ಅರಸೀಕೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಉತ್ತೇಜನ ನೀಡುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವದೇಶಿ ಆಂದೋಲನ ಪರಿಕಲ್ಪನೆ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ ಎಂದು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ದನ ತಿಳಿಸಿದರು. ನಗರದ ಮೊದಲಿಯಾರ್ ರಸ್ತೆಯಲ್ಲಿರುವ ನಗರಸಭೆ ವಾಣಿಜ್ಯ ಸಂಕೀಣದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿಧಾನ್ಯ ಮತ್ತು ಸ್ವದೇಶಿ ವಸ್ತುಗಳ ಮಾರಾಟ ಮಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ 250ಕ್ಕೂ ಹೆಚ್ಚು ಮಾರಾಟ ಮಳಿಗೆ: ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 15 ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಪ್ರಾರಂಭವಾಗಿದ್ದು, ಹಾಸನ ಜಿಲ್ಲೆಯಲ್ಲಿ 12 ಮಳಿಗೆಗಳು ಸೇರಿದಂತೆ ರಾಜ್ಯದಲ್ಲಿ ಇಂದು 250ಕ್ಕೂ ಹೆಚ್ಚಿನ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ 6 ಸಾವಿರ ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದರು.
ಜ್ಞಾನ ವಿಕಾಸ ಕಾರ್ಯಕ್ರಮ: ಸ್ಥಳೀಯ ಯೋಜನಾಧಿಕಾರಿ ವಿನಾಯಕ ಪೈ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳೆಯರಿಗೆ ಸ್ವಸಹಾಯ ಸಂಘಗಳನ್ನು ನಡೆಸುವ ಜೊತೆಗೆ ಅನೇಕ ಸಂಸ್ಕಾರಯುತ ಚಟುವಟಿಕೆಗಳು ಜ್ಞಾನವಿಕಾಸ ಕೇಂದ್ರಗಳ ಮೂಲಕ ನೀಡಲಾಗುತ್ತದೆ.ಆದ್ದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರಕ ಶಕ್ತಿಯನ್ನು ನಮ್ಮ ಸಂಸ್ಥೆ ಮೂಲಕ ನೀಡಲಾಗುತ್ತಿದ್ದು, ಇಂದು ಗ್ರಾಮೀಣ ಪ್ರದೇಶದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಅವರುಗಳು ಮುಂದಾಗಿದ್ದಾರೆ ಎಂದರು.
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ವಸಂತ ಪ್ರಾಸ್ತಾವಿಕವಾಗಿ ಮಾತನಾಡಿ ಸಿರಿ ಉತ್ಪನ್ನಗಳ ಪರಿಚಯ ಹಾಗೂ ಮಾರಾಟ ಕುರಿತು ಮಾಹಿತಿ ನೀಡಿದರು. ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಮಾಲೀಕರಾದ ಸಿಂಧು ಬಾಲಸುಬ್ರಮಣ್ಯ, ಸಂಸ್ಥೆಯ ಮೇಲ್ವಿಚಾರಕರಾದ ಪವಿತ್ರ, ರಮೇಶ್ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಸಬಾ ಹೋಬಳಿ ಮೇಲ್ವಿಚಾರಕರಾದ ಯಶೋಧಾ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
22 ಕೋಟಿ ರೂ. ವಹಿವಾಟು: ಗ್ರಾಮೀಣ ಪ್ರದೇಶದ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ವಸ್ತುಗನ್ನು ಸಿರಿ ಎಂಬ ಹೆಸರಿನಲ್ಲಿ ಉತ್ಪನ್ನ ಮಾಡಲಾಗುತ್ತಿದ್ದು,ವಾರ್ಷಿಕ ಸರಾಸರಿ ವಹಿವಾಟು 22 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಹೆಚ್ಚಾಗಿದ್ದು, ಸಿರಿ ಸಂಸ್ಥೆ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿದ್ದು, ಸಿದ್ಧ ಉಡುಪುಗಳು, ತಿಂಡಿ ತಿನಿಸುಗಳು, ಫೆನಾಯಿಲ್, ಸೋಪು, ಅಗರಬತ್ತಿ, ಅಡಿಕೆ ಹಾಳೆ ತಟ್ಟೆಗಳು ಹಾಗೂ ಉತ್ತಮ ಗುಣಮಟ್ಟದ ಪೌಷ್ಟಿಕ ಪೌಡರ್ ಹಾಗೂ ಹಣ್ಣಿನ ಜ್ಯೂಸ್ ಸೇರಿದಂತೆ ಹಲವಾರು ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ದನ ಹೇಳಿದರು.
ಮಹಿಳಾ ಸಬಲೀಕರಣ: ಜಿಲ್ಲಾ ಯೋಜನಾ ನಿರ್ದೇಶಕರಾದ ಜಯರಾಂ ನಾಯಕ್ ಮಾತನಾಡಿ, ನಮ್ಮ ಸಂಸ್ಥೆಯ ಗ್ರಾಮೀಣಾ ಮಹಿಳೆಯರ ಸಬಲೀಕರಣದ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಪ್ರತಿಯೊಂದು ಗ್ರಾಮದಲ್ಲಿಯೂ ಸ್ವತ್ಛತೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಿ ಪರಿಸರ ರಕ್ಷಣೆ ಜೊತೆಗೆ ಶುದ್ಧಗಂಗಾ ನೀರಿನ ಘಟಕಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಗ್ರಾಮದ ಜನರಲ್ಲಿ ಸ್ಥಳೀಯ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಸಿರಿ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಲು ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.