ಧರ್ಮಪುರ: ರಾಜಕಾರಣಿಗಳು ಹಿರಿಯೂರು ತಾಲೂಕಿನ ಜನರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಧರ್ಮಪುರ ಫಿಡರ್ ಚಾನಲ್ ಹಾಗೂ ತಾಲೂಕು ಕೇಂದ್ರವಾಗಿಸಲು ಹೋರಾಟ ಮಾಡುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಕರೆ ನೀಡಿದರು.
ಫಿಡರ್ ಚಾನಲ್ ಹಾಗೂ ತಾಲೂಕು ಕೇಂದ್ರಕ್ಕೆ ಒತ್ತಾಯಿಸಿ ಸೋಮವಾರ ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ಮುಖ್ಯಮಂತ್ರಿ, ಶಾಸಕರು, ಸಚಿವರು ಹುಸಿ ಭರವಸೆ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಧರ್ಮಪುರವನ್ನು ಕೈಬಿಡಲಾಗಿದೆ. ಪಕ್ಕದ ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ನೀರು ತಂದರೆ ನಮ್ಮ ಅಭ್ಯಂತರವೇನಿಲ್ಲ. ಏಕೆಂದರೆ ನೀರಿಲ್ಲದೆ ಈ ಭಾಗದ ಎಷ್ಟೋ ಕೆರೆಗಳು ಬತ್ತಿ ಹೋಗಿವೆ. ಸರ್ಕಾರಗಳು ನೀರಾವರಿ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಆದರೆ ಈ ವಿಷಯದಲ್ಲಿ ಧರ್ಮಪುರ ಶಾಪಗ್ರಸ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರೈತರಿಗೆ ಹೆಚ್ಚೆಚ್ಚು ಸೌಲಭ್ಯ ಕಲ್ಪಿಸಿದರೆ ದೇಶದ ಅಭಿವೃದ್ಧಿ ಸಾಧ್ಯ. ಏಕರೂಪ ಜಲನೀತಿ ಜಾರಿಗೆ ಬಂದಲ್ಲಿ ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳು ಸ್ಪಲ್ಪವಾದರೂ ಬಗೆಹರಿಯಬಹುದು. ಬೆಳೆಗಳಿಗೆ ಸಮರ್ಪಕ ಬೆಂಬಲ ನೀಡಿದಲ್ಲಿ ರೈತರು ನೆಮ್ಮದಿಯಿಂದ ಇರಬಹುದು ಎಂದು ಅಭಿಪ್ರಾಯಪಟ್ಟರು.
ಧರ್ಮಪುರ ಕೆರೆಗೆ ನೀರು ಬಂದರೆ ಈ ಹೋಬಳಿಯ 46 ಹಳ್ಳಿಗಳ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಧರ್ಮಪುರ ಕೆರೆಗೆ ಫಿಡರ್ ಚಾನಲ್ ಮೂಲಕ ನೀರು ಹರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಗುಡುಗಿದರು. ರೈತಸಂಘದ ರಾಜ್ಯಾಧ್ಯಕ್ಷ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಹೊರಕೇರಪ್ಪ, ಹೋಬಳಿ ಘಟಕದ ಕಾರ್ಯದರ್ಶಿ ಎಚ್. ಎಲ್. ಗುಣ್ಣಯ್ಯ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಸಿ. ಶಿವು ಯಾದವ್, ಜಿಪಂ ಸದಸ್ಯೆ ತ್ರಿವೇಣಿ ಶಿವಪ್ರಸಾದ್ ಗೌಡ, ಪ್ರೊ| ಎಂ.ಜಿ. ಗೋವಿಂದಯ್ಯ, ಜಿಪಂ ಮಾಜಿ ಅಧ್ಯಕ್ಷ ರಘುನಾಥ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಹಾರ್ಡ್‌ವೇರ್ ಶಿವಣ್ಣ, ಪುಟ್ಟಿರಮ್ಮ, ಬಸವಾನಂದ, ಕೆ.ದೊಡ್ಡಯ್ಯ, ಸೀತಾರಾಮಯ್ಯ, ಎಂ.ಕೆ. ಗೌಡ, ವೀರೇಂದ್ರ ಪಾಟೀಲ್, ಯಲ್ಲಪ್ಪ, ಸಂತೋಷ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.