Advertisement

ಧರ್ಮಸ್ಥಳ ಗ್ರಾ.ಯೋ. ಸಂಘಗಳ ವ್ಯವಹಾರ ಇನ್ನು ನಗದು ರಹಿತ

08:09 AM Oct 25, 2017 | |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ವ್ಯವಹಾರ ಇನ್ನು ತಂತ್ರಾಂಶ ಆಧರಿತವಾಗಿ ಸಂಪೂರ್ಣ ನಗದು ರಹಿತ ಆಗಲಿದೆ. ಈ ಯೋಜನೆಗೆ ಅ.29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದೊಡನೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅಂಕಿತ ಬೀಳಲಿದೆ. ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಬ್ಯಾಂಕುಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದ 12 ಲಕ್ಷ ಜನ ಸ್ವಸಹಾಯ ಸಂಘಗಳ ಸದಸ್ಯರಿಗೆ ಜನ್‌ಧನ್‌ ಯೋಜನೆಯನ್ವಯ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು ಈ ಸದಸ್ಯರುಗಳಿಗೆ ರೂಪೇ ಕಾರ್ಡ್‌ಗಳನ್ನು ಪ್ರಧಾನಿ ವಿತರಿಸಲಿದ್ದಾರೆ. ಮೋದಿ ಅವರು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆವ ಗ್ರಾಮಾಭಿವೃದ್ಧಿ ಯೋಜನೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಡಾ| ಹೆಗ್ಗಡೆಯವರ ನೂತನ ಸಂಕಲ್ಪ ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಡಾ| ಹೆಗ್ಗಡೆಯವರು, ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ಸಾಂಖೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ, ಕೌಶಲಾಭಿವೃದ್ಧಿ ಮತ್ತು ಉದ್ದಿಮೆಶೀಲತಾ ಸಚಿವ ಅನಂತ್‌ ಕುಮಾರ್‌ ಹೆಗಡೆ, ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ಲೋಕಸಭಾ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಯೋಜನೆಯ ಟ್ರಸ್ಟಿ ಡಿ. ಸುರೇಂದ್ರ ಕುಮಾರ್‌, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಕ್ಷ ರಜನೀಶ್‌ ಕುಮಾರ್‌, ಆಡಳಿತ ನಿರ್ದೇಶಕ ಪರ್ವೀನ್‌ ಕುಮಾರ್‌ ಗುಪ್ತಾ ಉಪಸ್ಥಿತರಿರುವರು. ರಾಜ್ಯದ ಆಯ್ದ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ| ಎಲ್‌.ಎಚ್‌. ಮಂಜುನಾಥ್‌ ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next