ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರು ಈಗ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸಬರೇ ಸೇರಿ ನಿರ್ಮಿಸುತ್ತಿರುವ “ರಾಜಯೋಗ’ ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.
ಚಿತ್ರಕ್ಕೆ “ಶ್ರೀ ರಾಮರತ್ನ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಆರು ಮಂದಿ ನಿರ್ಮಾಪಕರು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಲಿಂಗರಾಜ ಉಚ್ಚಂಗಿ ದುರ್ಗ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚಿಗೆ ಚಿತ್ರತಂಡ ತನ್ನ ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸಿದ್ದು, ನಿರ್ದೇಶಕ ಸತ್ಯ ಪ್ರಕಾಶ್ ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಕನ್ನಡ ಕಿರುತೆರೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಲಿಂಗರಾಜ ಉಚ್ಚಂಗಿ ದುರ್ಗ “ರಾಜಯೋಗ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
Related Articles
ನಿರ್ದೇಶಕ ಲಿಂಗರಾಜು ಮಾತನಾಡಿ, “ನಮ್ಮ ರಾಜಯೋಗ ಚಿತ್ರದ ಮೊದಲ ಶೆಡ್ನೂಲ್ ಚಿತ್ರೀಕರಣ ಮುಗಿಸಿ ಕೊಂಡಿದ್ದೇವೆ. ಇನ್ನು 30 ದಿನಗಳ ಶೂಟಿಂಗ್ ಬಾಕಿಯಿದೆ. ಮೂಢನಂಬಿಕೆಗಳನ್ನು ನಂಬದೇ ನಾವು ಮಾಡುವ ಕೆಲಸದಲ್ಲಿ ಭಗವಂತನನ್ನು ನೆನೆಯುತ್ತಾ ಪ್ರಾಮಾಣಿಕವಾಗಿ ದುಡಿದರೆ ರಾಜಯೋಗ ಬಂದೇ ಬರುತ್ತದೆ ಎಂಬುದೇ ಚಿತ್ರದ ಕಥಾವಸ್ತು. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ ಇದಾದ್ದರಿಂದ ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದ್ದೇವೆ. ಒಂದು ಕೌಟುಂಬಿಕ ಚಿತ್ರ ಇದಾಗಿದ್ದು ನಾಯಕ, ನಾಯಕನ ತಂದೆ ಅವರ ಕುಟುಂಬದ ಸುತ್ತ ಚಿತ್ರ ಸಾಗುತ್ತದೆ. ಚಿತ್ರದಲ್ಲಿ ಕಾಮಿಡಿ ಜೊತೆಗೆ ಗಂಭೀರ ವಿಷಯಗಳನ್ನು ಹೇಳಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು.
ನಟ ಧರ್ಮಣ್ಣ ಮಾತನಾಡಿ, “ಚಿತ್ರದ ನಿಜವಾದ ಹೀರೋ ಇಬ್ಬರು. ಒಂದು ಕಥೆ, ಇನ್ನೊಬ್ಬರು ನಿರ್ದೇಶಕರು. ರಾಮ ರಾಮಾರೇ ನಂತರ ನಾಯಕನ ಪಾತ್ರಕ್ಕೆ ಸಾಕಷ್ಟು ಕಥೆ ಕೇಳಿದ್ದೆ. ಆದರೆ ಲವ್ ಮಾಡುವ ಪಾತ್ರ ನನಗೆ ಆಗಲ್ಲ. ಇನ್ನು ಫೈಟ್ ಮಾಡಿದರೆ ನಗುವವರೇ ಹೆಚ್ಚು. ಹಾಗಾಗಿ ನಾನು ಯಾವ ಕಥೆಯನ್ನು ಒಪ್ಪಿಕೊಂಡಿರಲಿಲ್ಲ. ಈ ಚಿತ್ರದ ಕಥೆ ಕೇಳಿ ನನ್ನ ಆಪ್ತರಲ್ಲಿ ಚರ್ಚಿಸಿ ನಂತರ ನಟನೆಗೆ ಸಜ್ಜಾದೆ. ಚಿತ್ರದಲ್ಲಿ ಕಾಮಿಡಿ, ಎಮೋಷನ್ಸ್ ಎರಡೂ ಇದೆ. ಇನ್ನೇನು ಎಮೋಷನಲ್ ಆಗುತ್ತೀರಿ ಅನ್ನುವಾಗ ನಗುತ್ತೀರಿ. ಒಂದು ಒಳ್ಳೆ ಕಥೆ, ಸಂದೇಶವಿರುವ ಸಿನಿಮಾ’ ಎಂದರು.
ಚಿತ್ರದ ನಾಯಕಿ ಹಾಗೂ ಮುಖ್ಯ ಪಾತ್ರಧಾರಿಗಳು, ತಂತ್ರಜ್ಞರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರಕ್ಕೆ ವಿಷ್ಣು ಪ್ರಸಾದ್.ಪಿ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಅಕ್ಷಯ್ ರಿಷಭ್ ಸಂಗೀತ, ಚಿಕ್ಕ ನಾಗರಾಜು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಚಿತ್ರದ ನಾಯಕ – ನಾಯಕಿಯರಾಗಿ ಧರ್ಮಣ್ಣ ಕಡೂರು, ನಿರೀಕ್ಷ ರಾವ್ ಅಭಿನಯಿಸಿದ್ದು, ನಾಗೇಂದ್ರ ಶಾನ್, ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸ್ , ದಿಕ್ಷೀತ್ ಕೃಷ್ಣ, ಲಿಂಗರಾಜ್ ಕೆ.ಎನ್, ರೋಹಿಣಿ, ಉಷಾರವಿಶಂಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.