Advertisement

ಧರ್ಮಾನುಷ್ಠಾನ ಜೀವನದ ಉಸಿರಾಗಲಿ: ಶೃಂಗೇರಿ ಶ್ರೀ

03:45 AM Jun 30, 2017 | Harsha Rao |

ಕಾಸರಗೋಡು: ಭಗವಂತ ಒಬ್ಬನೇ.  ನಾಮವೂ,ರೂಪವೂ ಹಲವು. ಭಗವನ್ನಾಮೋಚ್ಚಾರಣೆಗೈದು ಪ್ರತ್ಯಕ್ಷವಾಗಿ ಭಗವಂತನ ಕಾರ್ಯಗಳಲ್ಲಿ ಭಾಗಿಗಳಾಗುವುದು, ಪರೋಕ್ಷವಾಗಿ ದೈವೀಗುಣ ಸಂಪನ್ನತೆಯಿಂದ ದೈನಂದಿನ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವವರನ್ನು ಆಸ್ತಿಕರು ಎಂದು ಕರೆಯುತ್ತಾರೆ. ಜಗತ್ತು ಆಸ್ತಿಕತೆಯ ಮೂಲಾಧಾರದೊಂದಿಗೆ ವ್ಯಾಪಿಸಿದೆ ಎನ್ನುವುದು ನಿರ್ವಿವಾದ. ಧರ್ಮ ಕಾರ್ಯ ಕೇವಲ ತೋರಿಕೆಯಾಗದೆ, ಹೃತ್‌ಕಮಲಗಳಿಂದ ಸೇವೆಗೈ ಯುವ ಸಮರ್ಪಣಾಭಾವ ಹೊಂದಿರಬೇಕು. ಆಗ ಮಾತ್ರವೇ ಭಗವಂತನ ಸಾನ್ನಿಧ್ಯದ ಅರಿವು ನಮ್ಮೆಲ್ಲರ ಅನುಭವಕ್ಕೆ ಬರುವುದು. ಧರ್ಮಾನುಷ್ಠಾನ ಜೀವನದ ಉಸಿರಾಗಿರಬೇಕು ಎಂದು ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರು ಆಶೀರ್ವಚನಗೈದು ನುಡಿದರು.

Advertisement

ಅಣಂಗೂರು ಶಾರದಾನಗರದ ಶ್ರೀ ಶಾರದಾಂಬಾ ಭಜನ ಮಂದಿರಕ್ಕೆ ನೂತನವಾಗಿ ನಿರ್ಮಿಸಿದ ಶಾಶ್ವತ ಚಪ್ಪರ (ಮೇಲ್ಛಾವಣಿ)ವನ್ನು ದೀಪ ಬೆಳಗಿಸಿ ಲೋಕಾರ್ಪಣೆಗೈದು ಅವರು ಮಾತನಾಡಿದರು.

ಊರು ಕೆಟ್ಟು ಹೋಯಿತೆಂದು ಬೊಬ್ಬಿಡುವವರು ಊರಿಗಾಗಿ, ಧರ್ಮ ಜಾಗೃತಿಗಾಗಿ ನಾನೇನು ಮಾಡಿದೆ ಅಥವಾ ಮಾಡಬಲ್ಲೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವು ದೊಳಿತು. ಆಸ್ತಿಕರೆಲ್ಲರ ಮನಶಾÏಂತಿಯ ಹಾಗೂ ಪ್ರಾರ್ಥಿಸುವ ದಿವ್ಯ ತಾಣವೇ ದೇವಾಲಯ. ಈ ಕ್ಷೇತ್ರ ಸಂಕಲ್ಪಕ್ಕೆ ಹನ್ನೆರಡು ಶತಮಾನಗಳ ಹಿಂದೆಯೇ ಭದ್ರ ಬುನಾದಿ ಹಾಕಿದವರು ಜಗದ್ಗುರು ಶಂಕರಾಚಾರ್ಯರು. ಇಂದು ನಾವೆಲ್ಲ ಪಠಿಸುವ ಸ್ತೋತ್ರ ಮಂತ್ರಾದಿಗಳೆಲ್ಲವೂ ಜಗದ್ಗುರು ಶಂಕರ ಭಗವತ್ಪಾದರು ಮಾನವೋದ್ಧಾರಕ್ಕಾಗಿ ನೀಡಿರುವ ದಿವ್ಯಾಮೃತವಾಗಿದ್ದು, ಆಸ್ತಿಕತೆಯ ನೆಲೆಗಟ್ಟು ಇದಾಗಿದೆ.

ಕಾಸರಗೋಡಿಗೆ ಬರಬೇಕೆಂಬ ನನ್ನ ಬಹುಕಾಲದ ಚಿಂತನೆಗೆ ಇದೀಗ ಸಂದರ್ಭ ಒದಗಿಬಂದಿರುವುದು ಖುಷಿ ತಂದಿದೆ. ಇಲ್ಲಿನ ಕಾರ್ಯಕ್ರಮದ ಅಚ್ಚುಕಟ್ಟುತನ, ವೈಖರಿ ಹಾಗೂ ವಾಸ್ತವ್ಯದ ಎಲ್ಲ ಅನುಕೂಲತೆಗಳನ್ನು ಒದಗಿಸಿದ ಶ್ರೀ ಶಾರದಾ ಭಜನ ಮಂದಿರದ ಸರ್ವ ಭಗವದ್ಭಕ್ತರಿಗೆ ನನ್ನ ಆಶೀರ್ವಾದವಿದೆ. 

ಶ್ರೀ ಶಂಕರ ಭಗವತ್ಪಾದಕರ ಉಪದೇಶ ಸಾರವನ್ನು ಜೀವನದಲ್ಲಿ ರೂಢಿಸಿಕೊಂಡು ಆಸ್ತಿಕ ಮನೋಭಾವವನ್ನು ವೃದ್ಧಿಸಿ ಕೊಂಡು, ಅಹಂಕಾರಕ್ಕೆ ಕಿಂಚಿತ್ತು ಸ್ಥಾನ ನೀಡದೆ, ದಾನಾದಿ ಸೇವಾ ಕಾರ್ಯಗಳಿಂದ ಜಗದೋದ್ಧಾರಕ್ಕಾಗಿ ಶ್ರಮಿಸುವ ಶಕ್ತಿ ಮಾತೆ ಶಾರದಾದೇವಿ ಕರುಣಿಸಲಿ ಎಂದರು.

Advertisement

ಕಿರಿಯ ಸ್ವಾಮಿಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು  ಆಶೀರ್ವಚನದಲ್ಲಿ ಗುರು ಮಹತ್ವದ ವಿವರ ನೀಡಿದರು.

ವೇದಿಕೆಯಲ್ಲಿ ಶ್ರೀ ವಿವಿಕ್ತಾನಂದ ಸ್ವಾಮೀಜಿ, ಟಿ. ಶ್ಯಾಮ ಭಟ್‌, ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಡಾ| ವೆಂಕಟ ಗಿರಿ, ಉದ್ಯಮಿ ಸುರೇಶ್‌, ರವೀಶ ತಂತ್ರಿ ಕುಂಟಾರು, ಸಿ.ವಿ. ಪೊದುವಾಳ್‌ ಮೊದಲಾದವರು ಉಪಸ್ಥಿತರಿದ್ದರು.

ವೈದಿಕರಿಂದ ವೇದಪಾರಾಯಣ ನಡೆಯಿತು. ಹಿರಣ್ಯ ವೆಂಕಟೇಶ ಭಟ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಸ್ವಾಗತಿಸಿದರು. ರವೀಶ ತಂತ್ರಿ ಮತ್ತು ಸಿ.ವಿ. ಪೊದುವಾಳ್‌ ಅಭಿನಂದನಾ ಪತ್ರ ಸಮರ್ಪಿಸಿದರು. ದಿನೇಶ್‌ ಮಡಪ್ಪುರ ಅಭಿನಂದನಾ ಪತ್ರವನ್ನು ವಾಚಿಸಿದರು. ದೇವದಾಸ್‌ ನುಳ್ಳಿಪ್ಪಾಡಿ ವಂದಿಸಿದರು. ಶ್ರೀ ಶಾರದಾಂಬಾ ಸೇವಾ ಸಂಘ ಮತ್ತು ಶ್ರೀ ಶೃಂಗೇರಿ ಜಗದ್ಗುರು ಅಭಿನಂದನಾ ಸಮಿತಿಯಿಂದ ಫಲಪುಷ್ಪ ಸಮರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next