ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದು ಖಚಿತ. ಧರ್ಮ ಸಂಸದ್‌ನಲ್ಲಿ ಭಾಗವಹಿಸಿದ ಎಲ್ಲ ಸಾಧುಸಂತರ ನಿಲುವು ಒಂದೇ ಆಗಿದೆ. ಈ ವಿಚಾರದಲ್ಲಿ ಚೌಕಾಶಿಯ ಪ್ರಶ್ನೆಯೇ ಇಲ್ಲ. ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದರು.
ಉಡುಪಿಯಲ್ಲಿ ಶುಕ್ರವಾರ ಪ್ರಾರಂಭಗೊಂಡ ಧರ್ಮ ಸಂಸದ್‌ನಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನಡೆದ ಗೋಷ್ಠಿಯ ಅನಂತರ ಜತೆ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಅವರೊಂದಿಗೆೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಎಲ್ಲ ಮತಗಳ ಸಂತರು ನಿರ್ಣಯ ಮಂಡಿಸಿದ್ದಾರೆ. ರಾಮ ಮಂದಿರ ನಿರ್ಮಿಸುವುದು ಪ್ರತಿಯೊಬ್ಬರ ಆಗ್ರಹವಾಗಿದೆ. ಅದು ದೇಶದ ಕೋಟ್ಯಂತರ ಭಕ್ತರ ಬೇಡಿಕೆಯೂ ಹೌದು. ಮಂದಿರ ನಿರ್ಮಾಣದ ನಕ್ಷೆ ಸಿದ್ಧ ಗೊಂಡಿದೆ. ಮುಂದಿನ ವರ್ಷ ನಕ್ಷೆಯ ಪ್ರಕಾರ ಮಂದಿರ ನಿರ್ಮಾಣದ ಕಾರ್ಯ ಪ್ರಾರಂಭ ವಾಗಲಿದೆ. ಆ ಜಾಗದಲ್ಲಿ ಮಂದಿರ ಹೊರತು ಬೇರೇನೂ ಆಗಲು ಬಿಡುವುದಿಲ್ಲ ಎಂದರು.
ಸಾಧುಸಂತರ ಒಮ್ಮತದ ನಿಲುವು ಅಂತಿಮ: ಮಂದಿರಕ್ಕೆ ಸಂಬಂಧಿಸಿ ರವಿಶಂಕರ್ ಗುರೂಜಿ ಅವರ ಸಂಧಾನ ಮಾತುಕತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುರೂಜಿ ಅವರ ನಿಲುವಿಗೂ ನಮ್ಮ ನಿಲುವಿಗೂ ಸಂಬಂಧವಿಲ್ಲ. ಮಂದಿರ ನಿರ್ಮಿಸುವ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಅನೇಕ ಸಾಧುಸಂತರ ಒಮ್ಮತದ ನಿರ್ಣಯವೇ ಅಂತಿಮ. ಸ್ವಯಂ ಪ್ರೇರಣೆಯಿಂದ ಯಾರೂ ಕೂಡ ಅಭಿಪ್ರಾಯ ತಿಳಿಸಬಹುದು. ಸಂಧಾನ ನಡೆಸಲು ಅದು ಸಾಮಾನ್ಯ ವಿಷಯವಲ್ಲ. ಎರಡು ಧರ್ಮಗಳಿಗೆ ಸಂಬಂಧಿಸಿದ ದೊಡ್ಡ ವಿಚಾರ. ಆದರೆ ಅವರ ಅಭಿಪ್ರಾಯದಲ್ಲಿ ನಮಗೆ ಅಸಮಾಧಾನವಿಲ್ಲ. ಅವರ ಬಗ್ಗೆ ಅತ್ಯಂತ ಗೌರವವಿದೆ ಎಂದು ಹೇಳಿದರು.
ಪರ್ಯಾಯ ಶ್ರೀ ಪೇಜಾವರ ಶ್ರೀಗಳು ಕೂಡ ಮಂದಿರ ನಿರ್ಮಿಸುವ ಬಗ್ಗೆ ದಿಟ್ಟ ನಿಲುವು ವ್ಯಕ್ತಪಡಿಸಿದ್ದಾರೆ. 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ಶ್ರೀರಾಮ ಮಂದಿರದ ಕೀಲಿ ತೆಗೆಯುವ ಸಂಕಲ್ಪವೂ ಸಾಕಾರಗೊಂಡಿದೆ. ಈ ಬಾರಿಯೂ ಪೇಜಾವರ ಶ್ರೀಗಳು 2019ರ ಅಕ್ಟೋಬರ್‌ನಲ್ಲಿ ಮಂದಿರ ನಿರ್ಮಾಣದ ಕೆಲಸ ಪ್ರಾರಂಭವಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಅದು ನಿಜವಾಗಲಿದೆ. ಹೀಗಾಗಿ ಈ ವಿಚಾರದ ಸಂಬಂಧ ಹಿಂಜರಿಯುವ ಮಾತಿಲ್ಲ. ಸದ್ಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್ ತನ್ನ ಕೆಲಸ ಮಾಡಲಿ ಮುಂದಿನ ಕೆಲಸವನ್ನು ವಿಹಿಂಪ ಮಾಡಲಿದೆ. 1984ರ ನಿಲುವಿಗೆ ಬದ್ಧವಾಗಲಿದೆ ಎಂದು ತಿಳಿಸಿದರು. ಭಾರತ ಏಕತೆ ಹೊಂದಿರುವ ರಾಷ್ಟ್ರ. ಹಿಂದೂ ಧರ್ಮದ ವಿಚಾರಗಳು ಪ್ರತಿಯೊಂದು ಹಳ್ಳಿಗಳಿಗೂ ತಲುಪಬೇಕು. ಇದನ್ನು ಸಂತರು ಮಾಡಲಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾದ ಪೂರಕ ವಾತಾವರಣ ಕಂಡು ಬರುತ್ತಿದೆ. 2019 ರೊಳಗೆ ನಿರ್ಮಾಣ ಕಾರ್ಯ ಆರಂಭ ವಾಗಬಹುದು. ಹೀಗಾಗಿ ಇದು ಘೋಷಣೆ ಅಲ್ಲ, ಆಗುತ್ತದೆ ಎಂಬ ವಿಶ್ವಾಸವಿದೆ
– ಪೇಜಾವರಶ್ರೀ
ರಾಮ ಜನ್ಮಭೂಮಿಯಲ್ಲಿಯೇ ಧ್ವಜ ಊರುವೆವು. ಅದು ನಮ್ಮ ನಂಬಿಕೆ, ಅದು ನಮ್ಮ ಶ್ರದ್ಧೆ. ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳ ಸಮ್ಮುಖದಲ್ಲಿಯೇ ನಡೆಯುವಂತಾಗಲಿ.
– ಮೋಹನ್ ಭಾಗವತ್