Advertisement

ಹೆ.ಕ.ಕ್ಕೆ ಧರ್ಮಸಿಂಗ್‌ ಕೊಡುಗೆ ಸ್ಮರಣೀಯ: ಖಂಡ್ರೆ

12:11 PM Dec 06, 2017 | |

ಬೀದರ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಈ ಭಾಗಕ್ಕೆ ನೀಡಿದ ಕೊಡುಗೆಯನ್ನು ಮರೆಯಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಮನ್ನಳ್ಳಿ ಗ್ರಾಮದಲ್ಲಿ ದಿ| ಎನ್‌. ಧರ್ಮಸಿಂಗ್‌ ಅವರ 81ನೇ ಜನ್ಮದಿನದ ಅಂಗವಾಗಿ ಯುವ ಮುಖಂಡ ಚಂದ್ರಸಿಂಗ್‌ ನೇತೃತ್ವದಲ್ಲಿ ಆಯೋಜಿಸಿರುವ ಡಾ| ಎನ್‌. ಧರ್ಮಸಿಂಗ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಸಿಂಗ್‌ ಅವರು ಮುಖ್ಯಮಂತ್ರಿ, ಸಚಿವ ಹಾಗೂ ಸಂಸದರಾಗಿ ರಾಜ್ಯದ, ಅದರಲ್ಲೂ ವಿಶೇಷವಾಗಿ ಹೈ.ಕ. ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದರು. ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತಂದು ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ ಶ್ರೇಯ ಧರ್ಮಸಿಂಗ್‌ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ ಎಂದರು.

ಧರ್ಮಸಿಂಗ್‌ ಅವರ ಜನ್ಮದಿನದ ಪ್ರಯುಕ್ತ ಕ್ರಿಕೆಟ್‌ ಟೂರ್ನಿ ಸಂಘಟಿಸಿರುವುದು ಸಂತಸದ ಸಂಗತಿಯಾಗಿದೆ. ಕ್ರಿಕೆಟ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕ್ರೀಡೆಯಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ ಕ್ರಿಕೆಟ್‌
ಆಟಗಾರರಿದ್ದಾರೆ. ಟೂರ್ನಿಯಲ್ಲಿ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 90 ತಂಡಗಳು ಪಾಲ್ಗೊಂಡಿರುವುದು ಕ್ರೀಡಾ ಸ್ಪೂರ್ತಿಯ ಸಂಕೇತವಾಗಿದೆ. ಚಂದ್ರಸಿಂಗ್‌ ಅವರು ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು. ಕಳೆದ ವರ್ಷ ಟೂರ್ನಿ ನಡೆಸಿದ್ದ ಸಂದರ್ಭದಲ್ಲಿ ಎನ್‌. ಧರ್ಮಸಿಂಗ್‌ ಇದ್ದರು. ಈಗ ಅವರು ನಮ್ಮ ಮಧ್ಯೆ ಇಲ್ಲ. ಆದರೆ, ಅವರ ಆದರ್ಶಗಳು ನಮ್ಮೊಂದಿಗೆ ಇವೆ ಎಂದು ಹೇಳಿದರು. 

ಯುವ ಮುಖಂಡ ಚಂದ್ರಸಿಂಗ್‌ ಮಾತನಾಡಿ, ಕಳೆದ ವರ್ಷದಿಂದ ಧರ್ಮಸಿಂಗ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಆಯೋಜಿಸುತ್ತ ಬರಲಾಗಿದೆ. ಕಳೆದ ವರ್ಷ 80 ತಂಡಗಳು ಭಾಗವಹಿಸಿದ್ದರೆ, ಈ ವರ್ಷ 90 ತಂಡಗಳು ಪಾಲ್ಗೊಂಡಿವೆ. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿದೆ. ಡಿ. 21ರ ವರೆಗೆ ಟೂರ್ನಿ ನಡೆಯಲಿದೆ ಎಂದು ಹೇಳಿದರು. 

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌, ಎಂಎಲ್‌ಸಿ ವಿಜಯಸಿಂಗ್‌, ಶಾಸಕ ಅಜಯಸಿಂಗ್‌, ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣರಾವ್‌ ಮಾತನಾಡಿದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ
ಪ್ರಕಾಶ ಪಾಟೀಲ, ಅಭಿಷೇಕ ಪಾಟೀಲ ಮಾಜಿ ಎಂಎಲ್‌ಸಿ ಕಾಜಿ ಅರಶದ್‌ ಅಲಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಿಡಿಎ ಅಧ್ಯಕ್ಷ ಸಂಜಯ ಜಾಗಿರದಾರ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರು, ಜಿಪಂ ಸದಸ್ಯರಾದ
ಅಫ್ರೋಜ್‌ಖಾನ್‌, ಫಿರೋಜ್‌ಖಾನ್‌, ಮಂಜುಳಾ ಸ್ವಾಮಿ, ಜಯಶ್ರೀ ರಾಠೊಡ್‌, ಮುಖಂಡರಾದ ಮುರಳಿಧರ ಎಕಲಾರಕರ್‌, ಪಂಡಿತ ಚಿದ್ರಿ, ಅಬ್ದುಲ್‌ ಮನ್ನಾನ್‌ ಸೇಠ್ಠ್, ಫಹೀಮ್‌ ಪಟೇಲ, ಗೌಸೊದ್ದಿನ್‌ ಕಮಠಾಣ, ರುಕ್ಮಾರೆಡ್ಡಿ ಪಾಟೀಲ ಮತ್ತಿತರರು ಇದ್ದರು. ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next