ಪ್ರತಿಯೊಬ್ಬರು ತಾವು ಮಾಡಿದ ಕರ್ಮಗಳಿಗೆ ಫಲಾಫಲಗಳನ್ನು ಪಡೆಯಲೇ ಬೇಕು. ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯ ಫಲ, ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಮನುಷ್ಯ ಮಾಡಿದ ಈ ಕರ್ಮಗಳಿಗೆ ಫಲ ನೀಡೋದು ಯಾರು? ಯಾವ ಯಾವ ರೂಪದಲ್ಲಿ ಕರ್ಮಫಲ ಬೆನ್ನು ಹತ್ತುತ್ತದೆ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ಐ 1′ ಚಿತ್ರ ನೋಡಬಹುದು.
ಮೂವರು ಶ್ರೀಮಂತರ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸುವ ಅನಾಮಿಕ ವ್ಯಕ್ತಿಯೊಬ್ಬ ಮೂವರನ್ನೂ ನಿಗೂಢ ಜಾಗದಲ್ಲಿ ಬಂಧಿಸಿಡುತ್ತಾನೆ. ಸಾವು-ಬದುಕಿನ ಹೋರಾಟಕ್ಕೆ ಇಳಿಯುವ ಮೂವರೂ ತಾವು ಮಾಡಿರುವ ಪಾಪ-ಪುಣ್ಯ ಕಾರ್ಯಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾರೆ. ಅಂತಿಮವಾಗಿ ಯಾರ್ಯಾರಿಗೆ, ಏನೇನು ಶಿಕ್ಷೆ ಅನ್ನೋದೆ “ಐ 1′ ಚಿತ್ರದ ಕಥಾ ಹಂದರ.
ಮೇಲ್ನೋಟಕ್ಕೆ “ಐ 1′ ಚಿತ್ರದ ಕಥೆ ಸಾಮಾನ್ಯವಾಗಿ ಕಂಡರೂ, ಚಿತ್ರದ ನಿರೂಪಣೆ ಗಮನ ಸೆಳೆಯುತ್ತದೆ. ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಕೇವಲ ಒಂದೇ ಸ್ಥಳದಲ್ಲಿ ಚಿತ್ರವನ್ನು ಚಿತ್ರೀಕರಿಸಿ, ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ತಮಿಳಿನ ಜನಪ್ರಿಯ ಚಿತ್ರ “ಅನ್ನಿಯನ್’ನ ನೆರಳು ಚಿತ್ರದ ಅಲ್ಲಲ್ಲಿ ಕಂಡು ಬರುತ್ತದೆ ಅನ್ನೋದನ್ನ ಬಿಟ್ಟರೆ, ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಇಡೀ ಚಿತ್ರ ಕೇವಲ ಮೂರು ಪಾತ್ರದ ಸುತ್ತ ನಡೆಯುತ್ತದೆ. ಕಿಶೋರ್, ಧೀರಜ್ ಪ್ರಸಾದ್ ಹಾಗೂ ರಂಜನ್ ಎಂ.ಎಸ್.ಬಿ ಮೂವರು ಕೂಡ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದಂತೆ ಚಿತ್ರದ ಹಿನ್ನೆಲೆ ಸಂಗೀತ, ಶಬ್ದಗ್ರಹಣ ಕಾರ್ಯಗಳು ಚಿತ್ರಕ್ಕೆ ಮೆರುಗು ನೀಡಿವೆ. ಚಿತ್ರದಲ್ಲಿ ಆಗಾಗ್ಗೆ ಬರುವ ಜನಪದ ಹಾಡಿನ ತುಣುಕುಗಳು ಚಿತ್ರದ ಕಥೆಗೆ ಟ್ವಿಸ್ಟ್ ಕೊಡುತ್ತ ಹೋಗುತ್ತದೆ.
ವಿಬಿನ್ ಆರ್ ಸಂಗೀತ, ಶಿನೂಬ್ ಟಿ ಚಾಕೋ ಛಾಯಾಗ್ರಹಣ, ವಿಶಾಖ್ ರಾಜೇಂದ್ರನ್ ಸಂಕಲನ ಕಾರ್ಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ತೀರಾ ನಿರೀಕ್ಷೆ ಇಟ್ಟುಕೊಳ್ಳದೆ ಥಿಯೇಟರ್‌ಗೆ ಹೋಗುವ ಪ್ರೇಕ್ಷಕರಿಗೆ “ಐ 1′ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಅನಿರೀಕ್ಷಿತ ಮನರಂಜನೆ ನೀಡುವಂಥ ಚಿತ್ರ. ತೆರೆಯ ಮುಂದೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ “ಐ 1′ ಚಿತ್ರವನ್ನು ವಾರಾಂತ್ಯದಲ್ಲಿ ಒಮ್ಮೆ ನೋಡಲು ಅಡ್ಡಿ ಇಲ್ಲ.
ಚಿತ್ರ: ಐ-1
ನಿರ್ಮಾಣ: ಎಸ್.ಪಿ ಪಿಕ್ಚರ್ ಶೈಲಜಾ ಪ್ರಕಾಶ್
ನಿರ್ದೇಶನ: ಆರ್.ಎಸ್.ರಾಜಕುಮಾರ್
ತಾರಾಗಣ: ಕಿಶೋರ್, ಧೀರಜ್ ಪ್ರಸಾದ್ ಹಾಗೂ ರಂಜನ್ ಎಂ.ಎಸ್.ಬಿ ಮತ್ತಿತರರು.
* ಕಾರ್ತಿಕ್