Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ರಾಜ್ಯಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನ

12:56 AM Jan 05, 2024 | Team Udayavani |

ಬೆಳ್ತಂಗಡಿ: ರಾಜ್ಯಾದ್ಯಂತ ಜನವರಿಯಲ್ಲಿ ಶುದ್ಧಜಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಸುಮಾರು 1 ಲಕ್ಷ ಜನರಲ್ಲಿ ಶುದ್ಧಜಲ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕಗೊಂಡ ಜನಸಂಖ್ಯೆ ಹಾಗೂ ಪರಿಸರ ನಾಶದ ಪರಿಣಾಮ ನೀರಿನ ಅಭಾವ ತಲೆದೋರಿದ್ದು ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸುವುದು ಕಷ್ಟಕರವಾಗಿ ಪರಿಣಮಿಸಿದೆ. ರಾಜ್ಯದ ವಿವಿಧೆಡೆಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಂದ ಫ್ಲೋರೈಡ್‌ ಹಾಗೂ ಅಶುದ್ಧ ನೀರಿನಿಂದಾಗುತ್ತಿರುವ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಪ್ರಥಮವಾಗಿ ಸಮುದಾಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡರು.

ಇದರಂತೆ 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ಮೊದಲ ಶುದ್ಧಕುಡಿಯುವ ನೀರಿನ ಘಟಕವನ್ನು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಲೋಕಾರ್ಪಣೆ ಮಾಡಿದರು. ಶುದ್ಧಗಂಗಾ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ 437 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ನಿತ್ಯ ಸುಮಾರು 5,02,605 ಜನರು ಶುದ್ಧನೀರನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತೀದಿನ 20 ಲಕ್ಷ ಲೀಟರ್‌ ಶುದ್ಧ ಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಯೋಜನೆಯ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ ಎಂದು ತಿಳಿಸಿದರು.

ಶುದ್ಧಜಲ ಜಾಗೃತಿ ಅಭಿಯಾನ

ಶುದ್ಧಜಲ ಬಳಕೆಯ ಕುರಿತು ಜನ ಸಾಮಾನ್ಯರಿಗೆ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ಪೂರ್ತಿ ಶುದ್ಧಜಲ ಜಾಗೃತಿ ಅಭಿಯಾನವನ್ನು ಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಣಿ ಮೊದಲಾದ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಘಟಕ ಮೇಲ್ವಿಚಾರಕರು, ಪ್ರೇರಕರು, ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಗತಿಬಂಧು ಒಕ್ಕೂಟದ ಸದಸ್ಯರು ತೊಡಗಿಕೊಳ್ಳಲಿದ್ದಾರೆ ಎಂದು
ಡಾ| ಮಂಜುನಾಥ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next