ಬೆಳ್ತಂಗಡಿ: ನಿಸ್ವಾರ್ಥದಿಂದ ಆಪತ್ತಿನಲ್ಲಿರುವವರನ್ನು ರಕ್ಷಿಸುವ ಶೌರ್ಯ ಯೋಧರು ಆಪ್ತ ರಕ್ಷಕರು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ವತಿಯಿಂದ ಧರ್ಮಸ್ಥಳದಲ್ಲಿ ಸೆ.18 ರಂದು ಜರಗಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಸಮಿತಿಗಳ ರಾಜ್ಯ ಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶೌರ್ಯ ತಂಡವು ರಾಜ್ಯದ 91 ತಾಲೂಕುಗಳಲ್ಲಿ 638 ಘಟಕಗಳ ಮೂಲಕ 10,640 ಆಪ್ತರಕ್ಷಕರನ್ನು ಹೊಂದಿದೆ. ಇವರೆಲ್ಲ ತ್ಯಾಗ, ಸಾಹಸಗಳ ಮೂಲಕ ಮಹೋನ್ನತ ಸೇವೆ ಸಲ್ಲಿಸುತ್ತಿದ್ದಾರೆ. ಜೀವ ಉಳಿಸುವುದು ಪುಣ್ಯದ ಕಾರ್ಯ. ತಮ್ಮ ತಾಲೂಕುಗಳಲ್ಲಿ ವಿಪ ತ್ತು ಎದುರಿಸಲು ತಂಡವನ್ನು ಸನ್ನದ್ಧಗೊಳಿಸಿ ಎಂದರು. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, ದೇಶದಲ್ಲಿ ಎನ್‌ಡಿಆರ್‌ಎಫ್ ಬಳಿಕ ಅತಿ ದೊಡ್ಡ ಸೇವಾ ಪಡೆಯಿದ್ದರೆ ಅದು ಶೌರ್ಯ ತಂಡ ಎಂದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ 638 ಘಟಕಗಳ ಮೂಲಕ 10,460 ಮಂದಿ ಸೇವೆ ನೀಡುತ್ತಿದ್ದಾರೆ. ಇವುಗಳಲ್ಲಿ 14 ಕ್ಷಿಪ್ರ ತಂಡಗಳಿವೆ. ಧರ್ಮಾಧಿಕಾರಿಯವರು 2 ಕೋ.ರೂ. ಮೌಲ್ಯದ ರಕ್ಷಣ ಕಿಟ್ ಒದಗಿಸಿದ್ದಾರೆ. ಜತೆಗೆ 75 ಸಾವಿರ ರೂ. ಸಂಪೂರ್ಣ ಸುರಕ್ಷಾ ವಿಮೆ ನೀಡಲಾಗಿದೆ ಎಂದು ಹೇಳಿದರು.
ಈವರೆಗೆ 1.74 ಲಕ್ಷ ವಿಪತ್ತು ಸೇವೆ ನೀಡಿದ್ದು, 2.02 ಲಕ್ಷ ಒಟ್ಟು ಸಾಮಾಜಿಕ ಸೇವೆ ನೀಡುವ ಮೂಲಕ 22 ಲಕ್ಷ ಮಾನವ ದಿನಗಳನ್ನು ಸೃಜಿಸಿದೆ. ಇತ್ತೀಚೆಗೆ ವಯನಾಡಿನಲ್ಲೂ ಸೇವೆ ನೀಡಿದೆ ಎಂದರು. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ (ಎನ್‌ಡಿಆರ್‌ಎಫ್) ಟೀಮ್ ಕಮಾಂಡರ್ ಶಾಂತಿಲಾಲ್ ಜಟಿಯಾ ಕಾರ್ಯಾಗಾರ ನಡೆಸಿಕೊಟ್ಟರು. ವಿಪತ್ತು ನಿರ್ವಹಣ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ ವಂದಿಸಿದರು. ಜನಜಾಗೃತಿ ಯೋಜ ನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು.
ಪ್ರಥಮ ಚಿಕಿತ್ಸೆ (ಸಿಆರ್‌ಪಿ) ನಡೆಸಿದ 8 ಸ್ವಯಂ ಸೇವಕರಿಗೆ ಬಹುಮಾನ, ಶೌರ್ಯ ತಂಡದವರಿಗೆ ಸಮವಸ್ತ್ರ, ಮಾಹಿತಿ ಪುಸ್ತಕವನ್ನು ಡಾ| ಹೆಗ್ಗಡೆ ಬಿಡುಗಡೆ ಮಾಡಿದರು.