Advertisement

ಧರ್ಮಸ್ಥಳ: ನಾಳೆ ಶಿವರಾತ್ರಿ ಜಾಗರಣೆ: ಕ್ಷೇತ್ರಕ್ಕೆ ಬರುತ್ತಿದ್ದಾರೆ 50ಸಾವಿರ ಪಾದಯಾತ್ರಿಗಳು

11:43 PM Feb 16, 2023 | Team Udayavani |

ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 18ರಂದು ನಡೆಯುವ ಶಿವರಾತ್ರಿ ಆಚರಣೆಗೆ ನಾಡಿನ ವಿವಿಧೆಡೆಯಿಂದ 50 ಸಾವಿರಕ್ಕೂ ಅಧಿಕ ಪಾದಯಾತ್ರಿಗಳ ಸಹಿತ ಲಕ್ಷಕ್ಕೂ ಅಧಿಕ ಭಕ್ತರು ಸೇರುವುದರಿಂದ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

Advertisement

ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಭದ್ರಾವತಿ, ಹಾಸನ, ದಾವಣಗೆರೆ ಸಹಿತ ನಾನಾ ಊರುಗಳಿಂದ ಪ್ರತೀ ವರ್ಷದಂತೆ ಅನೇಕ ಪಾದಯಾತ್ರಿಗಳ ಸಂಘಟನೆಗಳ ಮೂಲಕ ಭಕ್ತರು ಶಿವನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ.

50 ಸಾವಿರ ಪಾದಯಾತ್ರಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಅವರ ಮಾಹಿತಿಗಾಗಿ ಚಾರ್ಮಾಡಿ ಹಾಗೂ ಶಿರಾಡಿ ಹೆದ್ದಾರಿಯ ಇಕ್ಕೆಲಗಳಲ್ಲಿ 55 ಕಡೆ ಕ್ಷೇತ್ರದಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪಾದಯಾತ್ರೆಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ, ಸ್ವತ್ಛತೆ ಕಾಪಾಡುವಂತೆ ನಿರ್ದೇಶನ ನೀಡಲಾಗಿದೆ.

ವಸತಿ ವ್ಯವಸ್ಥೆ
ಉಜಿರೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಂಗಣ, ಅನ್ನಪೂರ್ಣ ಛತ್ರದ ಹಿಂಭಾಗ, ಗಂಗೋತ್ರಿ, ಸಾಕೇತ ವಸತಿ ಛತ್ರಗಳಲ್ಲಿ ಪಾದಯಾತ್ರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಸ್ವಾಗತ ಕಾರ್ಯಾಲಯ ಹಾಗೂ ಮಾಹಿತಿ ಕಾರ್ಯಾಲಯ ತೆರೆದಿದ್ದು, ಪಾದಯಾತ್ರಿಗಳ ಸ್ವಾಗತ ಮತ್ತು ಆತಿಥ್ಯಕ್ಕೆ ಸ್ವಯಂಸೇವಕರ ತಂಡ ಸಜ್ಜಾಗಿದೆ. ಎಸ್‌ಡಿಎಂ ಆಸ್ಪತ್ರೆಯ ಆಶ್ರಯದಲ್ಲಿ 15 ಮಂದಿ ವೈದ್ಯರ ತಂಡ ಪಾದಯಾತ್ರಿಗಳ ಉಚಿತ ಸೇವೆಗೆ ಸಿದ್ಧರಾಗಿದ್ದಾರೆ.

ಜಾಗರಣೆ, ಉಪವಾಸ
ಫೆ. 18ರಂದು ಸಂಜೆ 6ಕ್ಕೆ ಧರ್ಮಸ್ಥಳದಲ್ಲಿ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿಯಿಂದ ಮುಂಜಾನೆ ವರೆಗೆ ಭಕ್ತರು ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ಮಾಡಲಿದ್ದಾರೆ.

Advertisement

ರಾತ್ರಿಯಿಡೀ ದರ್ಶನ
ದೇವಸ್ಥಾನದಲ್ಲಿ ಸಂಜೆ 6ರಿಂದ ನಾಲ್ಕು ಜಾವಗಳಲ್ಲಿ ಅಹೋರಾತ್ರಿ ಭಕ್ತರು ಶತರುದ್ರಾಭಿಷೇಕ, ಎಳನೀರು ಅಭಿಷೇಕ ಸೇವೆ ನಡೆಯಲಿದೆ. ರಾತ್ರಿಯಿಡೀ ದೇವರ ದರ್ಶನಕ್ಕೆ ಅವಕಾಶವಿದ್ದು, ರವಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.

ಬಸ್‌ ಸೌಲಭ್ಯ
ಶಿವರಾತ್ರಿಗೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತರು ಬರುವ ನಿರೀಕ್ಷೆ ಇದ್ದು, ಕೆಎಸ್ಸಾರ್ಟಿಸಿ ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ. ಶಿವರಾತ್ರಿ ದಿನ ಅನ್ನಪೂರ್ಣ ಛತ್ರದ ಬದಲು ಛತ್ರದ ಹಿಂಭಾಗದ ತೆರೆದ ಪ್ರಾಂಗಣದಲ್ಲಿ ಭಕ್ತರಿಂದಲೇ ಸಾರ್ವಜನಿಕ ಅನ್ನದಾಸೋಹ ನಡೆಯುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next