ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ರಾತ್ರಿ ಶಿವನಾಮ ಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಜಪ, ತಪ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ. ಶುಕ್ರವಾರ ಸಂಜೆ 5.30ರಿಂದ ರಾತ್ರಿ ನಾಲ್ಕು ಜಾವಗಳಲ್ಲಿ ಭಕ್ತರು ದೇವರ ದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸುವರು. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ 25 ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಶುಕ್ರವಾರ ಬೆಳಗ್ಗೆ ಧರ್ಮಸ್ಥಳ ತಲುಪಲಿದ್ದಾರೆ.
ಹತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಈಗಾಗಲೇ ಮುಂಡಾಜೆ, ಚಾರ್ಮಾಡಿ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಗುರುವಾರ ಪಾದಯಾತ್ರಿಗಳಿಗೆ ಉಜಿರೆಯಲ್ಲಿರುವ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಶಿವರಾತ್ರಿಗೆ 67 ತಂಡಗಳಲ್ಲಿ 16,500 ಮಂದಿ ಪಾದಯಾತ್ರಿಗಳು ಬರುವುದಾಗಿ ಧರ್ಮಸ್ಥಳಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ. ಇದಕ್ಕಾಗಿ ಪಾದಯಾತ್ರಿಗಳು ತಂಗುವ ಶಾಲೆ, ವಸತಿಛತ್ರ ಹಾಗೂ ಭಜನ ಮಂದಿರಗಳಲ್ಲಿ ಪ್ರತಿ ದಿನ ಸಂಜೆ 6.30ರಿಂದ 8.30ರ ವರೆಗೆ ಧಾರ್ಮಿಕ ಉಪನ್ಯಾಸ, ಭಜನೆ, ಪ್ರಾರ್ಥನೆ, ಧ್ಯಾನ, ಸತ್ಸಂಗ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಭಜನ ಪರಿಷತ್ ವತಿಯಿಂದ ಆಯೋಜಿಸಲಾಗಿದೆ.
ಎಸ್‌ಡಿಎಂ ಸಂಚಾರಿ ಆಸ್ಪತ್ರೆ ವತಿಯಿಂದ ಪಾದಯಾತ್ರಿಗಳಿಗೆ ವೈದ್ಯ ಕೀಯ ಶುಶ್ರೂಷೆ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಪೊಲೀಸ್ ಹೊರಠಾಣೆ, ಸ್ವಾಗತ ಕಚೇರಿ, ಉಚಿತ ಪಾನೀಯ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.