Advertisement

ನ. 22ರಿಂದ 26: ಧರ್ಮಸ್ಥಳ ಲಕ್ಷ ದೀಪೋತ್ಸವ

12:42 AM Nov 19, 2019 | mahesh |

ಬೆಳ್ತಂಗಡಿ: ಚತುರ್ವಿಧ ದಾನಗಳಿಗೆ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ತಿಕ ಮಾಸದ ನ. 22ರಿಂದ 27ರ ವರೆಗೆ ನಡೆಯುವ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸಂಗೀತ ಮೇಳ, ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ, ವಸ್ತು ಪ್ರದರ್ಶನ, ನೃತ್ಯವೈವಿಧ್ಯ ಸೇರಿದಂತೆ ಹಬ್ಬದ ಸೊಬಗಿಗೆ ಅಮೃತವರ್ಷಿಣಿ ಮತ್ತು ಮಹೋತ್ಸವ ಸಭಾಭವನ, ವಸ್ತುಪ್ರದರ್ಶನ ಮಂಟಪಗಳು ಸಾಕ್ಷಿಯಾಗಲಿವೆ.

Advertisement

ಸಾಂಸ್ಕೃತಿಕ ಕಾರ್ಯಕ್ರಮಗಳು
ವಸ್ತುಪ್ರದರ್ಶನ ಮಂಟಪದಲ್ಲಿ ನ. 22ರಂದು ಸಂಜೆ 6ರಿಂದ ಸಂಗೀತ, 7ರಿಂದ ಭರತನಾಟ್ಯ, 8.30ರಿಂದ ನೃತ್ಯ, ನ. 23ರಂದು ಸಂಜೆ 5.30ರಿಂದ ಗೀತಗಾಯನ, 7ರಿಂದ ಜಾದೂ, 8.30ರಿಂದ ನೃತ್ಯ ವೈವಿಧ್ಯ, ನ. 24ರಂದು ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7ರಿಂದ ಮಾತನಾಡುವ ಗೊಂಬೆ ಮತ್ತು ಜಾದೂ, 8.30ರಿಂದ ಭರತನಾಟ್ಯ, ನ. 25ರಂದು ಸಂಜೆ 5.30ರಿಂದ ಸುಗಮ ಸಂಗೀತ, 6.30ರಿಂದ ನಾಟ್ಯ ಮಂಜರಿ, 8ರಿಂದ ಸಂಗೀತ ಕಾರ್ಯಕ್ರಮ, 9ರಿಂದ ಯಕ್ಷಗಾನ, ನ. 26ರಂದು ಸಂಜೆ 5.30ರಿಂದ ಸ್ಯಾಕ್ಸೋಫೋನ್‌ ವಾದನ, ಗಾನ ವೈಭವ, ಯೋಗನೃತ್ಯ, ಭರತನಾಟ್ಯ ನಡೆಯಲಿದೆ.

ಲಲಿತಕಲಾಗೋಷ್ಠಿ
ನ. 24ರಂದು ಸಂಜೆ 3ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಸಂಜೆ 5.30ರಿಂದ ನೃತ್ಯ, ಸಂಜೆ 7ರಿಂದ ಸಂಗೀತ ಮೇಳ, ರಾತ್ರಿ 8.30ರಿಂದ ನೃತ್ಯ ವೈವಿಧ್ಯ ರಂಜಿಸಲಿದೆ.

ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 25ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ನಿಕಟಪೂರ್ವ ಲೋಕ ಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಉದ್ಘಾಟಿಸುವರು. ಇಸ್ಕಾನ್‌ ಸಂಸ್ಥೆಯ ಗೌರ್‌ ಗೋಪಾಲ ದಾಸ್‌ ಅಧ್ಯಕ್ಷತೆ ವಹಿಸುವರು. ಮೈಸೂರಿನ ಫೋಕಸ್‌ ಅಕಾಡೆಮಿಯ ಸಿಇಒ ಡಿ.ಟಿ. ರಾಮಾನುಜಮ್‌, ಲೇಖಕ ಕದ್ರಿ ನವನೀತ ಶೆಟ್ಟಿ ಮತ್ತು ಕಥೆ-ಕಾದಂಬರಿಗಾರ ಬೊಳುವಾರು ಮಹಮದ್‌ ಕುಂಞಿ ಧಾರ್ಮಿಕ ಉಪನ್ಯಾಸ ನೀಡುವರು. ಅಂದು ರಾತ್ರಿ 8ರಿಂದ ವಿ| ಡಾ| ಕೆ. ವಾಗೀಶ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಗಾಯನ, ವಿ| ವಾಣಿ ಗೋಪಾಲ್‌ ಮತ್ತು ತಂಡದಿಂದ ಸಮೂಹ ನೃತ್ಯ ನಡೆಯಲಿದೆ.

ಸಾಹಿತ್ಯ ಸಮ್ಮೇಳನ
ನ. 26ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಉಪ ಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಉದ್ಘಾಟಿಸುವರು. ಹಂಪಿ ಕನ್ನಡ ವಿ.ವಿ.ಯ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು. ಸಾಹಿತಿ ಶ್ರೀಧರ ಬಳಗಾರ, ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಮತ್ತು ಖ್ಯಾತ ವಾಗ್ಮಿ ರಿಚರ್ಡ್‌ ಲೂಯಿಸ್‌ ಉಪನ್ಯಾಸ ನೀಡುವರು. ಬೆಂಗಳೂರಿನ ವಿ| ಅಶೋಕ್‌ ಕುಮಾರ್‌ ಮತ್ತು ಬಳಗದವರಿಂದ ಕಥಕ್‌ ನೃತ್ಯರೂಪಕ ಪ್ರದರ್ಶನವಿದೆ.

Advertisement

ಸಮವಸರಣ ಪೂಜೆ
ನ. 27ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ರಾತ್ರಿ 12 ಗಂಟೆ ಬಳಿಕ ನಡೆಯುವ ಲಕ್ಷದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತರು ಆಗಮಿಸಲಿದ್ದಾರೆ.

ವಿವಿಧ ಉತ್ಸವಗಳು
ದೀಪೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ನ. 22ರಂದು ಹೊಸಕಟ್ಟೆ ಉತ್ಸವ, 23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, 25ರಂದು ಕಂಚಿಮಾರುಕಟ್ಟೆ ಉತ್ಸವ, 26ರಂದು ಗೌರಿಮಾರುಕಟ್ಟೆ ಉತ್ಸವ, 27ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next