ಉಡುಪಿ: “ಕೊಳಲನೂದುತ ಬಂದ… ಗೋಪಿಯ ಕಂದ…’ ಎಂದು ಭಾಗವತರು ಹಾಡುತ್ತಿದ್ದಂತೆ ಪೇಜಾವರ ಶ್ರೀಗಳು ಸಹಿತ ಮಹಾನ್ ಸಂತ, ಮಹಂತರ ಮುಂದೆ “ಕೃಷ್ಣ-ಸುಧಾಮ’ರು ಲಯಬದ್ಧ ಹೆಜ್ಜೆ ಹಾಕುತ್ತಾ ವೇದಿಕೆಯತ್ತ ಆಗಮಿಸಿದರು! ಸುಧಾಮ ತನ್ನ ಕೈಯಲ್ಲಿದ್ದ “ಪಾಥೇಯ’ವನ್ನು ಶ್ರೀಕೃಷ್ಣ ನಿಗೆ ಸಮರ್ಪಿಸಿದ. ಶ್ರೀಕೃಷ್ಣ ಅದನ್ನು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿಯವರ ಕೈಗಿತ್ತ. ಸ್ವಾಮೀಜಿಯವರು “ಪಾಥೇಯ’ವನ್ನು ಅನಾವರಣಗೊಳಿಸಿದರು. ಈ ವೇಳೆ ಶಂಖ, ಜಾಗಟೆಗಳ ನಾದ ನೆರೆದಿದ್ದವರ ಸಂಪೂರ್ಣ ಗಮನ ವೇದಿಕೆಯತ್ತ ಕೇಂದ್ರೀಕೃತವಾಗುವಂತೆ ಮಾಡಿತು.
“ಉಡುಪಿ ಧರ್ಮ ಸಂಸದ್ 2017’ರ ಪ್ರಯುಕ್ತ ವಿಶ್ವಹಿಂದೂ ಪರಿಷತ್‌ನಿಂದ ಹೊರತರಲಾಗಿರುವ ಧರ್ಮ-ಜ್ಞಾನ- ಮೌಲ್ಯ ಸಮಷ್ಟಿ ಸಂಪದ “ಪಾಥೇಯ’ದ ಲೋಕಾರ್ಪಣೆ ಶುಕ್ರವಾರ ಧರ್ಮ ಸಂಸದ್‌ನ ಉದ್ಘಾಟನಾ ವೇದಿಕೆಯಲ್ಲಿ ವೈಭವದಿಂದ ಜರಗಿತು.
ಲೋಕದೊಡೆಯ ಶ್ರೀಕೃಷ್ಣನ ಚರಣಾರ ವಿಂದಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಾದ ಸುಧಾಮ “ಪಾಥೇಯ’ವನ್ನು ಅರ್ಪಿಸುತ್ತಾನೆ ಎಂದು ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ ಅವರು ಹೇಳುತ್ತಿದ್ದಂತೆಯೇ ಯಕ್ಷಗಾನ ವೇಷಧಾರಿ ಕೃಷ್ಣ ಮತ್ತು ಸುಧಾಮರು ವೇದಿಕೆಗೆ ಬಂದು ಕೆ.ಜೆ. ಗಣೇಶ್ ಅವರ ಹಿಮ್ಮೇಳಕ್ಕೆ ಹೆಜ್ಜೆ ಹಾಕಿ ದರು. ಅನಂತರ ಸುಧಾಮನು ಕೃಷ್ಣನಿಗೆ “ಪಾಥೇಯ’ವನ್ನು ಸಮರ್ಪಿಸಿದ. ಅದನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಕೆ.ಜಿ. ದೀಪ್ತ ಶ್ರೀಕೃಷ್ಣ ಹಾಗೂ ಅರವಿಂದ ಅವರು ಸುಧಾಮನ ಪಾತ್ರ ನಿರ್ವಹಿಸಿದರು.
ಧರ್ಮ ಜಾಗೃತಿಯಾಗಲಿ
ಸ್ಮರಣಸಂಚಿಕೆ ಲೋಕಾರ್ಪಣೆಗೊಳಿಸಿದ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, “ದೇಶದ ಶೇ. 60 ರಷ್ಟು ಇರುವ ಯುವಜನಾಂಗಕ್ಕೆ ಹಿಂದೂ ಧರ್ಮದ ಮೌಲ್ಯಗಳ ಮಹತ್ವ ತಿಳಿಸಬೇಕು. ಅವರಲ್ಲಿ ಧರ್ಮ ಜಾಗೃತಿ ಯಾಗುವಂತೆ ಮಾಡಬೇಕು. ಆಧುನಿಕ ಶಿಕ್ಷಣ ನೀಡಬೇಕು. ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ನೀಡಿದ ಹಿಂದೂ ಧರ್ಮದ ಸಾರವನ್ನು ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಧರ್ಮಸಂಸದ್ ಬೆಳಕು ಚೆಲ್ಲಲಿ. ಸ್ಮರಣ ಸಂಚಿಕೆಯ ಆಶಯ ಕೂಡ ಇದೇ ಆಗಿರುವುದು ಅರ್ಥಪೂರ್ಣ’ ಎಂದು ಹೇಳಿದರು.