ಬೆಳ್ತಂಗಡಿ: ಹೊಸ ವರುಷ ಮತ್ತೆ ಬಂದಿದೆ, ಜೀವನ ಹಳೆ ಘಟನೆಗಳನ್ನು ಮೆಲುಕು ಹಾಕುತ್ತ ಹೊಸ ಸಂವತ್ಸರದ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನವು ಫಲಪುಷ್ಪಾಲಂಕಾರಗಳಿಂದ ಸಿಂಗಾರವಾಗಿದೆ.
ಸಂಸ್ಕೃತಿ ಪ್ರಕಾರ ಯುಗಾದಿ ಹೊಸ ವರ್ಷವಾಗಿದ್ದರೂ ಕ್ಯಾಲೆಂಡರ್ ವರ್ಷಕ್ಕೆ ಪದಾರ್ಪಣೆ ಮಾಡುವುದರಿಂದ ಬೆಂಗಳೂರಿನ ಉದ್ಯಮಿ ಎಸ್.ಗೋಪಾಲ್ ರಾವ್ ಅವರು ಕಳೆದ 14 ವರ್ಷಗಳಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಭಿಮಾನ ಹಾಗೂ ಗೌರವದ ಜತೆಗೆ ಕ್ಷೇತ್ರದ ಮೇಲಿನ ಭಕ್ತಿಯಿಂದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಅಲಂಕಾರದ ಸೇವೆ ನೀಡುತ್ತಾ ಬಂದಿದ್ದಾರೆ.
ಪ್ರಸಕ್ತ ವರ್ಷದ ಅಲಂಕಾರಕ್ಕಾಗಿ ಸುಮಾರು 15 ಲೋಡ್‌ನಷ್ಟು ಅಲಂಕೃತ ಸಾಮಗ್ರಿಗಳನ್ನು ಬಳಸಲಾಗಿದ್ದು, ಇದರಲ್ಲಿ ಹಣ್ಣು ಹಂಪಲು, ವಿವಿಧ ಬಗೆಯ ಅಲಂಕೃತ ಪುಷ್ಪಗಳು, ತರಕಾರಿ ಸೇರಿ 5 ಲೋಡ್ ವಸ್ತುಗಳನ್ನು ಬಳಸಿಕೊಂಡು ದೇಗುಲದ ಮುಂಭಾಗ, ಒಳಾಂಗಣ, ದೇವರ ಗರ್ಭಗುಡಿ, ಕಂಬಗಳು, ಹೆಗ್ಗಡೆಯವರ ನಿವಾಸ, ಅನ್ನಪೂರ್ಣ ಛತ್ರ ಸಹಿತ ಪ್ರಮುಖ ಸ್ಥಳವನ್ನು ಸಿಂಗರಿಸಲಾಗಿದೆ.
ಕಲ್ಲಂಗಡಿ ಹಣ್ಣು, ಕರ್ಬೂಜ, ಕಬ್ಬು, ಕಿತ್ತಾಳೆ, ತೆಂಗಿನಕಾಯಿ, ಸೇಬು ಸಹಿತ ವಿವಿಧ ಬಗೆಯ ಹಣ್ಣುಗಳನ್ನು ಬಳಸಿಕೊಂಡು ಸುಮಾರು 90 ಮಂದಿ 5 ದಿನಗಳಲ್ಲಿ ನಿರಂತರವಾಗಿ ಅಲಂಕಾರ ನಡೆಸಿದ್ದಾರೆ. ಹೊಸ ವರ್ಷದ ಪ್ರಯುಕ್ತ ನಾಡಿನಾದ್ಯಂತ ಲಕ್ಷೋಪ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದು, ಈ ಬಾರಿ ಜ.1 ರವಿವಾರ ಬಂದಿದ್ದರಿಂದ ರಜೆಯಲ್ಲಿ ಹೆಚ್ಚಿನ ಭಕ್ತರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಪ್ರಸಕ್ತ ಕಳೆದ ಎರಡು ಮೂರು ವರ್ಷ ಕೊರೊನಾ ಬಾಧಿಸಿದ್ದರಿಂದ ಶಾಲಾ ಮಕ್ಕಳ ಪ್ರವಾಸಕ್ಕೆ ಅಡ್ಡಿಯಾಗಿತ್ತು. ಪ್ರಸಕ್ತ ವರ್ಷ ರಾಜ್ಯದ ನಾನಾ ಕಡೆಗಳಿಂದ ಶಾಲಾ ಮಕ್ಕಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿರುವುದರಿಂದ ಪ್ರತಿನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೊಸ ವರ್ಷಾಚರಣೆ ಸಮಯದಲ್ಲಿ ಭಕ್ತರು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲು ಆಗಮಿಸುತ್ತಿದ್ದು ನಾಡಿನ ಜನತೆಗೆ ಪೂಜ್ಯರು ಶುಭ ಕೋರಿದ್ದಾರೆ.