Advertisement

Dharmasthalaಗ್ರಾಮಾಭಿವೃದ್ಧಿ ಯೋಜನೆ: ರೈತರ ಸಬಲತೆಗಾಗಿ ಕೃಷಿ ಅಭಿವೃದ್ಧಿ: ಅನಿಲ್‌ ಕುಮಾರ್‌

12:39 AM Jul 16, 2024 | Team Udayavani |

ಬೆಳ್ತಂಗಡಿ: ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಣ್ಣ ಮತ್ತು ಅತಿಸಣ್ಣ ರೈತರನ್ನು ಸಂಘಟಿಸಿ ಕೃಷಿ ಕ್ರಿಯಾಯೋಜನೆ ರೂಪಿಸಿ ಕೃಷಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಅನಿಲ್‌ ಕುಮಾರ್‌ ಎಸ್‌.ಎಸ್‌. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ವಿವಿಧ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ 2024-25ನೇ ಸಾಲಿನಲ್ಲಿ ರಾಜ್ಯದ 96 ತಾ|ಗಳ 38,050 ಎಕ್ರೆಯಲ್ಲಿ ಯಾಂತ್ರೀಕೃತ ಭತ್ತ, 91 ತಾ|ಗಳ 5,000 ಎಕ್ರೆಯಲ್ಲಿ ಸಿರಿಧಾನ್ಯ, 33 ತಾ|ಗಳ 1,650 ಎಕ್ರೆಯಲ್ಲಿ ಕಬ್ಬಿನ ಸುಸ್ಥಿರ ಬೇಸಾಯ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 24 ತಾ|ಗಳ 2,400 ಹೈನುಗಾರರಲ್ಲಿ ಲಾಭದಾಯಕ ಹೈನುಗಾರಿಕಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ರೈತರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಇದರ ಅನುಷ್ಠಾನಕ್ಕಾಗಿ 4,000 ಕೃಷಿ ತಾಂತ್ರಿಕ ತರಬೇತಿಗಳು ಮತ್ತು 1,700 ಅಧ್ಯಯನ ಪ್ರವಾಸಗಳನ್ನು ಹಮ್ಮಿ ಕೊಂಡಿದ್ದು, 10 ಲಕ್ಷಕ್ಕೂ ಅಧಿಕ ರೈತರು ಪ್ರಯೋಜನ ಪಡೆಯಲಿರುವರು. ಇದಕ್ಕಾಗಿ 20 ಕೋಟಿ ರೂ. ಅನುದಾನ ನಿಗದಿಗೊಳಿಸಲಾಗಿದೆ ಎಂದಿದ್ದಾರೆ.

75 ಕೋಟಿ ರೂ. ಅನುದಾನ
ಇದುವರೆಗೆ ರಾಜ್ಯಾದ್ಯಂತ ಒಟ್ಟು 30,000 ಹೆಕ್ಟೇರ್‌ನಲ್ಲಿ ಯಾಂತ್ರೀಕೃತ ಭತ್ತ, 4,000 ಹೆಕ್ಟೇರ್‌ನಲ್ಲಿ ಕಬ್ಬು ಮತ್ತು 3,000 ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೇಸಾಯವನ್ನು ಅನುಷ್ಠಾನಿಸಲಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ 4,963 ಮಂದಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಇವರಿಗಾಗಿ 5,264 ಕೃಷಿ ತಾಂತ್ರಿಕ ತರಬೇತಿ ಮತ್ತು ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು 75 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗಿದೆ.

Advertisement

ಭತ್ತ ಬೇಸಾಯದಿಂದ ವಿಮುಖ ರಾಗುತ್ತಿರುವ ರೈತರಿಗೆ ಯಾಂತ್ರೀಕೃತ ಭತ್ತ ಬೇಸಾಯ, ಆರೋಗ್ಯವರ್ಧಕವಾಗಿ ಸಿರಿಧಾನ್ಯಗಳು, ನೀರಿನ ಸದ್ಬಳಕೆಗಾಗಿ ಕಬ್ಬಿನ ಸುಸ್ಥಿರ ಬೇಸಾಯ ಮತ್ತು ಸಾವಯವ ಕೃಷಿಯ ಪ್ರೋತ್ಸಾಹಕ್ಕಾಗಿ ಹೈನೋದ್ಯಮವನ್ನು ತಾಲೂಕು ಮಟ್ಟದಲ್ಲಿ ಅನುಷ್ಠಾನಿಸಲು 256 ಕೃಷಿ ಮೇಲ್ವಿಚಾರಕರು ಸ್ಥಳೀಯ ಕಾರ್ಯ ಕರ್ತರ ಮತ್ತು ಪ್ರಗತಿಬಂಧು ತಂಡಗಳ ಸಹಕಾರದೊಂದಿಗೆ ಶ್ರಮಿಸುತ್ತಿದ್ದಾರೆ.

ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗ ದರ್ಶನದಂತೆ 4 ದಶಕಗಳಿಂದ ವಿವಿಧ ಕೃಷಿ ಸಂಬಂಧಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದ್ದು, ರೈತರಿಗೆ ಬಹಳ ಉಪಯೋಗವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳು, ಪರ್ಯಾಯ ಬೆಳೆ ಪದ್ಧತಿಗಳು, ತರಬೇತಿ, ಅಧ್ಯಯನ ಪ್ರವಾಸ ಇತ್ಯಾದಿಗಳ ಮೂಲಕ ಖರ್ಚುಗಳನ್ನು ನಿಯಂತ್ರಣಗೊಳಿಸಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗಿದೆ.
ಡಾ| ಡಿ. ವೀರೇಂದ್ರ ಹೆಗ್ಗಡೆಯವರು,
ಅಧ್ಯಕ್ಷರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ನಮ್ಮ ದೇಶವು ರಾಷ್ಟ್ರೀಯ ಆಹಾರಭದ್ರತೆಯನ್ನು ನಿರ್ಧರಿಸುವುದು ಅತ್ಯಂತ ಪ್ರಾಮುಖ್ಯದ ಸಂಗತಿ. ಪರಿಸರಸಹ್ಯ ಹಾಗೂ ವೈಜ್ಞಾನಿಕ ಪದ್ಧತಿಗಳ ಮೂಲಕ ಆರೋಗ್ಯಯುತವಾದ ಆಹಾರ ಬೆಳೆಗಳನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡುವುದು ಹೆಗ್ಗಡೆಯವರ ಸಂಕಲ್ಪ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡು ರೈತರ ಹಾಗೂ ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.
-ಅನಿಲ್‌ ಕುಮಾರ್‌ಎಸ್‌.ಎಸ್‌., ಮುಖ್ಯಕಾರ್ಯನಿರ್ವಹಣಾಧಿಕಾರಿ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next