Advertisement

ಕೆರೆಕಟ್ಟೆ ಉತ್ಸವದಲ್ಲಿ ಬೆಳಗಿದ ಧನ್ಯಭಾವ

11:29 PM Nov 24, 2019 | Team Udayavani |

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಎರಡನೇ ದಿನವಾದ ಶನಿವಾರ ರಾತ್ರಿ ಕೆರೆಕಟ್ಟೆಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

Advertisement

ಗರ್ಭಗುಡಿಯಿಂದ ಹೊರಕ್ಕೆಚಿತ್ತೈಸಿ ಬ್ರಹ್ಮವಾಹಕರ ಶಿರದಲ್ಲಿ, ವೈಭವೋಪೇತ ಪಲ್ಲಕ್ಕಿಯಲ್ಲಿ ಆಸೀನನಾಗಿ ಶೋಭಿಸುವ ಮಂಜುನಾಥಸ್ವಾಮಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಧನ್ಯರಾದರು.

ಕಾರ್ತಿಕ ಮಾಸದ ಕಡೆಯ ಐದು ದಿನಗಳ ಕಾಲ ನಡೆಯುವ ಈ ಲಕ್ಷ ದೀಪೋತ್ಸವದಲ್ಲಿ ಪ್ರತಿಯೊಂದು ದಿನವೂ ಅನನ್ಯ, ಅತಿವಿಶೇಷ.

ಈ ಉತ್ಸವದ ಪೂಜೆ ಒಂದೇ ರೀತಿಯಾಗಿದ್ದರೂ ಪಲ್ಲಕ್ಕಿಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ. ಕೆರೆಕಟ್ಟೆ ಉತ್ಸವಕ್ಕೆ ದೇವರನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.

ಇದಕ್ಕೂ ಮುನ್ನ ದೇಗುಲದ ಅಂಗಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತು ಇತ್ಯಾದಿ ಹಲವು ನಾಮಗಳ ಒಟ್ಟು 16 ಸುತ್ತುಗಳಲ್ಲಿ ಸ್ವಾಮಿಯ ವಿಗ್ರಹವನ್ನು ಒಯ್ಯಲಾಯಿತು. ಉಡಿಕೆ 5 ಸುತ್ತುಗಳಿದ್ದು, ಎಲ್ಲ ಉತ್ಸವಗಳಿಗೂ ಒಂದೇ ತೆರನಾಗಿದೆ.
ಉತ್ಸವದ ಮೆರವಣಿಗೆ ಆರಂಭಕ್ಕೂ ಮುನ್ನ ಬಲಿ ಕಲ್ಲು ಶುದ್ಧೀಕರಿಸಿ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ, ಮಂಜುನಾಥ ಸ್ವಾಮಿಯ ವಿಗ್ರಹವನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ಬಳಿಕ ಒಟ್ಟು 11 ಸುತ್ತುಗಳ ಅನಂತರ ದೇವಾಲಯದ ಮುಂಭಾಗದಿಂದ ವಿವಿಧ ತೆರನಾದ ವಾದ್ಯಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು.

Advertisement

ಮೆರವಣಿಗೆಯುದ್ದಕ್ಕೂ ಶ್ರೀಕ್ಷೇತ್ರದ ಆನೆಗಳಾದ ಲತಾ ಮತ್ತು ಲಕ್ಷ್ಮೀ ರಾಜಗಾಂಭೀರ್ಯದ ಹೆಜ್ಜೆಗಳೊಂದಿಗೆ ಜತೆಗೂಡಿದವು.ದೇವರನ್ನು ವಿಹಾರಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯವಿರುವುದರಿಂದ ದೇಗುಲದ ಮುಂಭಾಗದ ಕೆರೆ ಕಟ್ಟೆಯಲ್ಲಿ ಸ್ವಾಮಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಅನಂತರ ರಥವನ್ನು ಭಕ್ತರು ದೇವಾಲಯದ ಸುತ್ತ ಒಂದು ಸುತ್ತು ಕರೆತಂದು ಮರಳಿ ಸಾನ್ನಿಧ್ಯಕ್ಕೆ ಕರೆತರುವುದರೊಂದಿಗೆ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.

ಕಂಚಿಮಾರುಕಟ್ಟೆ ಉತ್ಸವ
ಸೋಮವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಜರಗಲಿದೆ. ಈ ಉತ್ಸವದಲ್ಲಿ ಶ್ರೀ ಮಂಜುನಾಥ ದೇವರ ಮೂರ್ತಿಯನ್ನು ನಂದಿ ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ. ದೇಗುಲದ ಹೊರಭಾಗದಲ್ಲಿ ಶುದ್ಧಿ ಕಾರ್ಯ ನಡೆದು, ಬಳಿಕ ಒಳಭಾಗದಲ್ಲಿ ಪಂಚವಾದ್ಯ
ಗಳೊಂದಿಗೆ 16 ಸುತ್ತುಗಳ ಮೆರವಣಿಗೆ ನಡೆಸುವುದು ವಿಶೇಷ. ವೈಶಾಲಿ ವಸತಿಗೃಹದ ಮುಂಭಾಗದಲ್ಲಿನ ಕಂಚಿಮಾರುಕಟ್ಟೆಯಲ್ಲಿ ಸ್ವಾಮಿಗೆ ಪೂಜೆ ನಡೆಸಲಾಗುತ್ತದೆ.

ಇಂದು ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 25ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ನಿಕಟಪೂರ್ವ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಉದ್ಘಾಟಿಸುವರು. ಇಸ್ಕಾನ್‌ ಸಂಸ್ಥೆಯ ಗೌರ್‌ ಗೋಪಾಲದಾಸ್‌ ಅಧ್ಯಕ್ಷತೆ ವಹಿಸುವರು. ಮೈಸೂರಿನ ಫೋಕಸ್‌ ಅಕಾಡೆಮಿ ಸಿಇಒ ಡಿ.ಟಿ. ರಾಮಾನುಜಂ, ಲೇಖಕ ಕದ್ರಿ ನವನೀತ ಶೆಟ್ಟಿ ಮತ್ತು ಹೆಸರಾಂತ ಕತೆ-ಕಾದಂಬರಿಗಾರ ಬೊಳುವಾರು ಮಹಮದ್‌ ಕುಂಞಿ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ 8ರಿಂದ ವಿ| ಕೆ. ವಾಗೀಶ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಗಾಯನ, ವಿ| ವಾಣಿ ಗೋಪಾಲ್‌ ಮತ್ತು ತಂಡದಿಂದ ಸಮೂಹ ನೃತ್ಯ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next