆಂಬ ಕಾರಣಕ್ಕೆ ಈ ನೇಮಕ ಮಾಡಲಾಗಿದೆ.

Advertisement

ಅಣ್ಣಾಮಲೈ ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ ಘಟಕ ನೀಡಿರುವ ಉಚಿತ ವಿದ್ಯುತ್‌ ಭರವಸೆಯ ವಿರುದ್ಧ ಚಿಕ್ಕಮಗಳೂರಿನಲ್ಲಿ ಅವರು ಮಾಡಿರುವ ಭಾಷಣ ವೈರಲ್‌ ಆಗಿದ್ದು, ಬಿಜೆಪಿ ರಾಜ್ಯ ಘಟಕದ ನಾಯಕರಿಗಿಂತಲೂ ಅವರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ತಮಿಳು ಭಾಷಿಕರನ್ನು ಸೆಳೆಯುವುದಕ್ಕೆ ಅಣ್ಣಾಮಲೈ ನೇಮಕ ನೆರವಾಗಬಹುದೆಂಬ ಲೆಕ್ಕಾಚಾರ ಪಕ್ಷದ್ದಾಗಿದೆ.

ಸ್ಥಳೀಯ ಉಸ್ತುವಾರಿ?
ಇನ್ನೊಂದೆಡೆ ರಾಜ್ಯದ 224 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡುವ ಮತ್ತೊಂದು ಮಹತ್ವದ ನಿರ್ಧಾರವನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ತೆಗೆದುಕೊಳ್ಳಲಾಗಿದೆ. ಆಂತರಿಕವಾಗಿ ಈ ನೇಮಕ ಪ್ರಕ್ರಿಯೆ ನಡೆಯಲಿದ್ದು, ಉಸ್ತುವಾರಿಗಳು ಪ್ರತೀ ಕ್ಷೇತ್ರದ ರಾಜಕೀಯ ಚಿತ್ರಣ, ತತ್‌ಕ್ಷಣದ ಟ್ರೆಂಡಿಂಗ್‌, ವಿಪಕ್ಷಗಳ ತಂತ್ರಗಾರಿಕೆ, ಆಂತರಿಕ ಭಿನ್ನಮತ ಇತ್ಯಾದಿ ವಿಚಾರಗಳ ಬಗ್ಗೆ ಕಾಲಕಾಲಕ್ಕೆ ರಾಜ್ಯ ಘಟಕಕ್ಕೆ ಮಾಹಿತಿ ನೀಡಬೇಕಾಗುತ್ತದೆ.

200 ರೋಡ್‌ ಶೋ
ಮುಂದಿನ ಎರಡು ತಿಂಗಳು ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ರೋಡ್‌ ಶೋ ನಡೆಸಲಾಗುತ್ತದೆ. ಸುಮಾರು 200 ರೋಡ್‌ ಶೋ ನಡೆಸುವುದಕ್ಕೆ ಚಿಂತನೆ ನಡೆಸಲಾಗಿದ್ದು, ಬಿಜೆಪಿಯ ಎಲ್ಲ ಮೋರ್ಚಾಗಳಿಂದ ಪ್ರತೀ ಜಿಲ್ಲೆಯಲ್ಲೂ ಸಮಾವೇಶ ಆಯೋಜಿಸಲಾಗುತ್ತದೆ.

ದಿನಾಂಕ ನಿಗದಿ
ಶುಕ್ರವಾರ ರಾತ್ರಿ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿಯ ನಿರ್ಧಾರಗಳನ್ನು ಕಾರ್ಯಕಾರಿಣಿಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ನಾಲ್ಕು ದಿಕ್ಕುಗಳಿಂದ ಪ್ರಾರಂಭ ವಾಗುವ ವಿಜಯ ಸಂಕಲ್ಪ ರಥಯಾತ್ರೆಗೆ ಸಂಭಾವ್ಯ ದಿನಾಂಕ ನಿಗದಿ ಮಾಡಲಾಗಿದೆ. ಫೆ. 26ರಿಂದ ರಥಯಾತ್ರೆ ಆರಂಭ ಗೊಳ್ಳಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವ ದಲ್ಲಿ ನಡೆಯುತ್ತದೆ. ಬೆಂಗಳೂರಿನ ಕೆಂಪೇಗೌಡ ಪ್ರತಿಮೆ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ, ಬೆಳಗಾವಿಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ಬೀದರ್‌ನ ಬಸವ ಕಲ್ಯಾಣದ ಅನುಭವ ಮಂಟಪದಿಂದ ರಥಯಾತ್ರೆ ಪ್ರಾರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ವನ್ನು ಎಂದೂ ಸಹಿಸುವುದಿಲ್ಲ. 40 ಪರ್ಸೆಂಟ್‌ ಕಮಿಷನ್‌ ವಿಚಾರದಲ್ಲಿ ಆರೋಪ ನಿರ್ದಿಷ್ಟವಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಪೀಯೂಷ್‌ ಗೋಯಲ್‌,
ಕೇಂದ್ರ ವಾಣಿಜ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next