Advertisement

ಧ‌ರ್ಮಸ್ಥಳ : ಹೊಸಕಟ್ಟೆ ಉತ್ಸವ ಸಂಪನ್ನ

01:16 AM Nov 24, 2019 | mahesh |

ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದ ಮೊದಲ ದಿನವಾದ ಶುಕ್ರವಾರ ರಾತ್ರಿ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನದೊಂದಿಗೆ ನಡೆಯಿತು.

Advertisement

ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು, ನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ದೇವರ ಗುಡಿಯೊಳಗೆ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಮೆರವಣಿಗೆಯೊಂದಿಗೆ ವಸಂತ ಮಹಲ್‌ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು.

ಹೊಸಕಟ್ಟೆಯಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಪೂಜೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ದೇಗುಲದ ಆನೆ ಸ್ವಾಮಿಗೆ ಚಾಮರ ಬೀಸಿತು. ಉತ್ಸವದಲ್ಲಿ ಸ್ವಾಮಿಗೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಮೆರುಗನ್ನು ನೀಡುವುದರೊಂದಿಗೆ ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು. ಸಾವಿರಾರು ಭಕ್ತರು ನೆರೆದಿದ್ದರು.

ಹೊಸಕಟ್ಟೆ ಉತ್ಸವದಂದು ಭ‌ಕ್ತರ ಹರಕೆಯಂತೆ ಬೆಳ್ಳಿ ರಥ ಎಳೆಯುವುದು ವಿಶೇಷವಾಗಿತ್ತು. ಬಳಿಕ ದೇವರ ಮೂರ್ತಿಗೆ ಕೊನೆಯ ಮಂಗಳಾರತಿ ಬೆಳಗಿ ದೇಗುಲದೊಳಗೆ ಕೊಂಡೊಯ್ಯಲಾಯಿತು.

ಉತ್ಸವದ ಸಂದರ್ಭದಲ್ಲಿ ದೇಗುಲದಿಂದ ವಸಂತ ಮಹಲ್‌ನವರೆಗೆ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹಣತೆಗಳನ್ನು ಬೆಳಗಿದರು.

Advertisement

ಇಂದು ಲಲಿತಕಲಾಗೋಷ್ಠಿ
ನ. 24ರಂದು ಸಂಜೆ 3ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಸಂಜೆ 5.30ರಿಂದ ನೃತ್ಯ ಕಾರ್ಯಕ್ರಮ, ಸಂಜೆ 7ರಿಂದ ಸಂಗೀತ ಮೇಳ, ರಾತ್ರಿ 8.30ರಿಂದ ನೃತ್ಯ ವೈವಿಧ್ಯ ರಂಜಿಸಲಿದೆ.

ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7ರಿಂದ ಮಾತನಾಡುವ ಗೊಂಬೆ ಹಾಗೂ ಜಾದೂ, 8.30ರಿಂದ ಭರತನಾಟ್ಯ, ರಾತ್ರಿ 9ರಿಂದ ಲಲಿತೋದ್ಯಾನ ಉತ್ಸವ ನೆರವೇರಲಿದೆ.

ವೈಭವದ ಕೆರೆ ಕಟ್ಟೆ ಉತ್ಸವ
ಲಕ್ಷದೀಪೋತ್ಸವ ಪ್ರಯುಕ್ತ ಶನಿವಾರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕೆರೆಕಟ್ಟೆ ಉತ್ಸವ ವಿಜೃಂಭಣೆಯಿಂದ ನೆರವೇರಿತು. ದೇಗುಲದಲ್ಲಿ ರಾತ್ರಿ 9ಗಂಟೆಗೆ ನಿತ್ಯ ಪೂಜಾ ಕೈಂಕರ್ಯ ನಡೆಯಿತು.
ಬಳಿಕ ದೇಗುಲದ ಪ್ರಧಾನ ಅರ್ಚಕರು ಸ್ವಾಮಿಯನ್ನು ಹೊತ್ತು ದೇವರ ಗುಡಿಯೊಳಗೆ 16 ಸುತ್ತು ಪ್ರದಕ್ಷಿಣೆ ಬಂದರು, ಅನಂತರ ದೇವಸ್ಥಾನದ ಮುಂಭಾಗವಿರುವ ಕೆರೆಯ ಬಳಿ ಇರುವ ದೇವರ ಕಟ್ಟೆಯಲ್ಲಿ ಇರಿಸಿ ಧೂಪ ದೀಪ, ನೈವೇದ್ಯಗಳಿಂದ ಪೂಜಿಸಲಾಯಿತು.

ಸೇವೆಯ ರೂಪವಾಗಿ ಕೆರೆಕಟ್ಟೆಯಿಂದ ಬಳಿಕ ನಡೆದ ಉತ್ಸವಕ್ಕೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಮೆರುಗನ್ನು ನೀಡಿದವು. ಶ್ರೀದೇವರನ್ನು ದೇಗುಲದ ಮುಂಭಾಗಕ್ಕೆ ಕರೆತಂದು ಬೆಳ್ಳಿ ರಥದ ಪಲ್ಲಕ್ಕಿಯಲ್ಲಿರಿಸಿ ಪ್ರದಕ್ಷಿಣೆ ನಡೆಸಿ ಒಳಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next