Advertisement

ಧರ್ಮಸ್ಥಳ: ಅಂಚೆ-ಕುಂಚ ಸ್ಪರ್ಧೆ ಪುರಸ್ಕಾರ : ಗಮನ ಸೆಳೆದ ಕುಂಚ-ಗಾನ ನೃತ್ಯ ವೈಭವ

09:55 PM Feb 13, 2021 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ ಆಶ್ರಯದಲ್ಲಿ ಆಯೋಜಿಸಿದ್ದ 18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜರಗಿದ ಪುರಸ್ಕಾರ ಸಮಾರಂಭದಲ್ಲಿ ಕುಂಚ-ಗಾನ-ನೃತ್ಯ ವೈಭವ ಕಣ್ಮನ ಸೆಳೆಯಿತು.

Advertisement

ಬೆಂಗಳೂರಿನ ಚಿತ್ರಕಲಾವಿದ ಬಾಗೂರು ಮಾರ್ಕಾಂಡೇಯ ಹಾಗೂ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಏಕಕಾಲದಲ್ಲಿ ಕುಂಚ-ಗಾನ-ನೃತ್ಯ ವೈಭವ ಸಾದರಪಡಿಸಿದ್ದು, ಮೆಚ್ಚುಗೆಗೆ ಪಾತ್ರವಾಯಿತು.

“ಇರುವಂತೆ ಇರಬೇಕು ತೊರೆದು ಚಿಂತೆಯನು’ ಹಾಡಿಗೆ ವಿದುಷಿ ಶೀಲಾ ದಿವಾಕರ್‌ ರಾಗ ಸಂಯೋಜಿಸಿ ಹಾಡಿದ್ದು, ವಿದುಷಿ ಶಾರದಾಮಣಿ ಶೇಖರ್‌, ಶ್ರೀಲತಾ ನಾಗರಾಜ್‌ ನೃತ್ಯ ಸಂಯೋಜನೆ ಮಾಡಿದ್ದರು. ವಿದುಷಿಗಳಾದ ದಿವ್ಯಶ್ರೀ, ವಾಣಿಶ್ರೀ, ದೀಪ್ತಿ, ದೀಕ್ಷಾ ಶೆಟ್ಟಿ, ದೀಪಾ ಲಕ್ಷ್ಮೀ ನೃತ್ಯ ಪ್ರಸ್ತುತ ಪಡಿಸಿದರು.

ಸ್ಪರ್ಧೆಗೆ ಈ ಬಾರಿ ಕಿನಾರೆ ಎಂಬ ವಿಷಯ ನೀಡಲಾಗಿತ್ತು. ರಾಜ್ಯಮಟ್ಟದ ಅಂಚ-ಕುಂಚ ಸ್ಪರ್ಧೆಯಲ್ಲಿ ಮಕ್ಕಳು ಅಂಚೆ ಕಾರ್ಡಿನಲ್ಲಿ ಸಮುದ್ರ ಕಿನಾರೆಯ ಆಕರ್ಷಕ ಚಿತ್ರಗಳನ್ನು ಬಿಡಿಸಿದ್ದರು. ಬಹುಮಾನ ಗಳಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಯಿತು. ಹೆಚ್ಚಿನ ಸ್ಪರ್ಧಾ ವಿಜೇತರು ಡಾ| ಹೆಗ್ಗಡೆ ಅವರ ಚಿತ್ರವನ್ನು ಬಿಡಿಸಿ ಉಡುಗೊರೆಯಾಗಿ ನೀಡಿದರು.

Advertisement

ಕರ್ನಾಟಕ ಕಲಾಶ್ರೀ, ನಟ ಡಾ| ಶ್ರೀಧರ್‌ ಪುರಸ್ಕಾರ ನೀಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದರು. ಶಾಂತಿವನ ಟ್ರಸ್ಟಿಗಳಾದ ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್‌, ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ, ಡಾ| ಐ.ಶಶಿಕಾಂತ್‌ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ
ಕಿನಾರೆ ಎಂಬ ವಿಷಯದಲ್ಲಿ ಒಟ್ಟು ನಾಲ್ಕು ಪ್ರತ್ಯೇಕ ವಿಭಾಗಗಳಾದ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗದಲ್ಲಿ ಅಂಚೆ-ಕುಂಚ ಸ್ಪರ್ಧೆ ಆಯೋಜಿಸಲಾಗಿತ್ತು. ನಾಲ್ಕು ವಿಭಾಗಗಳಿಂದ 16,230 ಸ್ಪರ್ಧಾಳುಗಳು ಭಾಗವಹಿಸಿದರು. ನಾಡಿನಾದ್ಯಂತ ವ್ಯಾಪಕ ಪ್ರಕ್ರಿಯೆ ದೊರೆ ಯುತ್ತಿದ್ದು, ಸುಪ್ತ ಕಲಾ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಕಳೆದ 18 ವರ್ಷಗಳಿಂದ ಈ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಈವರೆಗೆ ನಡೆದ ಅಂಚೆಕುಂಚ ಸ್ಪರ್ಧೆಗಳಲ್ಲಿ 2,22,950 ಮಂದಿ ಭಾಗವಹಿಸಿರುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next